ಬಳಕೆಯಲ್ಲಿ ವೈವಿಧ್ಯತೆಯಿದ್ದರೂ ಏಕತೆ ಕನ್ನಡ ಭಾಷೆ ಹೆಗ್ಗಳಿಕೆ

05-11-Shiva-3
ರಾಯಚೂರಿನ ಕನ್ನಡ ಭವನದಲ್ಲಿ ಹೊಸಮನಿ ಪ್ರಕಾಶನದಿಂದ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಉದ್ಘಾಟಿಸಿದರು. ಪ್ರಕಾಶನ ಸಂಸ್ಥೆ ಅಧ್ಯಕ್ಷ ಬಷೀರ ಅಹ್ಮದ್ ಹೊಸಮನಿ, ಪತ್ರಕರ್ತ ಅರವಿಂದ ಕುಲಕರ್ಣಿ, ಕಲಾವಿದರಾದ ಎಚ್.ಎಚ್.ಮ್ಯಾದಾರ, ಅಮರಪ್ಪಗೌಡ, ಇಮಾಮುದ್ದೀನ್, ರೇಣುಕಾ ಮಾಡಗಿರಿ ಇದ್ದರು.
Published on

ರಾಯಚೂರು: ರಾಜ್ಯದಲ್ಲಿ ಪ್ರಾಂತವಾರು ಕನ್ನಡ ಭಾಷೆಯ ಬಳಕೆಯಲ್ಲಿ ವೈವಿಧ್ಯತೆಯಿದ್ದರೂ ಏಕತೆ ಹೊಂದಿರುವುದು ಕನ್ನಡ ಭಾಷೆಯ ಹೆಗ್ಗಳಿಕೆಯಾಗಿದ್ದು, ಆಯಾ ಪ್ರಾಂತದಲ್ಲಿ ಜನರು ಬಳಕೆ ಮಾಡುವ ಕನ್ನಡಕ್ಕೆ ಆದ ಲಾಲಿತ್ಯವನ್ನು ಹೊಂದಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ವೆಂಕಟೇಶ ಬೇವಿನಬೆಂಚಿ ಹೇಳಿದರು.
ಸ್ಥಳೀಯ ಕನ್ನಡ ಭವನದಲ್ಲಿ ಹೊಸಮನಿ ಪ್ರಕಾಶನದಿಂದ ಭಾನುವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ನಿಮಿತ್ತ ನೀಡಲಾಗುವ ನೃಪತುಂಗ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕನ್ನಡ ಶುದ್ಧ ಹಾಗೂ ಸಿಹಿಯಾದ ಭಾಷೆಯಾಗಿದ್ದು, ಜಗತ್ತಿನಲ್ಲಿ ಸುಂದರ ಹಾಗೂ ಸುಲಲಿತವಾಗಿ ಮಾತನಾಡುವ ಭಾಷೆಯಲ್ಲಿ ಒಂದಾಗಿದೆ ಎಂದರು.
ಕನ್ನಡವನ್ನು ಮಾತನಾಡುವಾಗ ಬೇರೆ ಬೇರೆ ಪ್ರಾಂತದಲ್ಲಿ ಒಂದೊಂದು ರೀತಿ ಬಳಕೆ ಮಾಡುತ್ತಿದ್ದರೂ ಎಲ್ಲರ ಮನಸ್ಸುಗಳು ಕನ್ನಡವಾಗಿರುವುದು ಕನ್ನಡಕ್ಕಿರುವ ಶಕ್ತಿಯಾಗಿದೆ. ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಬಷೀರ್ ಅಹ್ಮದ್ ಹೊಸಮನಿ ಅಂತವರಿಗೆ ಎಲ್ಲರೂ ಬೆಂಬಲಿಸಬೇಕಾಗಿದೆ ಎಂದು ವೆಂಕಟೇಶ ಬೇವಿನಬೆಂಚಿ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅಶೋಕಕುಮಾರ ಜೈನ್ ಮಾತನಾಡಿ, ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಮರಲ್ಲಿ ಬಹುತೇಕರಿಗೆ ಕನ್ನಡ ಬರುವುದಿಲ್ಲ. ಆದರೆ ಆ ಸಮಾಜದಲ್ಲಿಯೂ ಕನ್ನಡದ ಬಗ್ಗೆ ಅಭಿಮಾನ ಹೊಂದಿರುವ ಬಷೀರ್ ಅಹ್ಮದ್ ಹೊಸಮನಿ ಸೇರಿದಂತೆ ಹಲವರಿದ್ದು, ಅವರಿಗೆ ಪ್ರೋತ್ಸಾಹಿಸುವ ಕೆಲಸವಾಗಬೇಕಾಗಲಿದೆ ಎಂದರು.
ಹೊಸಮನಿ ಪ್ರಕಾಶನದ ಅಧ್ಯಕ್ಷ ಬಷೀರ ಅಹ್ಮದ್ ಹೊಸಮನಿ ಮಾತನಾಡಿ, ಕನ್ನಡ ಕ್ರಿಯಾ ಸಮಿತಿ ಮೂಲಕ ಕನ್ನಡಕ್ಕಾಗಿ ಕಳೆದ ಮೂರ‌್ನಾಲ್ಕು ದಶಕಗಳಿಂದ ಕೆಲಸ ಮಾಡುತ್ತಾ ಬಂದಿದ್ದು, ಕನ್ನಡ ಕೃತಿಗಳ ಪ್ರಕಟಣೆಗೆ ಒತ್ತು ನೀಡಬೇಕು ಎನ್ನುವ ನಿಟ್ಟಿನಲ್ಲಿ ಪ್ರಕಾಶನ ಸಂಸ್ಥೆಯನ್ನು 2008ರಲ್ಲಿ ಆರಂಭಿಸಲಾಯಿತು. ಜತೆಗೆ ಕನ್ನಡಕ್ಕಾಗಿ ದುಡಿಯುವರರಿಗೆ ಪ್ರೋತ್ಸಾಹಿಸಬೇಕು ಎನ್ನುವ ನಿಟ್ಟಿನಲ್ಲಿ ನೃಪತುಂಗ ಪ್ರಶಸ್ತಿ ನೀಡಲು ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಯಚೂರು ವಾಣಿ ದಿನಪತ್ರಿಕೆ ವ್ಯವಸ್ಥಾಪಕ ಸಂಪಾದಕ ಅರವಿಂದ ಕುಲಕರ್ಣಿ, ಹಿರಿಯ ಚುಕ್ಕಿ ಚಿತ್ರ ಕಲಾವಿದ ಎಚ್.ಎಚ್.ಮ್ಯಾದಾರ, ಸಂಗೀತಗಾರ ಅಮರಪ್ಪಗೌಡ, ನಾಟಕಕಾರ ಇಮಾಮುದ್ದೀನ್, ಕಥೆಗಾರ್ತಿ ರೇಣುಕಾ ಮಾಡಗಿರಿಗೆ ನೃಪತುಂಗ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಗೌರವಾಧ್ಯಕ್ಷ ರಫೀಕ್ ಅಹ್ಮದ್, ಪ್ರಕಾಶನ ಸಂಸ್ಥೆಯ ಪರ್ವೀನಾ ಬೇಗಂ, ಶರಣಗೌಡ ಹಾಗೂ ಪ್ರಶಸ್ತಿ ಪುರಸ್ಕೃತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net