

ಮೈಸೂರು: ಕನ್ನಡ ಭಾಷೆ ಮತ್ತು ತಂತ್ರಜ್ಞಾನ ಜತೆಯಾಗಿ ಸಾಗಿದರೆ ಮಾತ್ರ ಭಾಷೆ ಉಳಿಯಲು ಸಾಧ್ಯ ಎಂದು ವಿಶ್ರಾಂತ ಕುಲಪತಿ ಡಾ. ಕೆ. ಚಿದಾನಂದಗೌಡ ಅಭಿಪ್ರಾಯಪಟ್ಟರು.
ಸಿಬ್ಬಂದಿ ಮತ್ತು ಆಡಳಿ ಸುಧಾರಣೆ ಇಲಾಖೆ ಹಾಗೂ ಇ-ಆಡಳಿತ ಕೇಂದ್ರದ ವತಿಯಿಂದ ನಗರದ ಆಡಳಿತ ತರಬೇತಿ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ‘ಕನ್ನಡ ಕಮ್ಮಟ-2023’ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನದಲ್ಲಿ ನಮ್ಮ ಮಾತೃಭಾಷೆ ಬಳಕೆ ಇಲ್ಲದೆ ಇರುವುದರಿಂದ ಇಂದಿನ ಆಧುನಿಕ ಯುಗದಲ್ಲಿ ಕನ್ನಡ ಭಾಷೆ ಮತ್ತು ಕನ್ನಡಿಗರು ಹಿಂದೆ ಉಳಿಯುತ್ತಿದ್ದಾರೆ. ಕನ್ನಡ ಭಾಷೆಗೆ ತಂತ್ರಾಂಶ ಅತ್ಯಗತ್ಯ. ಕಂಪ್ಯೂಟರ್‌ನಲ್ಲಿ ಇಂಗ್ಲಿಷ್ ಭಾಷೆಗೆ ನೀಡಿರುವ ಪ್ರಾಮುಖ್ಯತೆಯನ್ನು ಕನ್ನಡಕ್ಕೆ ನೀಡದಿದ್ದರೆ ಭಾಷೆ ಉಳಿಯುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಇಂದು ಜಗತ್ತಿನ ಬಹುತೇಕ ದೇಶಗಳು ತಮ್ಮ ವಾಣಿಜ್ಯ ವ್ಯವಹಾರಗಳನ್ನೆಲ್ಲ ಆನ್‌ಲೈನ್ ಮೂಲಕವೇ ಆರಂಭಿಸುತ್ತಿರುವುದರಿಂದ ಭಾಷೆ ಬಳಕೆ ಮಹತ್ವ ಪಡೆದುಕೊಂಡಿದೆ. ತಂತ್ರಜ್ಞಾನದಲ್ಲಿ ಸ್ಥಳೀಯ ಭಾಷೆಗಳ ಬಳಕೆ ಹೆಚ್ಚಾಗಬೇಕು. ಆಗ ನಮ್ಮ ಭಾಷೆಗೆ ಮಾನ್ಯತೆ ಸಿಗುತ್ತದೆ. ಎಲ್ಲರ ಬಳಕೆಗೂ ಲಭ್ಯವಾಗುತ್ತದೆ. ಜತೆಗೆ ಪುಟ್ಟ ಉದ್ಯಮ ಸ್ಥಾಪನೆ ಮಾಡಬಹುದು. ಕೆನಡ, ಅಮೆರಿಕ, ಜಪಾನ್‌ನಂತಹ ದೇಶದಲ್ಲಿ ಆನ್‌ಲೈನ್ ಮೂಲಕ ಕೇವಲ 24 ಗಂಟೆಯೊಳಗೆ ಮಾರುಕಟ್ಟೆ ತೆರೆಯಬಹುದು. ಇದು ನಮ್ಮ ದೇಶದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.
ಸಾಹಿತಿ ಪೂರ್ಣಚಂದ್ರ ತೇಜಸ್ವಿ ಹೇಳುವಂತೆ ಒಂದು ಭಾಷೆಯ ಅಳಿವು- ಉಳಿವು ಆ ಭಾಷೆಗೆ ಎಷ್ಟು ಪ್ರಶಸ್ತಿ ಸಿಕ್ಕಿದೆ ಎಂಬುದರಿಂದ ನಿರ್ಧಾರವಾಗುವುದಿಲ್ಲ. ಬದಲಿಗೆ ಭಾಷೆಯನ್ನು ಎಷ್ಟು ಜನರು ಬಳಸುತ್ತಿದ್ದಾರೆ ಎಂಬುದರ ಮೇಲೆ ಅಲವಂಬಿತವಾಗಿರುತ್ತದೆ. ಇಲ್ಲವಾದರೆ ಸಂಸ್ಕೃತ ಭಾಷೆಗೆ ಬಂದ ಪರಿಸ್ಥಿತಿಯೇ ಕನ್ನಡ ಭಾಷೆಗೂ ಬರುತ್ತದೆ ಎಂದು ಎಚ್ಚರಿಸಿದ್ದರು ಎಂದು ಸ್ಮರಿಸಿದರು.
ಸರ್ಕಾರಿ ಇ-ಆಡಳಿತ ವಿಭಾಗದ ಕಾರ್ಯದರ್ಶಿ ವಿ.ಪೊನ್ನರಾಜ್, ಮುಖ್ಯಮಂತ್ರಿ ಇ- ಆಡಳಿತ ಸಲಹೆಗಾರ ಬೇಳೂರು ಸುದರ್ಶನ್, ಇ-ಕನ್ನಡ ಯೋಜನಾ ನಿರ್ದೇಶಕ ಎಚ್.ಎಲ್. ಪ್ರಭಾಕರ್ ಇತರರು ಇದ್ದರು.