ಕನ್ನಡ ನಾಮ ಫಲಕ ಬಳಸುವಂತೆ ಅರಿವು, ಕನ್ನಡಪರ ಸಂಘಟನೆ ಒಕ್ಕೂಟದಿಂದ ಮೆರವಣಿಗೆ

20 DBP 2 Kannada
Published on

ದೊಡ್ಡಬಳ್ಳಾಪುರ: ನಗರದ ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ನಾಮಫಲಕ ಹಾಕಿಸುವಂತೆ ಸೋಮವಾರ ನಗರ ಪ್ರಮುಖ ರಸ್ತೆಗಳಲ್ಲಿ ಕನ್ನಡಪರ ಸಂಘಟನೆ ಒಕ್ಕೂಟದಿಂದ ಮೆರವಣಿಗೆ ನಡೆಸಿ ತಹಸೀಲ್ದಾರ್ ಟಿ.ಎಸ್. ಶಿವರಾಜ್‌ಗೆ ಮನವಿ ಸಲ್ಲಿಸಲಾಯಿತು.

ಭುವನೇಶ್ವರಿ ಕನ್ನಡ ಸಂಘದ ಸಲಹೆಗಾರ ಟಿ.ಎನ್.ಪ್ರಭುದೇವ್ ಮಾತನಾಡಿ, ಕನ್ನಡ ನಾಮಫಲಕ ಕಡ್ಡಾಯವಾಗಿಸುವಂತೆ ಅನೇಕ ವರ್ಷದಿಂದ ಹೋರಾಟ ಮಾಡಲಾಗುತ್ತಿದೆ. ಅಲ್ಲದೆ, ಈ ಬಗ್ಗೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಆದರೆ, ಕೆಲವು ಖಾಸಗಿ ಕಂಪನಿಗಳು ನಾಡಿನ ಜನರ ದುಡಿಮೆಯಿಂದ ಶ್ರೀಮಂತವಾಗಿ ಇಲ್ಲಿನ ಭಾಷೆ ನಿರ್ಲಕ್ಷ್ಯಸಿ ಇಂಗ್ಲಿಷ್ ಬಳಸುತ್ತಿರುವುದು ಖಂಡನೀಯ ಎಂದರು.

ತಾಲೂಕು ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸು.ನರಸಿಂಹಮೂರ್ತಿ ಮಾತನಾಡಿ, ಇಂಗ್ಲಿಷ್ ನಾಮಫಲಕ ಹಾಕಿರುವ ಮಾಲೀಕರಿಗೆ ಗುಲಾಬಿ ಹೂವು ನೀಡಿ ಅರಿವು ಮೂಡಿಸುವ ಜತೆಗೆ ಸರ್ಕಾರದ ಅಧಿನಿಯಮದ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಇಷ್ಟಾದರೂ ಇಂಗ್ಲಿಷ್ ನಾಮಫಲಕ ಹಾಕಿದರೆ ಅವುಗಳಿಗೆ ಮಸಿ ಬಳಿಯಲಾಗುತ್ತದೆ ಎಂದು ಎಚ್ಚರಿಸಿದರು.

ಕರವೆ ಪ್ರವೀಣ್ ಶೆಟ್ಟಿಬಣದ ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ, ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಪಿ.ನವೀನ್, ಕಾರ್ಯದರ್ಶಿ ಸು.ವೆಂಕಟೇಶ್, ಗೌರವ ಅಧ್ಯಕ್ಷ ಪುಟ್ಟಪ್ಪ, ಕರವೇ ತಾಲೂಕು ಅಧ್ಯಕ್ಷ ಮರಳಾರಾಧ್ಯ, ಗೌರವ ಅಧ್ಯಕ್ಷ ಪು.ಮಹೇಶ್, ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಂಜಪ್ಪ, ಕನ್ನಡ ಪಕ್ಷದ ಮುಖಂಡ ಪರಮೇಶ್, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಮುಖಂಡರಾದ ಸುರೇಶ್, ಡಿ.ಸಿ.ಚೌಡರಾಜ್, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ಅಧ್ಯಕ್ಷ ಚಂದ್ರಪ್ಪ, ಕನ್ನಡ ಜಾಗೃತಿ ವೇದಿಕೆ ತಾಲೂಕು ಅಧ್ಯಕ್ಷ ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net