ಮೈಸೂರು ಅರಮನೆಯಲ್ಲಿ ಕನ್ನಡ ಕಂಪು, ಬ್ಯಾಂಡ್ ಮೋಡಿ

62
Published on

ಮೈಸೂರು: ದಸರಾ ಮಹೋತ್ಸವದ ಸಾಂಸ್ಕೃತಿಕ ಆಕರ್ಷಣೆಯಾದ ಅರಮನೆಯ ಸಂಗೀತ ಕಾರ್ಯಕ್ರಮದಲ್ಲಿ ಒಂದೆಡೆ ಕನ್ನಡ ಕಂಪಿನ ಅಲೆ ಹಾಡು ತೇಲಿ ಬಂದರೆ, ಮತ್ತೊಂದೆಡೆ ಬ್ಯಾಂಡ್ ಮೋಡಿ ಸದ್ದು, ನೆರೆದಿದ್ದವ ಜೋಶ್ ‘ಯುವ ದಸರಾ’ ದಂತೆ ಭಾಸವಾಯಿತು.

ಝಗಮಗಿಸುವ ವಿದ್ಯುತ್ ದೀಪಾಲಂಕೃತ ವೇದಿಕೆಯಲ್ಲಿ ಮಂಗಳವಾರ ಶಾಸ್ತ್ರೀಯ ಹಾಗೂ ಪಾಶ್ಚಿಮಾತ್ಯ ಸಂಗೀತ ಮೇಳೈಸಿದ್ದವು. ಶಾಸ್ತ್ರೀಯ, ಸಾಂಪ್ರಾಯಿಕ ಸಂಗೀತ ಪ್ರಿಯರನ್ನು ತಲೆದೋಗುವಂತೆ ಮಾಡಿದರೆ, ಅಬ್ಬರದ ಸಂಗೀತದ ಬ್ಯಾಂಡ್ ನೆರೆದಿದ್ದ ಯುವ ಜನರು ಕೇಕೆ, ಶಿಳ್ಳೆ ಹಾಕಿ ಹುಚ್ಚೆದ್ದು ಕುಣಿಯುವಂತೆ ಮಾಡಿತು.

ಗಾಯಕಿ ಡಾ.ಶ್ವೇತಾ ಮಡಪ್ಪಾಡಿ ನೇತೃತ್ವದಲ್ಲಿ ಪ್ರಸ್ತುತಗೊಂಡ ‘ಕನ್ನಡ ಕಾಜಾಣ’. ಹಾಡು ಪಾಡು, ಭಾವನಾಲೋಕದಲ್ಲಿ ತೇಲುವಂತೆ ಮಾಡಿತು. ಕುವೆಂಪು, ಬೇಂದ್ರೆ, ಅಡಿಗರು, ಚಂದ್ರಶೇಖರ ಕಂಬಾರು ಸೇರಿದಂತೆ ಕನ್ನಡ ಕವಿಗಳು ಬರೆದ ಕವನಗಳು ಸೇರಿದಂತೆ ಜಾನಪದ ಗೀತೆಗಳು ಸಂಗೀತ ಪ್ರಿಯರ ಮನಸೋರೆಗೊಂಡಿತು.

ಡಿ.ಎಸ್.ಕರ್ಕಿ ಅವರ ‘ಹಚ್ಚೇವು ಕನ್ನಡದ ದೀಪ, ಕರುನಾಡ ದೀಪ, ಸಿರಿನುಡಿಯ ದೀಪ...’ ಹಾಡಿನೊಂದಿಗೆ ಆರಂಭಗೊಂಡ ಗಾನಯಾನ, ಚಂದ್ರಶೇಖರ ಕಂಬಾರರ ರಚನೆ ‘ಮೊದಲಿಗೆ ಅಲ್ಲಮ ಪ್ರಭುವಿಗೆ ಶರಣಾರ್ಥಿ, ಕೂಡಿಕುಂತ ಜನಕ್ಕೆಲ್ಲಾ ನಮ್ಮ ನಮನ... ಗೀಯಗಾ ಗಾಗೀಯ ಗಾ...’ ಹಾಡು ಗುನುಗುವಂತೆ ಮಾಡಿತು.

ದ.ರಾ.ಬೇಂದ್ರೆ ಅವರ ‘ಬಂಗಾರನೀರ ಕಡಲಾಚೆಗೀಚೆಗಿದೆ ನೀಲನೀರ ತೀರ....’ ಮನಗೆದ್ದರೆ, ಕಂಬಾರರ ನಾಟಕದ ಪ್ರಯೋಗ ‘ಅಗಲಿ ಇರಲಾರೆನೋ ಮರೆತು ಇರಲಾರೆನೋ ನಿನ್ನನ್ನ...’, ಸೂಜಿಗಳ ಮುತ್ತುಗಳ ಮಾರಬಂದೆನಮ್ಮ ಕಾಸಿಗೊಂದು ಸೂಜಿಯಂತೆ ಮಾರಬಂದೆನಮ್ಮ...’, ಉತ್ತರ ಕರ್ನಾಟಕದ ಜನಪದ ಲಯವನ್ನು ಜೋಗುಳದ ಮೂಲಕ ಪ್ರಸ್ತುತಪಡಿಸಿದರು.

ಮನೆ ಮಹದೇಶ್ವರರನ್ನು ನೆನೆಯುವ ಮೈಸೂರು ಭಾಗದ ಆಲುಮಾಲೆ ಅಡುಕಾರ, ಗುಂಡುಮಲೆ ಮಾಯ್ಕರ ಬಾ ನನ್ನ ಮಾದೇವು..ಭಕ್ತರಸದ ಜಾನಪದ ಅಲ್ಲದೇ ತುಳುವಿನ ಕೆಲ ಪ್ರಕಾರಗಳನ್ನು ಪ್ರಸ್ತುತಿ ಪಡಿಸುವ ಮೂಲಕ ಚಪ್ಪಾಳೆಯ ಮೆಚ್ಚುಗೆ ಗಳಿಸಿದರು. ಸಹ ಗಾಯಕರಾಗಿ ರಜತ್‌ಶರ್ಮಾ, ಮುದ್ದುಕೃಷ್ಣ ಸಹಕಾರ ನೀಡಿದರೆ, ಯಶ್ವಂತ್, ಆಕರ್ಷ್ ವರ್ಮಾ, ಸಿಂಧು ಕಮಲ್, ಗುರುರಾಜ್, ಜೋಶಿಲ್ ವರ್ಮಾ, ಗಗನ್, ಕಿರಣ್ ವಾದ್ಯ ಸಹಕಾರ ನೀಡಿದರು. ಕೋರಸ್- ಅಧಿತ್ರಿ, ಶಾರದಾ ಅಯ್ಯರ್, ಸಾನ್ವಿ, ಸ್ವರ ಗುರು ಪ್ರಸಾದ್ ಕೋರಸ್‌ನಲ್ಲಿ ಬೆಂಬಲಿಸಿದರು.

ಅಲ್ಲದೇ ರಘುರಾಮ್ ಮತ್ತು ತಂಡದ ಕರ್ನಾಟಕ ಶಾಸ್ತ್ರಿಯ ಸಂಗೀತ ಸಂಗೀತ ರಸಿಕರಿಗೆ ರಸದೌತಣ ನೀಡಿತು.

ಯುವ ದಸರೆಯನ್ನೇ ನಾಚಿಸಿತು:

ಅರಮನೆ ಆವರಣದ ಎರಡನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 30 ದೇಶಗಳಲ್ಲಿ 800ಕ್ಕೂ ಕಾರ್ಯಕ್ರಮಗಳನ್ನು ನೀಡಿರುವ ಕೇರಳದ ಥೈಕ್ಕುಡಂ ಬ್ರಿಡ್ಜ್ ರಾಕ್ ಬ್ಯಾಂಡ್ ತಂಡದ ‘ಇಂಡಿಯನ್ ಫೋಕ್ ಫ್ಯೂಷನ್’ನ ಮೋಡಿ ಯುವ ದಸರೆಯನ್ನೇ ನಾಚಿಸುವಂತಿತ್ತು. ಉದ್ಘೋಷಕರು ಕೇರಳದ ಥೈಕ್ಕುಡಂ ಬ್ರಿಡ್ಜ್ ಬ್ಯಾಂಡ್ ಹೆಸರೇಳುತ್ತಿದ್ದಂತೆ ಆವರಣದಲ್ಲಿ ನೆರೆದಿದ್ದ ಕೇರಳಿಗರು, ವಿದ್ಯಾರ್ಥಿಗಳ ‘ಓಹೋ....’ ಎನ್ನುವ ಕೂಗಿನ ಉದ್ಘಾರ ಕೇಳಿ ಬಂತು.

ಶಾಸ್ತ್ರೀಯ ಹಾಗೂ ಪಾಶ್ಚಿಮಾತ್ಯ ವಾದ್ಯಗಳ ಸಮ್ಮಿಲನದಲ್ಲಿ ತಕತಾರ ತಕದಿಮಿ ತೋಂ ಎಂದು ಎಲ್ಲರ ಕುಣಿಸಿದರು. ಎಲ್ಲರಿಗೂ ನಮಸ್ಕಾರ ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ಎಂದು ಕನ್ನಡದಲ್ಲೇ ಹೇಳಿ ನವರಸಂ ಪ್ರಸ್ತುತಪಡಿಸಿದರು.

‘ತೇರಿ ದಿವಾನಿ ದಿವಾನಿ...’ ಭಾವನಾತ್ಮಕವಾಗಿ ಹಾಡಿ ಮನಮುಟ್ಟಿದರು. ಇಳಯರಾಜ ಅವರ ಸಂಯೋಜನೆಯ ರಾಜರಾಜ ಸೋ ಳನ್ನ....’, ಶಾಸ್ತ್ರೀಯ ಆಲಾಪದೊಂದಿಗೆ ಓಂ ಶಿವೋಹಂ, ಓಂ ರುದ್ರನಾಮ.... ಹಾಡಿ ಭಕ್ತಿ ಸಂಚಲನ ಮೂಡಿಸಿದರು.

ಕಾದರೆ ಕಾದರೆ.., ಅಪ್ರೋಡು ಪೋರಂಡಾಮೆ..., ಕೇಳದೆ ನಿಮಗೀಗ, ತಾರಾ ತಕಧಿಮಿತಾ, ತೇರಿ ದಿವಾನೀ, ಗಾಯನಕ್ಕೆ ನೋಡುಗರು ಶಿಳ್ಳೆ, ಚಪ್ಪಾಳೆ, ಕೇಕೆ ಹಾಕಿದ್ದಲ್ಲದೇ ನಿಂತಲ್ಲೇ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರು. ಹಲವು ಭಾಷೆಯ ಆಲ್ಬಂ ಹಾಡುಗಳು, ವಿಶಿಷ್ಟ ರಾಕ್ ಬ್ಯಾಂಡ್ ಮ್ಯೂಸಿಕ್ ಮೂಲಕ ನೋಡುಗರನ್ನು ರಂಜಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net