

ಶಿರಹಟ್ಟಿ: ಮನೆಯೇ ಮೊದಲ ಪಾಠಶಾಲೆ, ಜನನಿ ತಾನೇ ಮೊದಲ ಗುರು ಎಂಬಂತೆ ಕನ್ನಡ ಭಾಷೆಯ ಬೆಳವಣಿಗೆ ಮನೆ ಮನೆಗಳಿಂದಲೇ ಆರಂಭವಾಗಬೇಕು ಎಂದು ಗದಗ ಕೆವಿಎಸ್‌ಆರ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ. ಅನಿಲ್ ವೈದ್ಯ ಹೇಳಿದರು.
ತಾಲೂಕಿನ ಖಾನಪೂರ ಗ್ರಾಮದ ಶರಣಬಸವೇಶ್ವರ ದೇವಸ್ಥಾನದಲ್ಲಿ ಕಸಾಪ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಕಸಾಪ ಸಂಸ್ಥಾಪನ ದಿನಾಚರಣೆ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇಂಗ್ಲಿಷ್ ವ್ಯಾಮೋಹದ ಪರಿಣಾಮವಾಗಿ ಕನ್ನಡ ಪದಗಳು ಮರೆತು ಹೋಗುತ್ತಿರುವ ಸ್ಥಿತಿ ಆಕ್ಷೇಪಾರ್ಹ ಎಂದರು. ಅವ್ವ, ಅಪ್ಪ ಎಂಬ ಕನ್ನಡ ಪದಗಳ ಬದಲಿಗೆ ಮಮ್ಮಿ, ಡ್ಯಾಡಿ ಎನ್ನುವುದು ಹೆಮ್ಮೆಯ ವಿಷಯವಲ್ಲ. ಮಾತೃಭಾಷೆಗಾಗಿ ಹೋರಾಡುವ ಸ್ಥಿತಿ ಬಂದಿರುವುದು ದುರ್ದೈವ. ಇದನ್ನು ತಡೆಯಬೇಕಾದರೆ ಮನೆಮನೆಗಳಲ್ಲಿ ಕನ್ನಡ ಬೆಳಗಬೇಕಾಗಿದೆ ಎಂದರು.
ಕಸಾಪ ತಾಲೂಕಾಧ್ಯಕ್ಷ ನವೀನ್ ಕುಮಾರ್ ಅಳವಂಡಿ ಅಧ್ಯಕ್ಷತೆ ವಹಿಸಿದ್ದರು. ಎನ್.ಆರ್. ಕುಲಕರ್ಣಿ, ಚನ್ನಬಸವ್ವ ಕಲಾದಗಿ, ಎಚ್.ಎಂ. ದೇವಗೇರಿ, ರಾಜಶೇಖರಯ್ಯ ಹಿರೇಮಠ, ಎಸ್.ಬಿ. ಹೊಸೂರ, ಕೆ.ಎ. ಬಳಿಗಾರ, ಎಂ.ಕೆ. ಲಮಾಣಿ, ವಿ.ವಿ. ಅಮರ್ ಶೆಟ್ಟರ್, ಸುರೇಶ್ ಅಕ್ಕಿ, ಎಸ್.ಎಚ್. ಪಾಟೀಲ, ಆರ್.ಜಿ. ಹಲಸೂರು, ಸಿ.ಎಂ. ಕದಡಿ, ಫಕೀರೇಶ ಕುಳಗೇರಿ, ರತ್ನಾಬದಿ, ಆರ್.ಬಿ. ಕಮತ, ಗುರುಮೂರ್ತಿ ದೇಶಪಾಂಡೆ, ಸುರೇಶ ಸರ್ಜಾಪುರ, ಬಸವರಾಜ ರೆಡ್ಡೆರ, ಮಲ್ಲಪ್ಪ ಹರ್ತಿ, ಪ್ರಭು ಹಲಸೂರ, ಶಿವಣ್ಣ ಚಕ್ರಸಾಲಿ ಇತರರಿದ್ದರು.
ಸಿದ್ದಲಿಂಗೇಶ್ವರ ಹಲಸೂರು ಸ್ವಾಗತಿಸಿದರು. ಸುಧಾ ಹುಚ್ಚನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೊಟ್ರಯ್ಯ ಹೊಂಬಾಳ್ಮಠ ನಿರೂಪಿಸಿದರು.