ಭಾಷಾಭಿವೃದ್ಧಿಗೆ ಟೊಂಕ ಕಟ್ಟಿ ನಿಲ್ಲಿ

27ard01
ಔರಾದ್ ತಾಲೂಕಿನ ಕಂದಗೂಳದಲ್ಲಿ ಸೋಮವಾರ ಏರ್ಪಡಿಸಿದ್ದ ಕನ್ನಡ ಕಂಪು ಕಾರ್ಯಕ್ರಮವನ್ನು ಕಸಾಪ ಜಿಲ್ಲಾ ಕಾರ್ಯದರ್ಶಿ ಟಿ.ಎಂ.ಮಚ್ಚೆ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷೆ ಸುಮನಬಾಯಿ, ಗುರುನಾಥ ಅಕ್ಕಣ್ಣ, ಡಾ.ಶಾಲಿವಾನ ಉದಗೀರೆ, ಮುಖ್ಯಗುರು ಮೋಹಿಜೋದ್ದಿನ್, ಮನೋಹರ ಅಂಬಾಟೆ, ಅಂಬಾದಾಸ ನಳಗೆ, ಅಶೋಕ ಶೆಂಬೆಳ್ಳೆ, ಗಣಪತಿ, ನಾಮದೇವ, ಅನಿತಾ ಇದ್ದರು.
Published on

ಔರಾದ್: ಕನ್ನಡ ಬದುಕಿನ ಭಾಷೆಯಾಗಬೇಕು. ಕನ್ನಡದ ಅಭಿವೃದ್ಧಿಗೆ ಎಲ್ಲರೂ ಟೊಂಕ ಕಟ್ಟಿ ನಿಲ್ಲಬೇಕು ಎಂದು ಖ್ಯಾತ ಕಥೆ ಬರಹಗಾರ ಗುರುನ್ನಾಥ ಅಕ್ಕಣ್ಣ ಹೇಳಿದರು.

ಕಂದಗೂಳ ಗ್ರಾಮದ ಬಾಬು ಜಗಜೀವನರಾಮ್ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸೋಮವಾರ ಏರ್ಪಡಿಸಿದ್ದ ಕನ್ನಡ ಕಂಪು ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಭಾಷಾವಾರು ಪ್ರಾಂತ್ಯ ರಚನೆ ನಂತರ ೧೯೫೬ರ ನ.೧ರಂದು ಮೈಸೂರು ರಾಜ್ಯ ಉದಯಿಸಿತು. ೧೯೭೩ರ ನ.೧ರಂದು ಕರ್ನಾಟಕ ಎಂದು ಮರುನಾಮಕರಣವಾಗಿ ಕರುನಾಡು ದೇಶದಲ್ಲೇ ಖ್ಯಾತಿ ಗಳಿಸಿದೆ. ಇಂದಿನ ದಿನಗಳಲ್ಲಿ ಇಂಗ್ಲಿಷ್ ವ್ಯಾಮೋಹದಿಂದ ಕನ್ನಡ ಶಾಲೆಗಳಲ್ಲಿ ಕನ್ನಡ ಕಲಿಯುವ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ ಕಳವಳ ವ್ಯಕ್ತಪಡಿಸಿದರು.

ಕನ್ನಡದ ಎಲ್ಲ ಹೃದಯಗಳು ಮಾತೃಭಾಷೆ ಉಳಿವಿಗಾಗಿ ಕೈಲಾದಷ್ಟು ಅಳಿಲು ಸೇವೆ ಸಲ್ಲಿಸಲು ಮುಂದೆ ಬರಬೇಕು. ಯಾವುದೇ ಮಾನ ಸಮ್ಮಾನ ಬಯಸದೆ ಕನ್ನಡದ ಶ್ರೇಯಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.

ಕಸಾಪ ಜಿಲ್ಲಾ ಕಾರ್ಯದರ್ಶಿ ಟಿ.ಎಂ. ಮಚ್ಚೆ ಉದ್ಘಾಟಿಸಿ ಮಾತನಾಡಿ, ಮಕ್ಕಳು ಕನ್ನಡದ ಬಗ್ಗೆ ಯಾವತ್ತೂ ಕಡೆಗಣನೆ ಮಾಡಬಾರದು. ಕನ್ನಡದಲ್ಲಿ ಕಲಿತ ಸಹಸ್ರಾರು ಜನರು ಸಮಾಜದ ವಿವಿಧ ಉನ್ನತ ಹುದ್ದೆ, ಸ್ಥಾನಮಾನ ಅಲಂಕರಿಸಿದ್ದಾರೆ. ತಾಯಿ ಭಾಷೆಯನ್ನು ಗೌರವದಿಂದ ಕಾಣುವ ಮೂಲಕ ಬದುಕು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಸಾಪ ತಾಲೂಕು ಅಧ್ಯಕ್ಷ ಡಾ.ಶಾಲಿವಾನ ಉದಗೀರೆ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಸುಮನಬಾಯಿ, ಮುಖ್ಯಗುರು ಮೋಹಿಜೋದ್ದಿನ್, ಮನೋಹರ ಅಂಬಾಟೆ, ಕಸಾಪ ಮಾಧ್ಯಮ ಸಲಹೆಗಾರ ಮಲ್ಲಪ್ಪ ಗೌಡ, ಸಂಚಾಲಕ ಅಶೋಕ ಶೆಂಬೆಳ್ಳೆ, ನಾಮದೇವ, ಅನಿತಾ, ಸಂಗೀತಾ, ಸುರೇಶ, ಬಂಡೆಪ್ಪ ಇತರರಿದ್ದರು.

ವಿದ್ಯಾರ್ಥಿನಿಯರಾದ ಬಿಂದು, ನಂದಿನಿ ಪ್ರಾರ್ಥನೆಗೀತೆ ನಡೆಸಿಕೊಟ್ಟರು. ಕಸಾಪ ಯುವ ಘಟಕ ತಾಲೂಕು ಅಧ್ಯಕ್ಷ ಅಂಬಾದಾಸ ನಳಗೆ ಸ್ವಾಗತಿಸಿದರು. ಶಿಕ್ಷಕ ಗಣಪತಿ ನಿರೂಪಣೆ ಮಾಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net