

ಹಾನಗಲ್ಲ: ರಮಣೀಯವಾಗಿರುವ ಕನ್ನಡ ನಾಡನ್ನು ಕವಿ ಮಹಾಶಯರು ಹಾಡಿ ಹೊಗಳಿದ್ದಾರೆ. ಇಲ್ಲಿನ ಸಂಸ್ಕೃತಿ ವೈಭವವನ್ನು ಎಲ್ಲರೂ ಆನಂದಿಸಿದ್ದಾರೆ. ಸಾಹಿತ್ಯ, ಸಂಸ್ಕೃತಿ, ಕಲೆಯಿಂದ ಶ್ರೀಮಂತಗೊಂಡ ನಾಡಾಗಿದೆ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಜಗದ್ಗುರು ಡಾ.ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ 88ನೇ ನಾಡಹಬ್ಬದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಚಿನ್ನದಂತಹ ಕನ್ನಡ ನಾಡಿನ ಹಿರಿಮೆ, ಸೌಂದರ್ಯ ಬೆಳೆಸಿ ನೈಸರ್ಗಿಕ ಸೊಬಗನ್ನು ಉಳಿಸಬೇಕಾಗಿದೆಯೇ ಹೊರತು, ದುರಾಸೆಗೆ ಕೊಳ್ಳೆ ಹೊಡೆದು ಹಾಳು ಮಾಡುವುದು ಬೇಡ ಎಂದರು.
ಮಠಾಧೀಶರು ಸತ್ಯ, ಧರ್ಮ ಬೋಧನೆಗೆ ಮುಂದಾಗಬೇಕಾದ ಕಾಲ. ಆದರೆ, ಮಠಗಳು ಆತಂಕದಲ್ಲಿವೆ. ಭಕ್ತರು ಮಠ ಹಾಗೂ ಧಾರ್ವಿುಕ ಸಂಸ್ಕೃತಿ ಉಳಿಸುವ ಸಂಕಲ್ಪ ಮಾಡಬೇಕಾಗಿದೆ ಎಂದರು.
ಸಮಾರಂಭದ ಉದ್ಘಾಟಿಸಿ ಮಾತನಾಡಿದ ಶಾಸಕ ಶ್ರೀನಿವಾಸ ಮಾನೆ, ನಾಡಹಬ್ಬ ನಮ್ಮ ಸಾಂಸ್ಕೃತಿಕ ಹೆಮ್ಮೆ. ಇಡೀ ರಾಜ್ಯದಲ್ಲಿಯೇ ಮೈಸೂರು ದಸರಾ ನಂತರ ದೀರ್ಘ ಕಾಲದ ಅರ್ಥಪೂರ್ಣ ಹಬ್ಬ ಆಚರಣೆ ಮಾಡಿರುವುದು ಇಲ್ಲಿನ ಹಿತಿಹಾಸ. ಎಲ್ಲರೂ ಜತೆಗೂಡಿ ಗಟ್ಟಿ ಹೆಜ್ಜೆ ಹಾಕಿದರೆ ಮಾತ್ರ ಹಾನಗಲ್ಲ ನಾಡಹಬ್ಬದ ಗತವೈಭವ ಮತ್ತೆ ಮರಳಲು ಸಾಧ್ಯ ಎಂದರು.
ಮುಕ್ತ ಮನಸಿನಿಂದ ಅರ್ಥಪೂರ್ಣ ಹಬ್ಬದ ಆಚರಣೆಗೆ ಪ್ರಯತ್ನಿಸಿದ್ದೇನೆ. ಆದರೆ, ಬೇರೆ ಬೇರೆ ಬೆಳವಣಿಗೆ ಕಂಡು ಮೌನವಾಗಿದ್ದೇನೆ. ಈಗಲೂ ಕಾಲ ಮಿಂಚಿಲ್ಲ. ಎಲ್ಲರೂ ಕೂಡಿ ಹೆಜ್ಜೆ ಹಾಕೋಣ. ಎಲ್ಲ ಸಹಕಾರ ನನ್ನಿಂದ ಇದೆ ಎಂದರು.
ಸಾಹಿತಿ ಪ್ರೊ.ಮಾರುತಿ ಶಿಡ್ಲಾಪುುರ ಆಶಯ ನುಡಿ ನುಡಿದರು. ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ನಾಗಪ್ಪ ಸವದತ್ತಿ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಕೆ.ಎಲ್. ದೇಶಪಾಂಡೆ, ಪುರಸಭೆ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ಉಪಾಧ್ಯಕ್ಷೆ ವೀಣಾ ಗುಡಿ, ತಾಲೂಕು ತಹಸೀಲ್ದಾರ್ ಎಸ್.ರೇಣುಕಾ, ನಾಡಹಬ್ಬ ಉತ್ಸವ ಸಮಿತಿ ಮಾಜಿ ಅಧ್ಯಕ್ಷ ಯಲ್ಲಪ್ಪ ಕಿತ್ತೂರ, ವಿಜಯಕುಮಾರ ದೊಡ್ಡಮನಿ, ಸಿದ್ದನಗೌಡ ಪಾಟೀಲ, ಟಾಕನಗೌಡ ಪಾಟೀಲ, ಅಶೋಕ ಹಲಸೂರ, ಮಂಜು ಗುರಣ್ಣನವರ ಅತಿಥಿಗಳಾಗಿದ್ದರು. ನಿಖಿತಾ ಮಾಳಗಿ ಪ್ರಾರ್ಥನೆ ಹಾಡಿದರು. ವಕೀಲ ಎಸ್.ಎಂ. ಕೋತಂಬರಿ ಸ್ವಾಗತಿಸಿದರು. ಡಿ.ಜೆ. ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.