ಕನ್ನಡ ಭಾಷೆಯ ಬೆಳವಣಿಗೆಯ ವೇಗ ಕುಂಠಿತ : ಪುರುಷೋತ್ತಮ ಬಿಳಿಮಲೆ ಕಳವಳ

niranthara
Published on

ಮೈಸೂರು: ಕನ್ನಡದ ಭಾಷೆಯ ಬೆಳವಣಿಗೆಯ ವೇಗ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಇದ್ದು, ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಹಿಂದಿ ಭಾಷೆಯು ಕನ್ನಡ ಭಾಷೆಯನ್ನು ಹೊಸಕಿ ಹಾಕುವುದು ಹೆಚ್ಚು ಕಷ್ಟವಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಎಂದು ಕಳವಳ ವ್ಯಕ್ತಪಡಿಸಿದರು.

ನಿರಂತರ ಫೌಂಡೇಷನ್ ವತಿಯಿಂದ ನಗರದ ಕಲಾಮಂದಿರದ ಕಿರುರಂಗಮಂದಿರ ಆವರಣದಲ್ಲಿ ಡಿ.30ರವರೆಗೆ ಹಮ್ಮಿಕೊಂಡಿರುವ ‘ನಿರಂತರ ರಂಗ ಉತ್ಸವ’ಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿ, ದೇಶದಲ್ಲಿ ಕನ್ನಡ ಭಾಷೆಯ ಬೆಳವಣಿಗೆಯ ಪ್ರಮಾಣ ಶೇ.3 ರಷ್ಟು ಮಾತ್ರ ಇದೆ. ಆದರೆ, ಹಿಂದಿ ಭಾಷೆ ಶೇ.66 ರಷ್ಟು ವೇಗದಲ್ಲಿ ಬೆಳೆಯುತ್ತಿದೆ. ಈ ವೇಗದಲ್ಲಿ ಸಾಗುತ್ತಿರುವ ಹಿಂದಿ ಭಾಷೆ ಕುಂಟುತ್ತಾ ಸಾಗುತ್ತಿರುವ ಕನ್ನಡ ಭಾಷೆಯನ್ನು ಹೊಸಕಿ ಹಾಕುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕನ್ನಡದ 230 ಸಹೋದರ ಭಾಷೆಗಳು ಇದ್ದು, ಈ ಭಾಷೆಗಳನ್ನು ಮಾತನಾಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ರಾಜ್ಯದ ಯಾವುದೇ ಭಾಷೆಯ ಅಂಕಿ ಅಂಶ ತೆಗೆದುಕೊಂಡರೂ ಕಳೆದ 20 ವರ್ಷಗಳಲ್ಲಿ ಅವುಗಳ ಸಂಖ್ಯೆ ಕುಸಿತ ಕಾಣುತ್ತಿದೆ. 1881ರ ಜನಗಣತಿ ಪ್ರಕಾರ ಕೊರಗ ಭಾಷೆ ಮಾತನಾಡುವವರು ಸಂಖ್ಯೆ 55 ಸಾವಿರ ಇತ್ತು, 2011ರಲ್ಲಿ ಈ ಸಂಖ್ಯೆ 2 ಸಾವಿರಕ್ಕೆ ಇಳಿಕೆಯಾಗಿದೆ. ಮುಂದಿನ 20-30 ವರ್ಷಗಳಲ್ಲಿ ಕೊರಗ ಭಾಷೆ ಕಣ್ಮರೆಯಾಗುವ ಸಾಧ್ಯತೆ ಇದೆ. ಕೊಡವ ಭಾಷೆ ಮಾತನಾಡುವವರ ಸಂಖ್ಯೆ 2001ರಲ್ಲಿ 1.66 ಲಕ್ಷ ಇತ್ತು, 2011ರಲ್ಲಿ ಈ ಸಂಖ್ಯೆ 1.36 ಲಕ್ಷಕ್ಕೆ ಕುಸಿತ ಕಂಡಿದೆ ಎಂದರು.

ದೇಶದಲ್ಲಿರುವ 19 ಸಾವಿರ ಭಾಷೆಗಳು ಪಥನ ಮುಖಿಯಾಗುತ್ತಿದ್ದು, ಮುಂದಿನ ನೂರು ವರ್ಷಗಳಲ್ಲಿ ಜಗತ್ತಿನ ಶೇ.5 ರಷ್ಟು ಜನರ ಭಾಷೆಯು ಶೇ.95 ಜನರನ್ನು ಆಳುತ್ತದೆ ಎಂದು ಭಾಷಾಶಾಸ್ತ್ರ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಇದು ಗಂಭೀರವಾದ ವಿಷಯವಾಗಿದ್ದು, ನಮ್ಮ ಭಾಷೆಯನ್ನು ಉಳಿಸುವ ಕಾರ್ಯ ರಂಗಭೂಮಿಯ ಮೂಲಕ ಆಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ರಂಗಕರ್ಮಿಗಳಾದ ಪ್ರಸಾದ್ ಕುಂದೂರು, ರಂಗಕರ್ಮಿ ಕವಿತಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net