

ಶಿವಮೊಗ್ಗ: ಕನ್ನಡದಲ್ಲಿ ಪ್ರಕಟವಾಗುವ ಸರ್ಕಾರದ ಸುತ್ತೋಲೆಗಳಲ್ಲೇ ಹಲವಾರು ತಪ್ಪುಗಳಿರುತ್ತವೆ. ಅದಕ್ಕೆ ಮುಖ್ಯಮಂತ್ರಿ, ರಾಜ್ಯಪಾಲರು ಇಲ್ಲವೇ ಸರ್ಕಾರದ ಮುಖ್ಯ ಕಾರ್ಯದರ್ಶಿಗಳೇ ಸಹಿ ಹಾಕಿರುತ್ತಾರೆ. ಸರ್ಕಾರದ ಹಂತದಲ್ಲೇ ಕನ್ನಡದ ಕಗ್ಗೊಲೆಯಾದರೆ ಭಾಷೆಯ ರಕ್ಷಣೆ ಹೇಗೆ ಸಾಧ್ಯ ಎಂದು ಸ್ವಚ್ಛ ಭಾಷಾ ಅಭಿಯಾನದ ರೂವಾರಿ ಶ್ರೀವತ್ಸ ಜೋಶಿ ಪ್ರಶ್ನಿಸಿದರು.
ಬಹುಮುಖಿ ಸಂಘಟನೆಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಸವಿಲ್ಲದ ಕನ್ನಡ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ನಿತ್ಯ ಬಳಕೆಯ ಕನ್ನಡದಲ್ಲಿ ಉಂಟಾಗುತ್ತಿರುವ ಲೋಪಗಳು, ಸಾಹಿತ್ಯದಲ್ಲಿ ಕನ್ನಡದ ತಪ್ಪು ಬಳಕೆ, ಭಾಷಾ ಅಜ್ಞಾನದಿಂದ ಉಂಟಾಗುತ್ತಿರುವ ಗೊಂದಲಗಳ ಬಗ್ಗೆ ವಿವರಿಸಿದರು.
ಸರ್ಕಾರದ ಸುತ್ತೋಲೆಗಳಲ್ಲಿ ತಪ್ಪುಗಳಾಗುವುದಕ್ಕೆ ಸರ್ಕಾರದ ಮುಖ್ಯಸ್ಥರು ಕಾರಣವೆಂದಲ್ಲ. ಆದರೆ ಸುತ್ತೋಲೆ ಸಿದ್ಧಪಡಿಸುವ ಸಿಬ್ಬಂದಿ, ಆ ವಿಭಾಗದ ಮೇಲ್ವಿಚಾರಕರು ಇದಕ್ಕೆ ನೇರ ಹೊಣೆ. ಕೆಲವೇ ಸಾಲುಗಳಲ್ಲಿ ಹಲವು ತಪ್ಪುಗಳಾಗಿದ್ದರೂ ಸರಿಪಡಿಸುವ ಆಸಕ್ತಿಯನ್ನು ಸಿಬ್ಬಂದಿ ತೋರುವುದಿಲ್ಲ. ಇಲ್ಲವೇ ಅದು ತಪ್ಪು ಎಂಬುದು ಅವರ ಗಮನಕ್ಕೆ ಬಂದಿರುವುದಿಲ್ಲ ಎಂದರು.
ಗ್ರಾಮ್ಯ ಭಾಷೆ, ಪ್ರಾದೇಶಿಕ ಭಾಷೆಯ ಬಳಕೆ ಇಂದು ಸಾಹಿತ್ಯದಲ್ಲಿ ಹೆಚ್ಚುತ್ತಿದೆ. ಇದು ತಪ್ಪೇನಲ್ಲ. ಭಾಷೆ ಬೆಳವಣಿಗೆಯಿಂದ ಹಾಗೂ ಓದುಗರನ್ನು ಸರಳವಾಗಿ ತಲುಪುವ ದೃಷ್ಟಿಯಿಂದ ಒಳ್ಳೆಯದು. ಈ ವೇಳೆ ಸುಂದರ ಪದಗಳನ್ನು ವಿರೂಪಗೊಳಿಸುವ ಅಪಾಯವೂ ಇದೆ. ವೈಚಾರಿಕ ಸಾಹಿತ್ಯ ಇಲ್ಲವೇ ಲೇಖನಗಳಲ್ಲಿ ಗ್ರಾಮ್ಯ ಭಾಷೆ ಬಳಕೆಯಿಂದ ಓದುಗರಿಗೂ ಗೊಂದಲವಾಗುತ್ತದೆ. ಬರವಣಿಗೆಯ ಪ್ರಭಾವದ ತೀವ್ರತೆ ಕಡಿಮೆಯಾಗುವ ಅಪಾಯವೂ ಇದೆ ಎಂದು ಅಭಿಪ್ರಾಯಪಟ್ಟರು.
ಪಠ್ಯ ಪುಸ್ತಕದಲ್ಲಿ ವಿವರಿಸುವ ವ್ಯಾಕರಣದಲ್ಲೇ ಅನೇಕ ತಪ್ಪುಗಳಿರುತ್ತವೆ. ಅದನ್ನು ಬೋಧಿಸುವ ಶಿಕ್ಷಕರೂ ಸರಿಪಡಿಸುವುದಿಲ್ಲ. ಪಠ್ಯದ ತಪ್ಪು ಭವಿಷ್ಯದ ಪ್ರಜೆಗಳನ್ನು ತಲುಪುತ್ತದೆ. ಮುಂದೆ ಅದೇ ತಪ್ಪು, ಸರಿ ಎಂಬ ನಿರ್ಧಾರಕ್ಕೆ ಮಕ್ಕಳು ಬರುತ್ತಾರೆ. ಭಾಷೆ ಕಲಿಕೆಗೆ ಭದ್ರ ತಳಪಾಯ ಹಾಕಬೇಕಾದ ಜಾಗದಲ್ಲೇ ತಪ್ಪುಗಳಾಗುತ್ತವೆ ಎಂದು ಬೇಸರ ವ್ಯಕ್ತಪಡಿಸಿದರು.
ಕಮಲಾ ನೆಹರು ಕಾಲೇಜಿನ ಪ್ರಾಚಾರ್ಯ ಡಾ. ಎಚ್.ಎಸ್.ನಾಗಭೂಷಣ ಪ್ರಾಸ್ತಾವಿಕವಾಗಿ ಮಾತನಾಡಿದರು.