

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯಲ್ಲೇ ನಾಮಫಲಕಗಳನ್ನು ಅಳವಡಿಸಲು ಜಿಲ್ಲಾಡಳಿತ ಸೂಚಿಸಿದ್ದು, ಇದಕ್ಕೆ ಜ.7ರವರೆಗೆ ಗಡುವು ನೀಡಿದೆ. ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನ್ನಡ ಅನುಷ್ಠಾನ ಸಮಿತಿ ಸಭೆಯಲ್ಲಿ ನಾಡು ನುಡಿ ಬೆಳವಣಿಗೆ, ವಿವಿಧ ಕ್ಷೇತ್ರಗಳಲ್ಲಿ ಕನ್ನಡ ಬಳಕೆ ಕಡ್ಡಾಯಗೊಳಿಸುವ ಬಗ್ಗೆ ಚರ್ಚಿಸಲಾಯಿತು. ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಗ್ರಾಪಂ ವ್ಯಾಪ್ತಿಯಲ್ಲಿನ ಎಲ್ಲ ವ್ಯಾಪಾರಿ ಮಳಿಗೆಗಳು, ಸಂ ಸಂಸ್ಥೆಗಳು, ಖಾಸಗಿ ಶಾಲಾ ಕಾಲೇಜುಗಳ ನಾಮಫಲಕಗಳು ಕಡ್ಡಾಯವಾಗಿ ಶೇ.60 ಕನ್ನಡದಲ್ಲೇ ಇರಬೇಕು. ಇದುವರೆಗೂ ನಿಯಮ ಪಾಲಿಸದವರು ಜ.7ರೊಳಗೆ ಧೋರಣೆ ಬದಲಾಯಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿಗಳಿಗೆ ಸೂಚನೆ: ಹೊಸದಾಗಿ ಅಂಗಡಿ, ಮಳಿಗೆಗಳನ್ನು ತೆರೆಯುವವರು ಕನ್ನಡ ಪ್ರಧಾನವಾಗಿ ಕಾಣಿಸುವಂತೆ ನಾಮಫಲಕ ಅಳವಡಿಸಿದ್ದರೆ ವಾತ್ರ ಪರವಾನಗಿ ನೀಡಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಯಿತು.
ಜಿಪಂ ಸಿಇಒ ಪ್ರಕಾಶ್ ಜಿ.ಟಿ ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಎನ್. ಭಾಸ್ಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರವಿಕುವಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ಮಹೇಶ್ ಕುವಾರ್, ಜಿಪಂ ಯೋಜನಾಧಿಕಾರಿ ಈಶ್ವರಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಕೋಡಿರಂಗಪ್ಪ ಮತ್ತಿತರರು ಇದ್ದರು.
ತೆರವಿಗೆ ಆದೇಶ
ಅನ್ಯಭಾಷೆಯ ನಾಮಫಲಕಗಳನ್ನು ಕಡ್ಡಾಯವಾಗಿ ತೆರವುಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಎಲ್ಲ ವಿದ್ಯಾಸಂಸ್ಥೆಗಳ ದೈನಂದಿನ ಚಟುವಟಿಕೆಯಲ್ಲಿ ಕನ್ನಡ ಬಳಕೆ, ನಿಯಮಿತವಾಗಿ ಕನ್ನಡ ಅನುಷ್ಠಾನ ಪರಿಶೀಲನಾ ಸಮಿತಿ ಸಭೆಗಳ ಆಯೋಜನೆ, ಮಕ್ಕಳ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ನಿಯಂತ್ರಣಕ್ಕಾಗಿ ಸರ್ಕಾರಿ ಇಲಾಖೆಗಳಲ್ಲಿ ‘ಲೋಕಲ್ ಕಂಪ್ಲೇಂಟ್ ಕಮಿಟಿ’ ಹಾಗೂ ‘ಇಂಟರ್ನಲ್ ಕಂಪ್ಲೆಂಟ್ ಕಮಿಟಿ’ ರಚಿಸುವ ಬಗ್ಗೆಯೂ ಚರ್ಚಿಸಲಾಯಿತು.
ಪರವಾನಗಿ ರದ್ದು, ದಂಡ
ವಾಣಿಜ್ಯ, ಕೈಗಾರಿಕೆಗಳು ಮತ್ತು ವ್ಯಾಪಾರ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಹೋಟೆಲ್‌ಗಳು ಸೇರಿ ಪ್ರತಿಯೊಂದು ವಹಿವಾಟು ಕೇಂದ್ರಗಳ ಹೆಸರಿನ ನಾಮಫಲಕಗಳು ಶೇ.60 ಕನ್ನಡದಲ್ಲಿರಬೇಕು. ಇಲ್ಲದಿದ್ದಲ್ಲಿ ಮೊದಲ ಬಾರಿ ನಿಯಮ ಉಲ್ಲಂಸಿದವರಿಗೆ 5 ಸಾವಿರ ರೂ., ಎರಡನೇ ಬಾರಿಗೆ 10 ಸಾವಿರ ರೂ., ಮೂರನೇ ಬಾರಿಗೆ 20 ಸಾವಿರ ರೂ. ದಂಡ ವಿಧಿಸುವ ಜತೆಗೆ ಪರವಾನಗಿ ರದ್ದುಗೊಳಿಸಲಾಗುತ್ತದೆ ಎಂದು ಜಿಲ್ಲಾಡಳಿತ ಎಚ್ಚರಿಸಿದೆ.
ಪರಿಶೀಲನೆ ಹೊಣೆ ಜಾರಿ ಅಧಿಕಾರಿಗಳಿಗೆ
ಗ್ರಾಪಂ ವ್ಯಾಪ್ತಿಯಲ್ಲಿ ಪಿಡಿಒ, ನಗರಸಭೆ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಪೌರಾಯುಕ್ತರು ಹಾಗೂ ಮುಖ್ಯಾಧಿಕಾರಿಗಳು ಕನ್ನಡ ಅನುಷ್ಠಾನ ಸಮಿತಿ ಜಾರಿ ಅಧಿಕಾರಿಗಳಾಗಿದ್ದು, ಕಾಲಕಾಲಕ್ಕೆ ನಿಯಮಪಾಲನೆ ಬಗ್ಗೆ ಪರಿಶೀಲಿಸಬೇಕು. ಇದರ ಬಗ್ಗೆ ತಾಲೂಕುಮಟ್ಟದ ಕನ್ನಡ ಅನುಷ್ಠಾನ ಸಮಿತಿ ಸಭೆ ಕರೆದು ಚರ್ಚಿಸಬೇಕು. ಹಾಗೆಯೇ ಜಿಲ್ಲಾಮಟ್ಟದ ಕನ್ನಡ ಅನುಷ್ಠಾನ ಸಮಿತಿಗೆ ವರದಿ ಸಲ್ಲಿಸಬೇಕು ಎಂದು ಡಿಸಿ ರವೀಂದ್ರ ಸೂಚಿಸಿದರು. ಸರ್ಕಾರಿ ಇಲಾಖೆಯ ಎಲ್ಲ ಕಚೇರಿಗಳ ವೆಬ್‌ಸೈಟ್‌ನಲ್ಲಿ ಕನ್ನಡ ಭಾಷೆಯಲ್ಲೂ ವಾಹಿತಿ ಸಿಗಬೇಕು. ಜಿಲ್ಲೆಯ ಎಲ್ಲ ಕೈಗಾರಿಕೆಗಳಲ್ಲಿ ಎಷ್ಟು ಕಾರ್ಮಿಕರಿದ್ದಾರೆ, ಈ ಪೈಕಿ ಸ್ಥಳೀಯರು ಮತ್ತು ಕನ್ನಡಿಗರ ಸಂಖ್ಯೆ ಎಷ್ಟಿದೆ ಎಂಬ ನಿಖರ ವಾಹಿತಿ ನೀಡಬೇಕು ಎಂದರು.