ಭಾವ ಅಭಿವ್ಯಕ್ತಿಗೆ ಹತ್ತಿರವಾದದ್ದು ಕನ್ನಡ ಭಾಷೆ

12 vpt 1.2
ಬೇಟೋಳಿ ಶಾಲೆಯಲ್ಲಿ ನಡೆದ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ.ಬಸವರಾಜ್ ಉಪನ್ಯಾಸ ನೀಡಿದರು. ರಾಜೇಶ್ ಪದ್ಮನಾಭ, ರಜಾಕ್, ಸಾವಿತ್ರಿ, ಸೀತಾ ಇದ್ದರು.
Published on

ವಿರಾಜಪೇಟೆ: ಇಂಗ್ಲಿಷ್ ಭಾಷೆಯು ಉದ್ಯೋಗದ ಭಾಷೆಯಾದರೂ ಮನುಷ್ಯನ ಭಾವ ಅಭಿವ್ಯಕ್ತಿಗೆ ಹತ್ತಿರವಾದದ್ದು ಮಾತೃ ಭಾಷೆ ಕನ್ನಡ ಎಂದು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ.ಕೆ.ಬಸವರಾಜ್ ಅಭಿಪ್ರಾಯಪಟ್ಟರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಬೇಟೋಳಿ ಗುಂಡಿಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಎನ್.ಮಹಾಬಲೇಶ್ವರ್ ಭಟ್ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕನ್ನಡದ ಏಳು ಬೀಳುಗಳ ಸಮೀಕ್ಷೆಯ ಬಗ್ಗೆ ಉಪನ್ಯಾಸ ನೀಡಿದರು.

ಪಂಪ, ರನ್ನ, ಪೊನ್ನರು ರಚಿಸಿದ ಕಾವ್ಯಗಳು ಇಂದಿಗೂ ಜೀವಂತವಾಗಿದ್ದು ಸಾರ್ವಕಾಲಿಕ ಸಂದೇಶವನ್ನು ನೀಡುತ್ತದೆ. ವಚನ ಸಾಹಿತ್ಯವು ವಿಶ್ವಮಾನ್ಯವಾಗಿದ್ದು ಸಾರ್ವತ್ರಿಕವಾಗಿ ಜನಮನ ಸೆಳೆದಿದೆ. ದಾಸ ಸಾಹಿತ್ಯದ ಕೀರ್ತನೆಗಳು ಎಂದಿಗೂ ಜನಪ್ರಿಯವಾಗಿವೆ. ಕನ್ನಡ ಭಾಷೆಯು ಆಂಗ್ಲ, ಹಿಂದಿ ಭಾಷೆಗಳ ಪ್ರಭಾವದಿಂದ ನಲುಗುತ್ತಿದ್ದು, ಕನ್ನಡ ಭಾಷೆಯ ಉಳಿವಿನ ಬಗ್ಗೆ ಕಾಳಜಿ ವಹಿಸಿ ಕನ್ನಡ ಭಾಷೆಯ ಬಳಕೆಯನ್ನು ವ್ಯಾಪಕವಾಗಿಸಿ ಎಂದು ಕರೆ ನೀಡಿದರು.

ಶಾಲಾ ಸಮಿತಿಯ ಅಧ್ಯಕ್ಷ ಮೀತಲತಂಡ ಇಸ್ಮಾಯಿಲ್ ಮಾತನಾಡಿ, ಕನ್ನಡ ಭಾಷೆಯಲ್ಲಿ ಮಾತನಾಡಬೇಕಾದ ನಾವು ಬೇರೆ ಭಾಷೆಯ ಬಳಕೆಗೆ ಆಸಕ್ತಿಯನ್ನು ತೋರಿಸುತ್ತಿರುವುದು ಹೆಚ್ಚಾಗಿ ಕಂಡುಬರುತ್ತಿದೆ. ನಾವು ಕನ್ನಡದಲ್ಲಿಯೇ ವ್ಯವಹರಿಸುವುದರ ಮೂಲಕ ಭಾಷೆಯನ್ನು ಬೆಳೆಸಬಹುದು ಎಂದರು.

ಬೇಟೋಳಿ ಗ್ರಾಮ ಪಂಚಾಯಿತಿ ಸದಸ್ಯ ರಜಾಕ್ ಮಾತನಾಡಿ, ನಮ್ಮ ಗ್ರಾಮದ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ದತ್ತಿನಿಧಿ ಕಾರ್ಯಕ್ರಮವನ್ನು ನೀಡಿ ಮಕ್ಕಳಿಗೆ ಉಪಯುಕ್ತ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ ಎಂದರು.

ವಿರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಿ.ಪಿ.ರಾಜೇಶ್ ಪದ್ಮನಾಭ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಯಕ್ರಮದ ಮಹತ್ವ ಹಾಗೂ ಮುಂದಿನ ಕ್ರಿಯಾಯೋಜನೆಯ ಬಗ್ಗೆ ಮಾಹಿತಿ ನೀಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಎಚ್.ಜಿ.ಸಾವಿತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಮುಖ್ಯಶಿಕ್ಷಕಿ ಸೀತಾ, ಸಹ ಶಿಕ್ಷಕರು, ಶಾಲಾ ಮಕ್ಕಳು ಉಪಸ್ಥಿತರಿದ್ದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net