ಸರ್ಕಾರಿ ಶಾಲೆಯಲ್ಲಿ ಕನ್ನಡ ಪ್ರಯೋಗಾಲಯ

Kannada Lab
Published on

| ಪಾ.ಶ್ರೀ.ಅನಂತರಾಮ್ ಕೋಲಾರ

ಸರ್ಕಾರಿ ಶಾಲೆಗಳಲ್ಲಿ ಕಲಿಕೆಗೆ ಪೂರಕವಾದ ವಾತಾವರಣ ವಿದ್ದಲ್ಲಿ ಅಂತಹ ಶಾಲೆಗೆ ಮಕ್ಕಳನ್ನು ಸೇರಿಸಲು ಪಾಲಕರು ಮುಗಿಬೀಳುತ್ತಾರೆಂಬುದಕ್ಕೆ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ತ್ಯಾಗರಾಜ ಬಡಾವಣೆಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉತ್ತಮ ನಿದರ್ಶನ.

ಭಾಷಾ ಅಲ್ಪಸಂಖ್ಯಾತ ಮಕ್ಕಳಿಗಾಗಿ ಇಲ್ಲಿಯ ಶಿಕ್ಷಕರೇ ತೆರೆದಿರುವ ಕನ್ನಡ ಪ್ರಯೋಗಾಲಯ ರಾಜ್ಯದಲ್ಲೇ ವಿನೂತನವಾದುದು ಎಂಬುದು ಶಿಕ್ಷಣ ತಜ್ಞರ ಅಭಿಪ್ರಾಯ.

ವಿನೂತನ ಪ್ರಯೋಗಾಲಯ ಕರೊನಾ ಹಿನ್ನೆಲೆಯಲ್ಲಿ ಶಾಲೆ ಆರಂಭಗೊಳ್ಳದಿದ್ದರೂ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗ ಬೇಕೆಂದು ಶಿಕ್ಷಣ ಇಲಾಖೆ ಸೂಚಿಸಿದಾಗ ಜುಲೈ-ಆಗಸ್ಟ್​ನಲ್ಲಿ 15ಕ್ಕೂ ಹೆಚ್ಚು ಶಿಕ್ಷಕರು ಕನ್ನಡ ಪ್ರಯೋಗಾಲಯ ರಚನೆ ಸಂಬಂಧ ರ್ಚಚಿಸಿದರು. ತರಗತಿಯ ಕೊಠಡಿ ಆಯ್ಕೆ ಮಾಡಿಕೊಂಡು ಕೆಂಪು ಮತ್ತು ಹಳದಿ ಬಣ್ಣ ಬಳಿದು, ಇಡೀ ಕೊಠಡಿಯನ್ನು 15 ದಿನಗಳಲ್ಲಿ ಕನ್ನಡ ಅಕ್ಷರಮಾಲೆಯಿಂದ ಸಿಂಗರಿಸಿದರು. ಕನ್ನಡ ವರ್ಣಮಾಲೆಯ ಅಕ್ಷರದ ಆಕೃತಿ ರಚಿಸಿ ಪದಗಳಿಗೆ ಅರ್ಥವನ್ನು ಸುಲಭವಾಗಿ ತಿಳಿಯುವಂತೆ ವಿನ್ಯಾಸಗೊಳಿಸಿದರು.

ಶಿಕ್ಷಕರೇ ಸ್ವತಃ 23,500 ರೂ. ವ್ಯಯಿಸಿ ರಚಿಸಿರುವ ಈ ಕನ್ನಡ ಪ್ರಯೋಗಾಲಯದಲ್ಲಿ 100ಕ್ಕೂ ಹೆಚ್ಚು ಕಲಿಕಾ ಚಾರ್ಟ್​ಗಳನ್ನು ಅಳವಡಿಸಲಾಗಿದೆ. ಕನ್ನಡ ಅಕ್ಷರ ಮಾಲೆಯ ಜತೆಗೆ ನಾಡಿನ ಸಾಹಿತ್ಯ, ಸಂಸ್ಕೃತಿಯನ್ನು ಪರಿಚಯಿಸಲಾಗಿದೆ. ಕನ್ನಡ ಗೊತ್ತಿಲ್ಲದ ಮಕ್ಕಳು ಸುಲಭವಾಗಿ ಭಾಷೆ ಅರ್ಥ ಮಾಡಿಕೊಳ್ಳಲು ಈ ಪ್ರಯೋಗಾಲಯ ಪ್ರೇರಣೆ ನೀಡುತ್ತಿದೆ. ಅದು ಮಕ್ಕಳನ್ನು ಎಷ್ಟು ಆಕರ್ಷಿಸಿದೆಯೆಂದರೆ ವಿದ್ಯಾಗಮ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು, ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತ ಮಕ್ಕಳು ಈ ಶಾಲೆಯಲ್ಲಿಯೇ ಓದುವುದಾಗಿ ಪಾಲಕರ ಮೇಲೆ ಒತ್ತಡ ತಂದು ಪ್ರವೇಶ ಪಡೆದುಕೊಂಡಿದ್ದಾರೆ. ಪರಿಣಾಮವಾಗಿ ಈ ಶಾಲೆಯಲ್ಲಿ 1ರಿಂದ 8ನೇ ತರಗತಿಯವರೆಗೆ ಈಗ 330 ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ 182 ಮಕ್ಕಳು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರು.

ನಮ್ಮ ಶಾಲೆಯಲ್ಲಿ ಶಿಕ್ಷಕರೆಲ್ಲ ಸೇರಿ ಕನ್ನಡ ಭಾಷಾ ಪ್ರಯೋಗಾಲಯ ರಚಿಸಿದ್ದೇವೆ. ಇದರಿಂದ ಅಲ್ಪಸಂಖ್ಯಾತರ ಮಕ್ಕಳು ಕನ್ನಡ ಶಾಲೆಗೆ ಬರುವಂತಾಗಿರುವುದು ಹರ್ಷವನ್ನುಂಟು ಮಾಡಿದೆ. | ಎಂ.ಬೈರೇಗೌಡ ಮುಖ್ಯಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀನಿವಾಸಪುರ ಕನ್ನಡ ಶಾಲೆಗಳು ಪ್ರಗತಿ ಸಾಧಿಸಬೇಕಾದರೆ ತ್ಯಾಗರಾಜ ಬಡಾವಣೆಯ ಉನ್ನತೀಕರಿಸಿದ ಸರ್ಕಾರಿ ಶಾಲೆ ಮಾದರಿಯಲ್ಲಿ ಕನ್ನಡ ಭಾಷಾ ಪ್ರಯೋಗಾಲಯಗಳ ರಚನೆ ಅತಿಮುಖ್ಯ. ಶಿಕ್ಷಣ ಇಲಾಖೆ ಬದ್ಧತೆಯೊಂದಿಗೆ ಕನ್ನಡ ಪ್ರಯೋಗಾಲಯ ಸ್ಥಾಪನೆಗೆ ಉತ್ತೇಜಿಸಬೇಕು. | ರವಿಕುಮಾರ್ ಮಾಜಿ ಅಧ್ಯಕ್ಷ, ಶಿಕ್ಷಕರ ಸಂಘ, ಶ್ರೀನಿವಾಸಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net