ತಮಿಳುನಾಡಿಗೆ ನೀರು ಹರಿಸಿ ರಾಜ್ಯಸರ್ಕಾರದಿಂದ ರೈತರಿಗೆ ದ್ರೋಹ: ಮಂಡ್ಯದಲ್ಲಿ ಕನ್ನಡಪರ ಸಂಘಟನೆಗಳ ಪ್ರತಿಭಟನೆ

2
Published on

ಮಂಡ್ಯ: ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಹರಿಸುವ ಮೂಲಕ ರಾಜ್ಯಸರ್ಕಾರ ರೈತರಿಗೆ ದ್ರೋಹ ಮಾಡಿದೆ ಎಂದು ನಗರದಲ್ಲಿ ಶನಿವಾರ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಜಯಚಾಮರಾಜೇಂದ್ರ ವೃತದಲ್ಲಿ ಜಮಾಯಿಸಿದ ಕಾರ್ಯಕರ್ತರು, ರಸ್ತೆ ತಡೆ ನಡೆಸಿ ರಾಜ್ಯಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು ರಕ್ತ ಚೆಲ್ಲುತ್ತೇವೆ ಕಾವೇರಿ ಉಳಿಸುತ್ತೇವೆ, ನೀರು ನಿಲ್ಲಿಸಿದರೆ ಶಾಂತಿ ನೀರು ಬಿಟ್ಟರೆ ಕ್ರಾಂತಿ ಎಂಬ ಘೋಷಣೆ ಮೊಳಗಿಸಿದರು.

ಕೆಆರ್‌ಎಸ್ ಜಲಾಶಯದಿಂದ ರಾತ್ರೋರಾತ್ರಿ ನೀರು ಬಿಡುವ ಮೂಲಕ ರಾಜ್ಯಸರ್ಕಾರ ರೈತರಿಗೆ ಮರಣ ಶಾಸನ ಬರೆದಿದೆ. ಕಾವೇರಿ ಕೊಳ್ಳದ ಜಲಾಶಯ ಭರ್ತಿಯಾಗಿಲ್ಲ. ಇಲ್ಲಿನ ರೈತರು ಬೆಳೆದಿರುವ ಬೆಳೆ ರಕ್ಷಣೆಗೆ ನೀರು ಸಾಕಾಗುತ್ತಿಲ್ಲ. ಹೊಸ ಬೆಳೆ ನಾಟಿ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಸತತವಾಗಿ ತಮಿಳುನಾಡಿಗೆ ನೀರು ಹರಿಸಿ ಜಲಾಶಯಗಳನ್ನ ಬರಿದು ಮಾಡಿದೆ. ಕಾವೇರಿ ನೀರು ಪ್ರಾಧಿಕಾರ ನೀರು ಬಿಡುವಂತೆ ಯಾವುದೇ ಆದೇಶ ಮಾಡಿರದಿದ್ದರೂ ರಾಜಕೀಯ ಉದ್ದೇಶದಿಂದ ತ.ನಾಡು ಒಲೈಸಿಕೊಳ್ಳಲು ನೀರು ಬಿಟ್ಟಿರುವ ಸರ್ಕಾರಕ್ಕೆ ಕನ್ನಡ ನಾಡಿನ ರೈತರ ಬಗ್ಗೆ ಅಭಿಮಾನ ಇಲ್ಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರು ಬೇಕಾದರೆ ನ್ಯಾಯಾಲಯಕ್ಕೆ ಹೋಗಲಿ ಎಂದು ಉಡಾಫೆಯಾಗೆ ವರ್ತಿಸಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ಗೆ ಆಡಳಿತದ ಜ್ಞಾನ ಇದೆಯೇ?. ಕಾವೇರಿ ವಿಚಾರದಲ್ಲಿ ರೈತರು ಸಾಕಷ್ಟು ಹೋರಾಟ ಮಾಡಿದ್ದಾರೆ. ರೈತರೇ ಎಲ್ಲವನ್ನು ಮಾಡುವುದಾದರೆ ನಿಮ್ಮ ಸರ್ಕಾರ ಏಕೆ ಇರಬೇಕು?. ಕೂಡಲೇ ರೈತರ ಕ್ಷಮೆಯಾಚಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಸರ್ಕಾರಕ್ಕೆ ಕನ್ನಡಿಗರ ಬಗ್ಗೆ ಅಭಿಮಾನ ಇಲ್ಲ. ಮತ ಹಾಕಿದ ಮತದಾರರ ಬಗ್ಗೆಯೂ ಅಸಡ್ಡೆತನ ತೋರಿದೆ. ಮೇಕೆದಾಟು ವಿಚಾರವಾಗಿ ಪಾದಯಾತ್ರೆ ಮಾಡಿದವರು, ಇದೀಗ ರೈತರಿಗೆ ದ್ರೋಹ ಮಾಡುವ ಕೆಲಸ ಮಾಡಿದ್ದಾರೆ. ಇದೇ ರೀತಿ ಕನ್ನಡಿಗರ ವಿರೋಧಿ ನೀತಿ ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಸರ್ಕಾರವನ್ನು ಕಿತ್ತೊಗೆಯುವ ಜನಜಾಗೃತಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರಾದ ನೀಲೇಶ್‌ಗೌಡ, ಲೋಕೇಶ್‌ಗೌಡ, ಪ್ರಕಾಶ್‌ಗೌಡ, ರಮೇಶ್, ಕೃಷ್ಣೇಗೌಡ, ಎಂ.ಬಿ.ನಾಗಣ್ಣಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net