ಕನ್ನಡಮ್ಮನಿಗೆ ಕೊಪ್ಪಳದಲ್ಲಿ ಅದ್ದೂರಿ ಸ್ವಾಗತ, ಕನ್ನಡ ಹಾಡಿಗೆ ಹೆಜ್ಜೆ ಹಾಕಿದ ನಾಯಕರು

DSC_9985
Published on

ಕೊಪ್ಪಳ: ಸುವರ್ಣ ಕರ್ನಾಟಕ ಸಂಭ್ರಮ ಅಂಗವಾಗಿ ಹಮ್ಮಿಕೊಂಡ ಕನ್ನಡ ಜ್ಯೋತಿ ಯಾತ್ರೆಗೆ ತಾಲೂಕಿನ ಮುನಿರಾಬಾದ್ ಗ್ರಾಮದಲ್ಲಿ ಭವ್ಯ ಮೆರವಣಿಗೆಯೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಗ್ರಾಮದ ನೂರಾರು ಮಹಿಳೆಯರು ಆರತಿ ಹಿಡಿದು, ಕುಂಭದೊಂದಿಗೆ ನಾಡ ದೇವತೆ ರಥ ಬರ ಮಾಡಿಕೊಂಡರು. ಅರ್ಚಕರು ವಿಶೇಷ ಪೂಜೆ ಸಲ್ಲಿಸಿದರು. ಕನ್ನಡಾಂಬೆಗೆ ಜಯಘೋಷ ಕೂಗುವ ಮೂಲಕ ರಥಕ್ಕೆ ಚಾಲನೆ ದೊರೆಯಿತು. ಯುವಕ, ಯುವತಿಯರು ಕನ್ನಡ ಹಾಡುಗಳಿಗೆ ಕೋಲಾಟದೊಂದಿಗೆ ಹೆಜ್ಜೆ ಹಾಕಿ ಮೆರಗು ಹೆಚ್ಚಿಸಿದರು. ಶಾಲಾ ಮಕ್ಕಳು ಕನ್ನಡ ಬಾವುಟ ಹಿಡಿದು ಸಾಗುವ ಮೂಲಕ ಕನ್ನಡ ಅಭಿಮಾನ ಮೆರೆದರು.

ಹೊಸಪೇಟೆ ಗಡಿಯಿಂದ ಮುನಿರಾಬಾದ್ ಗ್ರಾಮದಾದ್ಯಂತ ಯಾತ್ರೆ ಸಾಗಿ ಬಂತು. ದಾರಿಯುದ್ದಕ್ಕೂ ಅಲ್ಲಲ್ಲಿ ಮಹಿಳೆಯರು ಆರತಿ ಎತ್ತಿ, ಹೂ ಹಾಕಿ ಶುಭ ಕೋರಿದರು. ಆಕರ್ಷಕ ರಥದೊಂದಿಗೆ ಅಧಿಕಾರಿಗಳು, ಜನಪ್ರತಿನಿಧಿಗಳು, ಯುವಕರು, ಮಹಿಳೆಯರು ಫೋಟೋ ತೆಗೆಸಿಕೊಂಡು ಖುಷಿಪಟ್ಟರು.

ಹೆಜ್ಜೆ ಹಾಕಿದ ಜನಪ್ರತಿನಿಧಿಗಳು, ಅಧಿಕಾರಿಗಳು: ಗೀತ ಗಾಯನ ಅಂಗವಾಗಿ ದಾರಿಯುದ್ದಕ್ಕೂ ಕನ್ನಡ ಹಾಡುಗಳು ಪ್ರತಿಧ್ವನಿಸಿದವು. ಸಂಸದ ಸಂಗಣ್ಣ ಕರಡಿ, ಶಾಸಕ ಜನಾರ್ದನ ರೆಡ್ಡಿ, ಡಿಸಿ ನಲಿನ್ ಅತುಲ್, ಜಿಪಂ ಸಿಇಒ‌ ರಾಹುಲ್‌ ರತ್ನಂ ಪಾಂಡೆಯ, ಎಡಿಸಿ ಸಾವಿತ್ರಿ ಕಡಿ, ಎಸಿ ಕ್ಯಾ.ಮಹೇಶ ಮಾಲಗಿತ್ತಿ ಸೇರಿ ಇತರ ಅಧಿಕಾರಿಗಳ ಕುಣಿದು ಸಂಭ್ರಮಿಸಿದರು. ಕೋಲಾಟಕ್ಕೆ ಹೆಜ್ಜೆ ಹಾಕಿ ನಲಿದರು.

ಪಕ್ಷದ ಪ್ರಚಾರ: ಕನ್ನಡ ಜ್ಯೋತಿ‌ ರಥ ಯಾತ್ರೆಯಲ್ಲಿ ಕನ್ನಡ ನಾಡು, ನುಡಿಗೆ ಸಂಬಂಧಿಸಿದ ಯಾವೊಂದು ಸಂದೇಶ, ಮಾಹಿತಿ, ಚಿತ್ರ, ವಿಡಿಯೋ ಕಾಣಿಸಲಿಲ್ಲ. ಬದಲಿಗೆ ರಥದಲ್ಲಿನ ಎಲ್ ಇಡಿ ಪರದೆಯಲ್ಲಿ ಸರ್ಕಾರದ ಬಜೆಟ್ ಅಂಶಗಳು, ಗ್ಯಾರಂಟಿ ಯೋಜನೆಗಳು ರಾರಾಜಿಸಿದ್ದು ಕಂಡುಬಂತು. ಕಾಂಗ್ರೆಸ್ ಪಕ್ಷದ ನಾಯಕರು, ಪಕ್ಷದ ಚಿಹ್ನೆಗಳಿರುವ ಫೋಟೋಗಳನ್ನು ಪ್ರದರ್ಶಿಸಲಾಯಿತು. ಇದಕ್ಕೆ ಸ್ಥಳದಲ್ಲಿದ್ದ ಕೆಲ‌ ಸಾರ್ವಜನಿಕರು ಇದು ಸರ್ಕಾರಿ ಕಾರ್ಯಕ್ರಮವಾ ? ಅಥವಾ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಾ ಎಂದು ಪ್ರಶ್ನಿಸಿದರು.

ಸಚಿವ,‌‌ ಶಾಸಕರು‌ ಗೈರು: ಕರ್ನಾಟಕ ಸುವರ್ಣ ಸಂಭ್ರಮ ವಿಶೇಷ ಕಾರ್ಯಕ್ರಮ ಅಂಗವಾಗಿ ಸಾರ್ವಜನಿಕರು, ಶಾಲಾ ಮಕ್ಕಳು, ಮಹಿಳೆಯರು, ಯುವತಿಯರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಯಶಸ್ವಿಗೊಳಿಸಿದರು. ಆದರೆ, ಕನ್ನಡ ಮತ್ತು ಸಂಸ್ಕೃತಿ ಸಚಿವ ಹಾಗೂ ಜಿಲ್ಲೆ ಉಸ್ತುವಾರಿ ಹೊಣೆ ಹೊತ್ತ ಶಿವರಾಜ ತಂಗಡಗಿ, ಕೊಪ್ಪಳ‌ ಕ್ಷೇತ್ರ ಮೂಲಕವೇ ರಥ ಬಂದರೂ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಶಾಸಕರಾದ ಬಸವರಾಜ ರಾಯರಡ್ಡಿ, ದೊಡ್ಡನಗೌಡ ಪಾಟೀಲ್, ವಿಪ ಸದಸ್ಯೆ ಹೇಮಲತಾ ನಾಯಕ ಕಾರ್ಯಕ್ರಮಕ್ಕೆ ಗೈರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net