ಕನ್ನಡ ಸಾಹಿತ್ಯಕ್ಕೆ ಮಹಿಳಾ ಸಂವೇದನೆಗಳಿಂದ ಗಟ್ಟಿ ದನಿ ದೊರೆತಿದೆ: ಟಿ.ಸತೀಶ್ ಜವರೇಗೌಡ

Oplus_16777216
Oplus_16777216
Published on

ಮೈಸೂರು: ಕನ್ನಡ ಸಾಹಿತ್ಯಕ್ಕೆ ಮಹಿಳಾ ಸಂವೇದನೆಗಳಿಂದ ಗಟ್ಟಿ ದನಿ ಮತ್ತು ಹೊಸ ದನಿ ಲಭಿಸಿದೆ. ಇದನ್ನು ಸಾಕ್ಷೀಕರಿಸುವಂತೆ ಕನ್ನಡಕ್ಕೆ ಬಾನು ಮುಷ್ತಾಕ್ ಬುಕರ್ ಪ್ರಶಸ್ತಿ ತಂದುಕೊಟ್ಟಿದ್ದಾರೆ ಎಂದು ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಹೇಳಿದರು.

ಮಂದಗೆರೆ ಕಲೆ-ಸಾಹಿತ್ಯ-ಸಾಂಸ್ಕೃತಿಕ ಪ್ರತಿಷ್ಠಾನದಿಂದ ಕುವೆಂಪುನಗರದ ಗಾನಭಾರತಿ ವೀಣೆಶೇಷಣ್ಣ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಉದಯೋನ್ಮುಖ ಲೇಖಕಿಯರ ಪುಸ್ತಕಗಳ ಬಿಡುಗಡೆ ಮತ್ತು ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಜಾಗತಿಕವಾಗಿ ತನ್ನದೇ ಆದ ಅಸ್ತಿತ್ವ ಮತ್ತು ಅಸ್ಮಿತೆ ಹೊಂದಿರುವ ಕನ್ನಡ ಸಾಹಿತ್ಯ ಪರಂಪರೆಗೆ ಮಹಿಳಾ ಸಂವೇದನೆಯ ಬರಹಗಳು ಹೊಸ ಹೊಳಹು, ಮೆರುಗನ್ನೂ, ಬೆಳಗನ್ನೂ ನೀಡಿವೆ. ಭಾರತೀಯ ಸಾಹಿತ್ಯ ವಲಯಕ್ಕೆ ಗಗನಕುಸುಮವಾಗಿದ್ದ ಬುಕರ್ ನಂತಹ ಅಂತಾರಾಷ್ಟ್ರೀಯ ಪುರಸ್ಕಾರವನ್ನು ಸಾಧ್ಯವಾಗಿಸಿದ್ದು, ಮಹಿಳೆಯರು ರಚಿಸಿದ ಸಾಹಿತ್ಯ ಎಂಬುದು ಮಹಿಳಾ ಸಂವೇದನೆಯ ಅಸ್ಮಿತೆ ಎಂದು ಶ್ಲಾಘಿಸಿದರು.

ಒಂದು ಕಾಲದಲ್ಲಿ ಮಹಿಳಾ ಸಾಹಿತ್ಯವು ’ಅಡುಗೆ ಮನೆಯ ಸಾಹಿತ್ಯ’ ಎಂಬ ಹಣೆಪಟ್ಟಿಗೆ, ಪೂರ್ವಾಗ್ರಹಕ್ಕೆ, ಅವಗಣನೆಗೆ ಒಳಗಾಗಿತ್ತು. ಅಂತಹ ಸಾಹಿತ್ಯ ರಚಿಸಿದ ಮಹಿಳೆಯರು ಇಂದು ‘ಜಾಗತಿಕ ಬರಹಗಾರ್ತಿ’ಯರಾಗಿ ಗುರುತಿಸಿಕೊಂಡಿರುವುದು ಗಮನಾರ್ಹ ಬೆಳವಣಿಗೆ ಎಂದರು.

ಕವಯತ್ರಿ ಎಚ್.ಡಿ. ಪುಷ್ಪಾ ಹೂತಗೆರೆ ಅವರು ’ಚಂದನ ಪುಷ್ಪ’ ಕವನ ಸಂಕಲನದಲ್ಲಿ ತಮ್ಮ ಮನದಾಳದ ಭಾವನೆಗಳನ್ನು ತುಂಬಾ ಸೊಗಸಾಗಿ ಅಭಿವ್ಯಕ್ತಿಸಿದ್ದಾರೆ. ಉತ್ತಮ ಕವಿತೆಗಳಿಂದ ಕೂಡಿರುವ ಸಂಕಲನವು ಸರಾಗವಾಗಿ ಓದಿಸಿಕೊಳ್ಳುವ ಗುಣ ಹೊಂದಿದೆ. ಅನುಭವ ಜನ್ಯವಾದ ಸುವಾಸನೆಯನ್ನು ಹೊಂದಿದೆ. ಇದು ಮಹಿಳಾ ಸಂವೇದನೆಯ ಪ್ರತೀಕವಾಗಿದೆ ಎಂದರು.

ಎಚ್.ಎನ್. ಸುಮಲತಾ ಬನ್ನೂರು ಅವರ ’ಅರುಣೋದಯ’ ಕುರಿತು ಡಾ.ಸಿ.ಪಿ.ಲಾವಣ್ಯ, ಎಚ್.ಡಿ.ಪುಷ್ಪಾ ಹೂತಗೆರೆ ಅವರ ’ಚಂದನ ಪುಷ್ಪ’ ಕುರಿತು ಟಿ.ಸತೀಶ್ ಜವರೇಗೌಡ, ಸುಜಾತಾ ರವೀಶರ ’ಮುಖವಾಡ’ ಕುರಿತು ಚಂಪಾ ಚಿನಿವಾರ್, ತಾರಾ ನಂಜುಂಡಶಾಸ್ತ್ರೀ ಅವರ ’ತಾರಾ ದನಿ’ ಕುರಿತು ನಂಜನಗೂಡು ಚಂದನಕೃಷ್ಣ, ಪೂರ್ಣಿಮಾ ರಾಜೇಶರ ‘ದಿವ್ಯಯೋಗಿನಿ’ ಕುರಿತು ರುಕ್ಮಿಣಿ ನಾಯರ್ ಹಾಗೂ ‘ಅವಲೋಕನ’ ಕುರಿತು ಕೆ.ಎಸ್. ಉಷಾರಾಣಿ, ಮಮತಾ ತುರಗನೂರು ಅವರ ’ಚೈತ್ರ ಚಿತ್ತಾರ’ ಕುರಿತು ಹಾ.ಮಾ. ಸತೀಶ್ ಮಾತನಾಡಿದರು.

ಸಾಹಿತಿ ಎಂ.ಎಸ್. ಸೋಮಶೇಖರ್, ವಿದ್ವಾನ್ ಡಾ. ಚಿಂತಲಪಲ್ಲಿ ವಿ. ಶ್ರೀನಿವಾಸ್, ವಿದುಷಿ ಗೀತಾ ಭತ್ತದ್, ಸಮಾಜ ಸೇವಕ ಧರ್ಮರಾಜ ತಂ. ಕರಿಯಪ್ಪ, ವೇದಿಕೆಯ ಗೌರವ ಪೋಷಕ ಮಂದಗೆರೆ ವಾಸು, ವ್ಯವಸ್ಥಾಪಕ ಟ್ರಸ್ಟಿ ಮಂದಗೆರೆ ರಾಮಕುಮಾರ್, ಪ್ರಕಾಶಕಿ ಪಿ.ಕೆ. ಅನಿತಾ, ಕನ್ನಡ ಪರಿಚಾರಕ ವೈಕುಂಠಯ್ಯ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net