ಗ್ರಾಮೀಣ ಪ್ರದೇಶವೇ ಕನ್ನಡ ಭಾಷೆ ಉಗಮಸ್ಥಾನ

D. 16 MDG 1P1
Published on

ಮೂಡಿಕೆರೆ: ಗ್ರಾಮೀಣ ಪ್ರದೇಶವೇ ಕನ್ನಡ ಭಾಷೆ ಉಗಮ ಸ್ಥಾನವಾಗಿದ್ದು, ಹಳ್ಳಿಯ ಜನ ತಮ್ಮ ಶೈಲಿಯಲ್ಲಿ ಮಾತನಾಡುವ ಭಾಷೆಗೆ ವರ್ಣ ರಂಜಿತ ಸ್ಥಾನಮಾನವಿರುತ್ತದೆ ಎಂದು ಗ್ಯಾರಂಟಿ ಯೋಜನೆ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಸಿ.ಶಿವಾನಂದ ಸ್ವಾಮಿ ಹೇಳಿದರು.

ಗೋಣಿಬೀಡು ಹೊಯ್ಸಳ ಪ್ರೌಢಶಾಲೆ ಆವರಣದಲ್ಲಿ ಸಿರಿಗನ್ನಡವೇದಿಕೆ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆದ ನುಡಿ ನಿತ್ಯೋತ್ಸವ ಹಾಗೂ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡಕ್ಕೆ 2,500 ವರ್ಷದ ಪ್ರಾಚೀನ ಇತಿಹಾಸವಿದೆ. ಹಿಂದಿ ಹೊರೆತುಪಡಿಸಿದರೆ ಕನ್ನಡಕ್ಕೆ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಕನ್ನಡಿಗರು ಶ್ರಮವಹಿಸಿ ಕನ್ನಡ ಭಾಷೆ ಉಳಿಸಿ ಬೆಳೆಸಬೇಕು ಎಂದರು.

ಗಡಿ ಸಮಸ್ಯೆಯಿಂದ ಕನ್ನಡ ಉಳಿಸಲು ಹೋರಾಡುವ ಅನಿವಾರ್ಯತೆ ಇದೆ. ನಾಡಿನ ನೆಲ, ಜಲ ಗಡಿ ನೆಪದಲ್ಲಿ ಕನ್ನಡಿಗರಿಗೆ ಸಮಸ್ಯೆ ಬಂದರೂ ಅದನ್ನು ಭೇದಿಸುವ ಶಕ್ತಿ ಕನ್ನಡಿಗರಿಗಿದೆ. ಈ ಭಾಷೆಗೆ ಅಗೌರವ ಉಂಟು ಮಾಡುವವರಿಂದ ಗಡಿಸಮಸ್ಯೆ ಉಂಟಾಗಿದೆ. ಬೆಳಗಾವಿಯಲ್ಲಿ ನಮ್ಮ ಭಾಷೆ ಹೋರಾಟಗಾರರು ಕಾವಲು ಕಾಯದಿದ್ದರೆ ಕನ್ನಡದ ಮೇಲೆ ಇನ್ನಷ್ಟು ಆಕ್ರಮಣ ನಡೆಯುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿ, ಮನಸ್ಸಿನಲ್ಲಿ ಕನ್ನಡ ಉಳಿಸಿ ಇತರ ಭಾಷೆಗಳನ್ನು ಗೌರವಿಸುವ ರೂಢಿ ಬೆಳಸಿಕೊಂಡಾಗ ಕನ್ನಡ ಭಾಷೆಯ ಅಸ್ಮಿಯತೆ ಉಳಿಯುತ್ತೆದೆ. ಕನ್ನಡ ಪರ ಸಂಘ-ಸಂಸ್ಥೆಗಳು, ಸಾಹಿತ್ಯ ಪರಿಷತ್ ಈ ಭಾಷೆಯನ್ನು ಸಾಹಿತ್ಯಾತ್ಮಕವಾಗಿ ಬೆಳೆಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಸಿದರು.

ತಾಲೂಕು ಸಿರಿಗನ್ನಡ ವೇದಿಕೆ ಪ್ರಧಾನ ಕಾರ್ಯದರ್ಶಿ ಡಾ.ಮೋಹನ್ ರಾಜಣ್ಣ , ಗೃಹ ಮಂಡಳಿ ಮಾಜಿ ಅಧ್ಯಕ್ಷ ಜಿ.ಎಚ್.ಹಾಲಪ್ಪಗೌಡ, ನಟ ಧರ್ಮೇಂದ್ರ, ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಎಂ.ಆರ್.ಪ್ರಕಾಶ್, ತಾಲೂಕು ಅಧ್ಯಕ್ಷ ಎಂ.ಆರ್.ಪೂರ್ಣಶ್ ಮೂರ್ತಿ, ಸಾಹಿತಿಗಳಾದ ಡಿ.ಎಂ.ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net