

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಇತ್ತೀಚಿನ ವರ್ಷಗಳಲ್ಲಿ ಕನ್ನಡ ಭಾಷೆಯ ಮೂಲ ಪದಗಳನ್ನು ನಾವು ಬಳಸದೆ, ಅದೆಷ್ಟೋ ಪದಗಳು ನಮ್ಮಿಂದ ಮರೆಯಾಗಿವೆ. ನಮ್ಮ ಹಿರಿಯರು ನಮಗೆ ಕನ್ನಡ ಭಾಷೆಯನ್ನು ಬೆಳೆಸಿ, ಉಳಿಸಿ ನಮ್ಮ ಪೀಳಿಗೆಗೆ ದಾಟಿಸಿದ್ದಾರೆ. ಇಂತಹ ಕನ್ನಡ ಭಾಷೆಯನ್ನು ನಾವು ಮುಂದಿನ ಪೀಳಿಗೆಗೆ ರವಾನಿಸುವ ಗುರುತರವಾದ ಹೊಣೆ ನಮ್ಮದಾಗಲಿ ಎಂದು ಹಿರಿಯ ಸಾಹಿತಿ, ವಿಶ್ರಾಂತ ಪ್ರಾಂಶುಪಾಲ ಡಾ.ಪಾದೇಕಲ್ಲು ವಿಷ್ಣುಭಟ್ ಹೇಳಿದರು.
ಎಸ್.ಆರ್. ಪದವಿ ಪೂರ್ವ ಕಾಲೇಜಿನಲ್ಲಿ 2025-2026ನೇ ಶೈಕ್ಷಣಿಕ ವರ್ಷದ ಕನ್ನಡ ಸಾಹಿತ್ಯ ಸಂಘ, ಸಾಂಸ್ಕೃತಿಕ ಸಂಘ ಉದ್ಘಾಟಿಸಿ ಮಾತನಾಡಿದರು.
ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ನಾಗರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಭಾಷೆಯ ಹಿರಿಯ ಸಾಹಿತಿಗಳ ಕೃತಿಗಳು, ಅನೇಕ ಮೌಲ್ಯಯುತವಾದ ಬರಹಗಳು ನಮ್ಮ ಬದುಕಿನಲ್ಲಿ ಮಾರ್ಗದರ್ಶನ ನೀಡುತ್ತದೆ. ದಿನನಿತ್ಯ ನಾವು ಮಾತನಾಡುವಾಗ ಕನ್ನಡ ಪದ ಬಳಸಿ ಕನ್ನಡ ಭಾಷೆ ಉಳಿಸಬೇಕು ಎಂದರು.
ಕಾರ್ಯದರ್ಶಿ ಸಪ್ನಾ ಎನ್.ಶೆಟ್ಟಿ, ಪ್ರಾಂಶುಪಾಲ ಪ್ರಶಾಂತ್, ಕನ್ನಡ ಸಾಹಿತ್ಯ ಸಂಘ ಮತ್ತು ಸಾಂಸ್ಕೃತಿಕ ಸಂಘದ ಸಂಚಾಲಕ ದೀಪಕ್ ಎನ್.ಉಪಸ್ಥಿತರಿದ್ದರು. ಕನ್ನಡದಲ್ಲಿ ಪೂಣಾರ್ಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ದೀಪಕ್ ಎನ್., ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಪ್ರಗತಿ ಅತಿಥಿ ಪರಿಚಯಿಸಿದರು. ವಿದ್ಯಾರ್ಥಿಗಳಾದ ಸ್ಫೂರ್ತಿ ನಿರೂಪಿಸಿದರು. ಶಿವಾಜಿ ವಂದಿಸಿದರು.