

ಸವಣೂರ: ನಾಡನ್ನು ಆಳಿದ ಕೆಲ ರಾಜರ ಕೊಡುಗೆಯಿಂದ ಕನ್ನಡ ಭಾಷೆ ಶ್ರೀಮಂತಗೊಳ್ಳಲು ಸಾಧ್ಯವಾಗಿದೆ ಎಂದು ಜೆಸಿಐ ನಮ್ಮ ಸವಣೂರು ಘಟಕದ ಅಧ್ಯಕ್ಷೆ ತೇಜಸ್ವಿನಿ ಕೊಂಡಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಪಟ್ಟಣದ ಲಲಾಟೇಶ್ವರ ಪ್ರಾಥಮಿಕ ಶಾಲೆಯ ಎಸ್ಎಸ್ಪಿ ಟುಟ್ಯೋರಿಯಲ್ಸ್ನಲ್ಲಿ ಸೋಮವಾರ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ನ 111ನೇ ಸಂಸ್ಥಾಪನಾ ದಿನಾಚರಣೆ-2025 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗಡಿನಾಡಿನಲ್ಲಿ ಕನ್ನಡ, ಕನ್ನಡಿಗರನ್ನು ರಕ್ಷಿಸಿ ಭಾಷೆಯ ಉಳಿವಿಗಾಗಿ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಿದಲ್ಲಿ ಜೆಸಿಐ ನಮ್ಮ ಸವಣೂರ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಶಿಕ್ಷಕ ಕೆ.ಎಸ್. ಇಟಗಿಮಠ ಉಪನ್ಯಾಸ ನೀಡಿ, ರಾಜ್ಯ ಸರ್ಕಾರ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಶೇ. 90ರಷ್ಟು ಸರ್ಕಾರಿ ಹುದ್ದೆಗಳನ್ನು ಮೀಸಲಿಡಬೇಕು. ಇದರಿಂದ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವವರ ಸಂಖ್ಯೆ ಹೆಚ್ಚಲಿದೆ ಎಂದರು.
ಕಸಾಪ ತಾಲೂಕು ಘಟಕದ ಅಧ್ಯಕ್ಷ ಚಂದ್ರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಪ್ರಭು ಅರಗೋಳ, ಶಿಕ್ಷಕರಾದ ಬಸವರಾಜ ಚಳ್ಳಾಳ, ಶಂಭು ಭೋವಿ, ಪ್ರವೀಣ ಮಡಿವಾಳರ, ಶಂಭುಲಿಂಗಯ್ಯ ಇಚ್ಚಂಗಿಮಠ, ಈರಯ್ಯ ಹಿರೇಮಠ, ಕಸಾಪ ಪದಾಧಿಕಾರಿಗಳಾದ ಸಿ.ವಿ. ಗುತ್ತಲ, ವಿಶ್ವನಾಥ ಹಾವಣಗಿ, ಬಸನಗೌಡ ಪಾಟೀಲ ಇತರರಿದ್ದರು. ಪದಾಧಿಕಾರಿಗಳಾದ ಎಂ.ಎಸ್. ಮಲ್ಲನಗೌಡ್ರ ಹಾಗೂ ವಿದ್ಯಾಧರ ಕುತನಿ ಕಾರ್ಯಕ್ರಮ ನಿರ್ವಹಿಸಿದರು.