ಕನ್ನಡದಲ್ಲಿ ವಾದ ಮಂಡಿಸಲು ಸಲಹೆ,  ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಸಮಾರೋಪ

IMG-20250519-WA0000.jpg
Published on

ಹುಬ್ಬಳ್ಳಿ: ವಕೀಲ ವೃತ್ತಿಗೆ ಬರುವ ಯುವಕರು ಕನ್ನಡದಲ್ಲಿ ವಾದವನ್ನು ಮಂಡಿಸಲು ಹಾಗೂ ಕಕ್ಷಿದಾರನಿಗೆ ನ್ಯಾಯವನ್ನು ದೊರಕಿಸಿ ಕೊಡುವಲ್ಲಿ ಶ್ರಮಿಸಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ರವಿ ಹೊಸಮನಿ ಹೇಳಿದರು.

ಇಲ್ಲಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಭಾನುವಾರ ಏರ್ಪಡಿಸಿದ್ದ ರಾಜ್ಯ ಮಟ್ಟದ ಕನ್ನಡ ಕಲ್ಪಿತ ನ್ಯಾಯಾಲಯ ಸ್ಪರ್ಧೆ ಸಮಾರೋಪದಲ್ಲಿ ಅವರು ಬಹುಮಾನ ವಿತರಿಸಿ ಮಾತನಾಡಿದರು.

ಕರ್ನಾಟಕದಲ್ಲಿ ಕನ್ನಡ ಮಾತನಾಡುವವರಿದ್ದಾರೆ. ಆದರೆ ಬಳಕೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಮಾತೃಭಾಷೆ ಸಮಸ್ಯೆ ಇದ್ದವನು ಯಾವ ವೃತ್ತಿಯಲ್ಲಿಯೂ ಯಶಸ್ವಿಯಾಗುವುದಿಲ್ಲ. ಕನ್ನಡದಲ್ಲಿ ವಾದ ಮಾಡುವುದು ಮತ್ತು ಕನ್ನಡ ಬಳಕೆ ಮಾಡುವಂತಹ ಅವಕಾಶಗಳನ್ನು ವಿಶ್ವವಿದ್ಯಾಲಯವು ಈ ರೀತಿಯ ಕಾರ್ಯಕ್ರಮಗಳ ಮೂಲಕ ಒದಗಿಸಿಕೊಡುತ್ತಿರುವುದು ಶ್ಲಾನೀಯ ಎಂದರು.

ನಿವೃತ್ತ ನ್ಯಾಯಮೂರ್ತಿ ಬೂದಿಹಾಳ ಆರ್.ಬಿ. ಅವರು ಮಾತನಾಡಿ, ಸಾಮಾಜಿಕ ಹೊಣೆಗಾರಿಕೆಯನ್ನು ಗಮನದಲ್ಲಿಟ್ಟುಕೊಂಡು ವೃತ್ತಿಯಲ್ಲಿ ಶ್ರಮ ವಹಿಸಬೇಕು. ಪ್ರಾಮಾಣಿಕತೆ, ನಿಷ್ಠೆ ನಿರಂತರ ಶ್ರಮ ಮತ್ತು ಆಧ್ಯಾತ್ಮಿಕ ಭಾವನೆಗಳನ್ನು ಇಟ್ಟುಕೊಂಡರೆ ಮಾತ್ರ ಬದುಕಿನೊಂದಿಗೆ ವೃತ್ತಿಯಲ್ಲಿ ಯಶಸ್ವಿಯಾಗಬಲ್ಲರು ಎಂದು ಹೇಳಿದರು.

ಹಿರಿಯ ನ್ಯಾಯವಾದಿ ಬಸವಪ್ರಭು ಹೊಸಕೇರಿ ಮಾತನಾಡಿ, ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಶಬ್ದಕ್ಕೆ ಕೊರತೆ ಇಲ್ಲ. ಆದರೆ ಬಳಕೆಯ ಕೊರತೆ ಇದೆ. ಶಿಕ್ಷಣ ಸಂಸ್ಥೆಗಳು ಕನ್ನಡ ಬಳಕೆಗೆ ಇಂತಹ ಕಾರ್ಯಕ್ರಮ ಮಾಡಿರುವುದು ಸ್ತುತ್ಯರ್ಹ ಎಂದರು.

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಡಾ. ಸಿ. ಬಸವರಾಜು ಮಾತನಾಡಿದರು. ಸಿಂಡಿಕೇಟ್ ಸದಸ್ಯರು, ನ್ಯಾಯಾಧೀಶರು, ವಕೀಲರು, ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾನೂನು ವಿದ್ಯಾರ್ಥಿಗಳಾದ ರಶ್ಮಿ ಪ್ರಾರ್ಥಿಸಿದರು. ಆದಿತ್ಯ ಸ್ವಾಗತಿಸಿದರು. ಜಾನ್ವಿ ಪರಿಚಯಿಸಿದರು. ಪ್ರತಿಕ್ಷ ವರದಿ ವಾಚಿಸಿದರು. ಕಾರ್ಯಕ್ರಮ ಸಂಯೋಜಕ ಡಾ. ರಂಗಸ್ವಾಮಿ ಡಿ. ವಂದಿಸಿದರು.
ಲಿತಾಂಶ: ಕಲ್ಪಿತ ನ್ಯಾಯಾಲಯ ಸ್ಪರ್ಧೆಯಲ್ಲಿ ಬೆಂಗಳೂರಿನ ಯುನಿವರ್ಸಿಟಿ ಲಾ ಕಾಲೇಜು ಜಯ ಗಳಿಸಿತು. ರನ್ನರ್ ಅಪ್ ಪ್ರಶಸ್ತಿಯನ್ನು ಗದಗನ ಎಸ್.ಎ. ಮಾನ್ವಿ ಲಾ ಕಾಲೇಜು ಪಡೆಯಿತು. ಬೆಸ್ಟ್ ಮೆಮರೀಸ್ ಎಸ್.ಎ. ಮಾನ್ವಿ ಲಾ ಕಾಲೇಜ್ ಗದಗ, ಬೆಸ್ಟ್ ಜಂಟಲ್ಮನ್ ಅಡ್ವೋಕೇಟ್ ಬೆಂಗಳೂರಿನ ಯುನಿವರ್ಸಿಟಿ ಲಾ ಕಾಲೇಜಿನ ಪವನ ಕಲ್ಯಾಣ, ಲೇಡಿ ಅಡ್ವೋಕೇಟ್ ಹುಬ್ಬಳ್ಳಿಯ ಜಿ.ಕೆ. ಲಾ ಕಾಲೇಜಿನ ಅಂಜಲಿ ಎನ್.ಜಿ. ಅವರು ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net