ಕನ್ನಡ ಶಾಲೆಗಳ ರಕ್ಷಣೆ ಸರ್ಕಾರದ ಹೊಣೆ : ಡಾ.ಎಂ.ಮೋಹನ ಆಳ್ವ ಅಭಿಪ್ರಾಯ

New Project (26)
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಕನ್ನಡ ಭಾಷೆ, ಸಾಹಿತ್ಯ, ಸಾಂಸ್ಕೃತಿಕ ಮನಸ್ಸುಗಳನ್ನು ಮುಂದುವರಿಸಿಕೊಂಡು ಹೋಗುವ ಅನಿವಾರ್ಯತೆ ಇದೆ. ಕನ್ನಡ ಮಾಧ್ಯಮ ಶಾಲೆಗಳು ಉಳಿಯಬೇಕಿದ್ದು, ಈ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು.

ಮಂಗಳೂರು ವಿ.ವಿ. ಮಂಗಳಾ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಂಗಳೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ಎರಡು ದಿನ ನಡೆದ 27ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ಲೇಖಕ ಜೋಗಿ ಗಿರೀಶ್ ರಾವ್ ಉಪ್ಪಿನಂಗಡಿ ಸಮಾರೋಪ ಭಾಷಣ ಮಾಡಿದರು. ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಪ್ರಭಾಕರ ಶಿಶಿಲ ಮಾತನಾಡಿದರು. ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು.

ಉಡುಪಿ ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಪಾವೂರು, ಕಾದಂಬರಿಕಾರ ಡಾ.ಪ್ರಭಾಕರ ನೀರುಮಾರ್ಗ, ಸಾಮಾಜಿಕ ಮುಖಂಡ ವೆಂಕಪ್ಪ ಕಾಜವ ಮಿತ್ತಕೋಡಿ, ಕಲಾವಿದ ಎಂ.ಜಿ.ಕಜೆ, ಲೇಖಕ ಪರಮಾನಂದ ಸಾಲ್ಯಾನ್, ಪತ್ರಕರ್ತ ಧನಂಜಯ ಮೂಡುಬಿದಿರೆ, ವರ್ಣಚಿತ್ರ ಕಲಾವಿದ ಮೋನಪ್ಪ, ಕ್ರೀಡಾಪಟು ಪ್ರೇಮಾ ಗೌಡ, ಕರಾವಳಿಯ ಪಾರಂಪರಿಕ ವಸ್ತು ಸಂಗ್ರಹಕಾರ ಶಶಿಕುಮಾರ್ ಭಟ್ ಪಡಾರು, ಜಲ ಸಂವರ್ಧನ ತಜ್ಞ ಡಾ.ಜೋಸೆಫ್ ಎನ್.ಎಂ., ಶಾಂತಿ ಪ್ರಕಾಶನದ ವ್ಯವಸ್ಥಾಪಕ ಮಹಮ್ಮದ್ ಕುಂಞಿ ತೊಕ್ಕೊಟ್ಟು, ಮಂಗಳೂರು ವಿವಿ ಸಹಾಯಕ ಪ್ರಾಧ್ಯಾಪಕಿ ಡಾ.ಸಬಿತಾ ಕೊರಗ ಕೊಣಾಜೆ ಅವರನ್ನು ಸನ್ಮಾನಿಸಲಾಯಿತು.

ಮಂಗಳೂರು ವಿ.ವಿ. ಕುಲಪತಿ ಪ್ರೊ.ಪಿ.ಎಲ್.ಧರ್ಮ, ಉಜಿರೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್., ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ, ಉದ್ಯಮಿ ಕಿರಣ್‌ಚಂದ್ರ ಡಿ.ಪುಷ್ಪಗಿರಿ, ವಿ.ವಿ. ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ.ಸೋಮಣ್ಣ ಹೊಂಗಳ್ಳಿ, ಕೇಂದ್ರ ಸಮಿತಿ ಗೌರವ ಕಾರ್ಯದರ್ಶಿಗಳಾದ ವಿನಯ ಆಚಾರ್, ರಾಜೇಶ್ವರಿ ಎಂ., ಕೋಶಾಧ್ಯಕ್ಷ ಐತಪ್ಪ ನಾಯ್ಕ, ಸಂಘಟನಾ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಸದಸ್ಯ ಡಾ.ಎಂ.ಕೆ.ಮಾಧವ, ಕಸಾಪ ತಾಲೂಕು ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಮೊದಲಾದವರಿದ್ದರು. ರವೀಂದ್ರ ರೈ ಕಲ್ಲಿಮಾರ್ ಸ್ವಾಗತಿಸಿದರು. ತ್ಯಾಗಂ ಹರೇಕಳ, ಆಶಾ ದಿಲೀಪ್ ರೈ ನಿರೂಪಿಸಿದರು. ಚಂದ್ರಹಾಸ ಶೆಟ್ಟಿ ವಂದಿಸಿದರು.

ಪುಸ್ತಕ ಮಾರಾಟ, ಮಿಶ್ರ ಪ್ರಕ್ರಿಯೆ

ಸಮ್ಮೇಳನದಲ್ಲಿ ಆರು ಪುಸ್ತಕ ಮಳಿಗೆಗಳಿದ್ದು, ವ್ಯಾಪಾರದ ವಿಚಾರದಲ್ಲಿ ಮಿಶ್ರ ಪ್ರಕ್ರಿಯೆ ವ್ಯಕ್ತವಾಗಿದೆ. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ಸಣ್ಣ ಬೆಲೆಯ ಪುಸ್ತಕ ಖರೀದಿ ಮಾಡಿದ್ದಾರೆ. ಹಿಂದೆ ನಡೆದಿದ್ದ ತಾಲೂಕು ಸಮ್ಮೇಳನದಲ್ಲಿ ಪುಸ್ತಕ ಖರೀದಿಸಲು ಜನರೇ ಇರಲಿಲ್ಲ ಎಂದು ಸುರಭಿ ಬುಕ್ ಸೆಂಟರ್ ಮಳಿಗೆಯ ರಮೇಶ್ ತಿಳಿಸಿದ್ದಾರೆ. ವ್ಯಾಪಾರ ಪರವಾಗಿಲ್ಲ ಎಂದು ಕರ್ನಾಟಕ ಪುಸ್ತಕ ಪ್ರದರ್ಶನ ಮಳಿಗೆಯ ಸುರೇಶ್ ಹೇಳಿದ್ದಾರೆ. ಇತಿಹಾಸದ ಪುಸ್ತಕಗಳು ಹೆಚ್ಚಾಗಿ ಮಾರಾಟವಾಗಿದೆ. ಈ ಭಾಗದಲ್ಲಿ ಓದುಗರು ಇದ್ದಾರೆ ಎಂದು ಪುಸ್ತಕ ಮನೆ ಮಳಿಗೆಯ ಶಿವಕುಮಾರ್ ಕಾರ್ಕಳ ತಿಳಿಸಿದರು. ಸಂಜೆ ಬಳಿಕ ಸಾರ್ವಜನಿಕರು ಬಂದಿದ್ದು, ಬಳಿಕ ಎಲ್ಲ ರೀತಿಯ ಪುಸ್ತಕಗಳು ಮಾರಾಟವಾಗಿವೆ ಎಂದು ಅಯೋಧ್ಯಾ ಪಬ್ಲಿಕೇಶನ್ ಮಳಿಗೆಯ ಲೋಲಾಕ್ಷ ಹರ್ಷ ವ್ಯಕ್ತಪಡಿಸಿದರು. ಹೇಳಿಕೊಳ್ಳುವ ರೀತಿಯಲ್ಲಿ ಪುಸ್ತಕ ಮಾರಾಟ ಆಗಿಲ್ಲ ಎಂದು ಶಾಂತಿ ಪ್ರಕಾಶನದ ಮಹಮ್ಮದ್ ಅಶ್ರಫ್ ತಿಳಿಸಿದ್ದಾರೆ.

ಕೊನೆ ಕ್ಷಣದ ಯೋಚನೆಯೇ ಪಟ್ಟಾಂಗ ಕಟ್ಟೆ!

ಸಮ್ಮೇಳನದ ಸಭಾ ಕಾರ್ಯಕ್ರಮಗಳು, ಗೋಷ್ಠಿಗಳು ಮಂಗಳಾ ಸಭಾಂಗಣದೊಳಗೆ ನಡೆದವು. ಆದರೆ ಇದರಲ್ಲಿ ಆಸಕ್ತರನ್ನು ಹೊರತುಪಡಿಸಿ ವಿದ್ಯಾರ್ಥಿಗಳು ಆಸಕ್ತಿ ಹೊಂದಿರಲಿಲ್ಲ. ಈ ನಿಟ್ಟಿನಲ್ಲಿ ಪಟ್ಟಾಂಗ ಕಟ್ಟೆ ಪರ್ಯಾಯ ವೇದಿಕೆ ಕಲ್ಪಿಸಿತು. ಯಾವುದೇ ಸಮ್ಮೇಳನಗಳಲ್ಲೂ ಇಲ್ಲದ ಪಟ್ಟಾಂಗ ಕಟ್ಟೆ ಎನ್ನುವ ಯೋಚನೆ ವಿಶಿಷ್ಟ. ಆಸಕ್ತ ಸಾರ್ವಜನಿಕರು, ಶಾಲೆ, ಕಾಲೇಜಿನ ಮಕ್ಕಳ ಪ್ರತಿಭಾ ಪ್ರದರ್ಶನಕ್ಕೂ ವೇದಿಕೆ ಸಿಗಬೇಕು ಎನ್ನುವ ಯೋಚನೆ ಕಸಾಪ ತಾಲೂಕು ಅಧ್ಯಕ್ಷ ಡಾ.ಧನಂಜಯ ಕುಂಬ್ಳೆಯವರದ್ದು. ಯಾವುದೇ ಸಭೆಯಲ್ಲೂ ಈ ವಿಚಾರ ಚರ್ಚೆಯಾಗದಿದ್ದರೂ ಕೊನೇ ಕ್ಷಣದಲ್ಲಿ ಯೋಚಿಸಿ ಫೆ.20ರಂದು ರಾತ್ರಿ ಶಿಕ್ಷಕ ಮೋಹನ್ ಶಿರ್ಲಾಲ್ ಅವರೊಂದಿಗೆ ಚರ್ಚಿಸಿದಾಗ ಪಟ್ಟಾಂಗ ಕಟ್ಟೆ ಪರಿಕಲ್ಪನೆ ರೂಪುಗೊಂಡಿತು. ಇಲ್ಲಿ ಕಾರ್ಯಕ್ರಮದ ಬಗ್ಗೆ ಮುಕ್ತವಾಗಿ ಮಾತನಾಡಲು, ಹಾಡಲು, ನೃತ್ಯ ಮಾಡಲು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲು ಅವಕಾಶ ನೀಡಲಾಗಿತ್ತು. ಈ ವೇದಿಕೆಯನ್ನು ಆಸಕ್ತರು ಸಮರ್ಪಕವಾಗಿ ಬಳಸಿಕೊಂಡಿದ್ದರಿಂದ ಎಡೆಬಿಡದೆ ನಿರಂತರ ಕಾರ್ಯಕ್ರಮಗಳು ನಡೆದವು. ಸಭಾಂಗಣದೊಳಗೆ ನಡೆದ ಕಾರ್ಯಕ್ರಮಕ್ಕಿಂತಲೂ ಪಟ್ಟಾಂಗ ಕಟ್ಟೆ ಸಾರ್ವಜನಿಕರು, ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಯಿತು.

ಚಿತ್ರಕಲಾ ಸ್ಪರ್ಧೆ

ಮಂಗಳೂರು ವಿಶ್ವವಿದ್ಯಾಲಯದ ಎನ್.ಜಿ.ಪಾವಂಜೆ ಲಲಿತಾ ಕಲಾ ಪೀಠದ ವತಿಯಿಂದ ಜಿಲ್ಲಾಮಟ್ಟದ ಪ್ರಾಥಮಿಕ, ಪ್ರೌಢ ಮತ್ತು ಪದವಿ ವಿಭಾಗಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಮಕ್ಕಳು ಅತಿಯಾದ ಉತ್ಸಾಹದಿಂದ ಭಾಗವಹಿಸಿದ್ದರು. ವಿಜೇತರಿಗೆ ನಗದು ಪುರಸ್ಕಾರ ಹಾಗೂ ಪ್ರಮಾಣ ಪತ್ರಗಳನ್ನು ನೀಡಿ ಗೌರವಿಸಲಾಯಿತು. ವಿ.ವಿ. ಹಣಕಾಸು ಅಧಿಕಾರಿ ದೇವೇಂದ್ರಪ್ಪ ಪಟ್ಟಾಂಗ ಕಟ್ಟೆಯಲ್ಲಿ ಉದ್ಘಾಟಿಸಿದರು. ಚಿತ್ರಕಲಾ ಶಿಕ್ಷಕ ರಫೀಕ್ ತುಂಬೆ, ಕಸಾಪ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್, ಕಸಾಪ ಪದಾಧಿಕಾರಿಗಳಾದ ತ್ಯಾಗಂ ಹರೇಕಳ ಇದ್ದರು. ಬಹುಮಾನ ವಿತರಣಾ ಸಮಾರಂಭದಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಭಾಗವಹಿಸಿದ್ದರು. ಡಾ.ನಂಜಯ ಕುಂಬ್ಳೆ ಮತ್ತು ಮೋಹನ್ ಶಿರ್ಲಾಲ್ ನಿರೂಪಿಸಿದರು.

ಐದು ಗೋಷ್ಠಿಗಳು, ಮೂರು ಉಪನ್ಯಾಸಗಳು

ಮೊದಲ ದಿನ ಎರಡು ಗೋಷ್ಠಿಗಳು, ಒಂದು ಉಪನ್ಯಾಸ ನಡೆದರೆ, ಎರಡನೇ ದಿನವಾದ ಶನಿವಾರ ಮೂರು ಗೋಷ್ಠಿಗಳು ಹಾಗೂ ಎರಡು ಉಪನ್ಯಾಸ ನಡೆಯಿತು. ಎರಡು ಗೋಷ್ಠಿಗಳ ಬಳಿಕ ‘ಮೇಲ್ತೆನೆ’ ಆಶ್ರಯದಲ್ಲಿ ನಡೆದ ಬ್ಯಾರಿ ಹಾಡುಗಳಿಂದ ವಿದ್ಯಾರ್ಥಿಗಳಿಂದ ಕರತಾಡನ ವ್ಯಕ್ತವಾಯಿತು.

ಐದು ಠರಾವುಗಳ ಮಂಡನೆ

ಸಮ್ಮೇಳನದಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ ಐದು ಠರಾವುಗಳನ್ನು ಮಂಡಿಸಲಾಗಿದೆ.

  • ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನಿವೃತ್ತಿಯಿಂದ ಮಂಜೂರಾದರೂ ಖಾಲಿಯಾಗಿರುವ 70 ಸಾವಿರಕ್ಕೂ ಹೆಚ್ಚು ಶಿಕ್ಷಕರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಿ ಮಕ್ಕಳ ಕಲಿಕೆಗೆ ಅನುಕೂಲ ಮಾಡಿಕೊಡಬೇಕು.
  • ಅನುದಾನಿತ ಶಾಲೆಗಳಲ್ಲಿ ಹತ್ತಾರು ವರ್ಷಗಳಿಂದ ಯಾವುದೇ ಹುದ್ದೆ ಭರ್ತಿಯಾಗದ ಪರಿಣಾಮ ಹೆಚ್ಚಿನ ಶಾಲೆಗಳು ಶಿಕ್ಷಕರ ಕೊರತೆಯಿಂದ ಮುಚ್ಚಲ್ಪಟ್ಟಿದೆ. ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಹುದ್ದೆಗಳನ್ನು ತುಂಬದಿರುವ ಕಾರಣ ಮಕ್ಕಳು ಆಂಗ್ಲಮಾಧ್ಯಮ ಶಾಲೆಗಳತ್ತ ಆಕರ್ಷಿತರಾಗುತ್ತಿದ್ದಾರೆ.
  • ಕನ್ನಡ ಶಾಲೆಗಳಲ್ಲಿ ಅಕ್ಷರ ದಾಸೋಹ, ಪ್ರತಿಭಾ ಕಾರಂಜಿ ಇನ್ನಿತರ ನೂರಾರು ಕೆಲಸಗಳು ಶಿಕ್ಷಕರ ಮೇಲೆ ಒತ್ತಡ ಹೆಚ್ಚಿಸುವುದರಿಂದ ಬೋಧನೆಗೆ ಕಾಲಾವಕಾಶ ಸಿಗುತ್ತಿಲ್ಲ. ಇದರಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಕಡಿಮೆಯಾಗುತ್ತಿವೆ. ಸಮಸ್ಯೆಯನ್ನು ಬಗೆಹರಿಸಲು ಎಲ್ಲ ಸರ್ಕಾರಿ, ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ಓರ್ವ ಗುಮಾಸ್ತನನ್ನು ಕಡ್ಡಾಯವಾಗಿ ನೇಮಿಸಬೇಕು.
  • ಕರ್ನಾಟಕದ ಖಾಸಗಿ ಡೀಮ್ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣದ ಪದವಿ ತರಗತಿಗಳಲ್ಲಿ ಕನ್ನಡ ಭಾಷಾ ಕಲಿಕೆ ಹಾಗೂ ಕನ್ನಡ ಐಚ್ಛಿಕ ವಿಷಯಗಳನ್ನು ಪಠ್ಯಕ್ರಮದಲ್ಲಿ ಕೈಬಿಡುತ್ತಿರುವುದು ಖಂಡನೀಯ. ಪದವಿಯಲ್ಲಿ ನಾಲ್ಕು ಸೆಮಿಸ್ಟಾರ್‌ಗಳಲ್ಲಿ ಕನ್ನಡವನ್ನು ಬೋಧಿಸುವುದನ್ನು ಕಡ್ಡಾಯ ಮಾಡಬೇಕು.
  • ಕರ್ನಾಟಕ ವಿಶ್ವವಿದ್ಯಾಲಯದ ಎಲ್ಲ ಕಾಲೇಜುಗಳಲ್ಲಿ ಕನ್ನಡ ಐಚ್ಛಿಕವನ್ನು ಕಡ್ಡಾಯ ಮಾಡಬೇಕೆಂದು ಸಮ್ಮೇಳನ ಒತ್ತಾಯಿಸಿದೆ. ಕೋಶಾಧ್ಯಕ್ಷ ಐತಪ್ಪ ನಾಯ್ಕ ಠರಾವು ಮಂಡಿಸಿದರು.

ಕನ್ನಡದ ಪರಂಪರೆ, ಸಂಸ್ಕೃತಿ, ಕನ್ನಡ ಎಂದರೆ ಕೇವಲ ಭಾಷೆಯಲ್ಲ. ಮನಸ್ಸಿನ ಊಹನಾತೀತ ಕನ್ನಡ ಶಕ್ತಿಯೂ ಉಳಿಯಬೇಕಿದೆ. ಸಾಹಿತ್ಯ ಎಂದರೆ ಪಟ್ಟಾಂಗ. ಕೃಷ್ಣ ಸಂಧಾನ ಎನ್ನುವ ಒಂದು ಕಥೆ ತೆಗೆದುಕೊಂಡು ಮಾತನಾಡಿದರೆ ಹತ್ತು ಕೃಷ್ಣ, ಹತ್ತು ಕೌರವ ಹುಟ್ಟಿಕೊಳ್ಳುತ್ತಾರೆ. ಈ ರೀತಿ ಪಟ್ಟಾಂಗ ಹೊಡೆಯುವ ಅದ್ಭುತ ಶಕ್ತಿ ದ.ಕ. ಜಿಲ್ಲೆಯವರಿಗಿದೆ. ಈ ಹಿನ್ನೆಲೆಯಲ್ಲಿ 27ನೇ ಸಾಹಿತ್ಯ ಸಮ್ಮೇಳನ ಹೊಸತನವನ್ನು ನೀಡಲು ಸಾಧ್ಯವಾಗಿದೆ. ಜೋಗಿ ಗಿರೀಶ್ ರಾವ್ ಉಪ್ಪಿನಂಗಡಿ, ಲೇಖಕರು https://www.vijayavani.net/from-25-nadyodi-deity-brahmakalashotsava https://www.vijayavani.net/festival-at-punarur-temple

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net