

ರಾಮದುರ್ಗ: ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ತನ್ನದೆಯಾದ ವೈಶಿಷ್ಟ್ಯವಿದ್ದು, ವಿದ್ಯಾರ್ಥಿಗಳು ಓದಿ ತಿಳಿದುಕೊಳ್ಳಬೇಕು ಎಂದು ಬೆಳಗಾವಿ ಹಿರಿಯ ಸಾಹಿತಿ ಯ.ರು. ಪಾಟೀಲ ಹೇಳಿದರು.
ಪಟ್ಟಣದ ಸುಶೀಲಾತಾಯಿ ಕುಲಗೋಡ ಪಿಯು ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕನ್ನಡ ಅಂದು, ಇಂದು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆಯ ವಿಸ್ಮಯ ಸಂಗತಿಗಳನ್ನು ಅರಿತುಕೊಂಡಾಗ ಮಾತೃಭಾಷೆ ಕನ್ನಡದ ಅಭಿಮಾನ ಮತ್ತಷ್ಟು ಹೆಚ್ಚುತ್ತದೆ ಎಂದರು.
ಕನ್ನಡಕ್ಕೆ ಬ್ರಿಟಿಷರ ಕಾಲದಲ್ಲಿ ಮೈಸೂರು ಮುಖ್ಯ ಕಮಿಷನರ್ ಸರ್ ಮಾರ್ಕ್ ಕಬ್ಬನ್ ಕೊಡುಗೆ ಅಪಾರವಾಗಿದೆ. ಕನ್ನಡವನ್ನು ಕಬ್ಬನ್ ಆಡಳಿತ ಭಾಷೆಯಾಗಿ ಜಾರಿ ಮಾಡಿದ್ದರು.10 ಲಕ್ಷ ಜನಸಂಖ್ಯೆಯಲ್ಲಿ 3 ಲಕ್ಷ ಜನತೆ ಅಂದು ಕನ್ನಡ ಮಾತನಾಡಿದ ಉಲ್ಲೇಖ ಇರುವುದು ಹೆಮ್ಮೆ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ವಿದ್ಯಾ ಪ್ರಸಾರಕ ಸಮಿತಿ ಅಧ್ಯಕ್ಷ ಟಿ.ದಾಮೋದರ ಮಾತನಾಡಿದರು. ಪ್ರಾಚಾರ್ಯ ಎಂ.ಬಿ. ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಸಹಿತ ಬಹುಮಾನ ವಿತರಣೆ ಮಾಡಲಾಯಿತು. ಡಾ.ವೈ.ಬಿ. ಕುಲಗೋಡ, ವಿ.ಜಿ. ಬೈಲವಾಡ, ಎಸ್.ಬಿ. ಸೊಬರದ, ಆರ್.ಎಂ. ಹತ್ತಿ, ರೇಣುಕಾ ಬಿಚಗತ್ತಿ, ಡಾ.ವಿ.ಬಿ. ವಗ್ಗರ, ಶಿವಲೀಲಾ ಗೋಲನ್ನವರ, ಎಂ.ಎಚ್. ಕುಲಕರ್ಣಿ ಇತರರಿದ್ದರು.