ಅಕ್ರಮ ಜೂಜು ಅಡ್ಡೆ-ಕ್ರಿಕೆಟ್ ಬೆಟ್ಟಿಂಗ್ ನಿಲ್ಲಿಸುವಂತೆ ಪ್ರತಿಭಟನೆ; ಇಲ್ಲದಿದ್ದರೆ ಅನಿರ್ದಿಷ್ಟವಧಿ ಧರಣಿ ನಡೆಸುವುದಾಗಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಎಚ್ಚರಿಕೆ

Untitled design - 2024-11-04T143326.479
Published on

ಮಂಡ್ಯ; ಯಾವುದೇ ಒಂದು ಚಟವು ಚಟ್ಟ ಏರುವವರೆಗೂ ಬಿಡಲಾಗದು ಎಂಬ ಮಾತಿದೆ. ಇತ್ತೀಚೆಗೆ ಬೆಟ್ಟಿಂಗ್ ಚಟದಿಂದಾಗಿ ಸಾಲದಬಾಧೆಗೆ ಸಿಲುಕಿದ್ದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ತಾಲೂಕಿನ ಬೂದನೂರಿನ ಬಳಿ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ಕನ್ನಡಪರ ಸಂಘಟನೆಗಳ ಒಕ್ಕೂಟ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದು ಅಕ್ರಮ ಜೂಜು ಅಡ್ಡೆಗಳು, ಕ್ರಿಕೆಟ್ ಬೆಟ್ಟಿಂಗ್ ಹಾಗೂ ಹುಕ್ಕಾ ಸರಬರಾಜು ದಂಧೆಯನ್ನು ತಡೆಗಟ್ಟುವಂತೆ ಆಗ್ರಹಿಸಿದ್ದಾರೆ. ಬೆಟ್ಟಿಂಗ್​ ನಿಲ್ಲಿಸುವಂತೆ ಸೋಮವಾರ (ನವೆಂಬರ್​ 4) ಪ್ರತಿಭಟನೆ(Protest) ನಡೆಸಿದರು.

ಮಂಡ್ಯ ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಕ್ರಿಕೆಟ್ ಬೆಟ್ಟಿಂಗ್, ಗದ್ದೆ ಬಯಲುಗಳಲ್ಲಿ ಅಕ್ರಮವಾಗಿ ನಡೆಯುತ್ತಿರುವ ಇಸ್ಪೀಟು ಜೂಜುಗಳು ನಗರ ಹಾಗೂ ಗ್ರಾಮೀಣ ಭಾಗದ ಸಾವಿರಾರು ಯುವಕರನ್ನು ಲಕ್ಷಾಂತರ ರೂಪಾಯಿ ಸಾಲದ ಬಲೆಗೆ ಕೆಡವಿದೆ. ಮಂಡ್ಯ ತಾಲೂಕಿನ ಬೂದನೂರು ಗ್ರಾಮದ ತ್ಯಾಗ ಎಂಬ ಯುವಕ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಸುಲಭವಾಗಿ ತಳ್ಳಿ ಹಾಕಬಿಡಬಹುದಾದ ಪ್ರಕರಣ ಎನಿಸಿಬಹುದಾದರೂ ಆತ್ಮಹತ್ಯೆಗೆ ಕಾರಣವಾಗಿರುವ ಅಂಶಗಳು ನಾಗರಿಕ ಸಮಾಜದ ಸ್ವಾಸ್ಥ್ಯವನ್ನು ಒಳಗಿನಿಂದಲೆ ಹಾಳು ಮಾಡುವಂತವು.

ಈ ಅಡ್ಡೆಗಳಿಗೆ ರಾಜಕೀಯ ನಾಯಕರು ಹಾಗೂ ಪೊಲೀಸ್​​ ಇಲಾಖೆಯೇ ಮಹಾಪೋಷಕರು ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಈ ದಂಧೆಕೋರರಿಂದ ನಿಯಮಿತವಾದ ಕಪ್ಪ ಕಾಣಿಕೆ ಪೊಲೀಸ್​​ ಠಾಣೆಗಳಿಗೆ ಸಂದಾಯವಾಗುತ್ತಿರುವುದರಿಂದಲೆ ಸುಗಮವಾಗಿ ನಡೆಸಲು ಸಾಧ್ಯವಾಗಿದೆ ಎಂಬುದು ಜಿಲ್ಲೆಯ ಜನರ ಅಭಿಪ್ರಾಯವಾಗಿದೆ.

ಇದಲ್ಲದೆ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ವ್ಯಾಪಕವಾಗಿರುವ ಅಕ್ರಮ ಮದ್ಯ ಮಾರಾಟ ಹುಕ್ಕಾ ಸರಬರಾಜು ನಾಗರಿಕ ಸಮಾಜವನ್ನು ದಿಗ್ಭ್ರಮೆ ಹುಟ್ಟಿಸುವಂತೆ ಮಾಡಿದೆ. ಮಂಡ್ಯದ ರೈತರು ಕೃಷಿ ನಷ್ಟದ ಜತೆಗೆ ವ್ಯವಸ್ಥೆ ಸೃಷ್ಟಿಸಿರುವ ಈ ಹೊಡೆತದಿಂದಲೂ ಬಲಿಪಶುವಾಗುತ್ತಿದ್ದಾರೆ. ಈ ದಂಧೆಕೋರರ ಹಾವಳಿಯಿಂದ ರೈತಾಪಿಗಳು ತಮ್ಮ ವಂಶಪಾರಂಪರ್ಯ ಕೃಷಿ ಭೂಮಿ ಕಳೆದುಕೊಳ್ಳುವಂತ ಸ್ಥಿತಿ ಸೃಷ್ಟಿಯಾಗಿದೆ.

ಸಾವಿರಾರು ಯುವಕರು ಊರು ತೊರೆಯುವಂತ ಇಲ್ಲವೆ ಆತ್ಮಹತ್ಯೆಯ ದಾರಿ ಹಿಡಿಯುವಂತ ವಾತವರಣ ನಿರ್ಮಾಣವಾಗಿದೆ.

ನಾಗರಿಕರಿಗೆ ಆತ್ಮವಿಶ್ವಾಸ ತುಂಬಬೇಕಿರುವ ಇಲಾಖೆಯೇ ಅಪಾದಿತರ ಜತೆ ನಿಂತಿರುವುದು ನಾಚಿಕೆಗೇಡಿನ ಪರಮಾವಧಿಯಾಗಿದೆ.ಈ ಹಿನ್ನೆಲೆಯಲ್ಲಿ ಬೂದನೂರು ಘಟನೆಯಲ್ಲಿ ಪೊಲೀಸರ ವೈಫಲ್ಯದ ಕಾರಣಕ್ಕೆ ಗ್ರಾಮಾಂತರ ಠಾಣೆ ಆರಕ್ಷಕ ನಿರೀಕ್ಷಕರನ್ನು ಅಮಾನತ್ತು ಮಾಡಬೇಕು. ಈ ಮೂಲಕ ಬೆಟ್ಟಿಂಗ್ ಹಾಗೂ ಜುಜೂ ಮಾಫಿಯಾಕ್ಕೆ ಬಲವಾದ ಸಂದೇಶ ರವಾನಿಸಿ ನಾಗರಿಕರಲ್ಲಿ ಆತ್ಮವಿಶ್ವಾಸ ಮೂಡಿಸಬೇಕು.

ಬೆಟ್ಟಿಂಗ್ ದಂಧೆಕೋರರು ಹಾಗೂ ಗದ್ದೆ ಬಯಲು ಜೂಜುಕೋರರರನ್ನು ಮುಂದಿನ ಹದಿನೈದು ದಿನಗಳೊಳಗೆ ತಹಬದಿಗೆ ತರಬೇಕು. ತಪ್ಪಿದಲ್ಲಿ ಮಂಡ್ಯ ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳೊಗೂಡಿ ಅನಿರ್ದಿಷ್ಟವಧಿ ಧರಣಿ ಆರಂಭಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net