ಕನ್ನಡಕ್ಕೆ ತೊಡಕಾಗುತ್ತಿರುವ ಪಾಶ್ಚಾತ್ಯ ಸಂಸ್ಕೃತಿ: ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಂ ಆತಂಕ

16_12_Mdy_03(Kannada Samavesha)
Published on

ಮಂಡ್ಯ: ಎಳೆಯ ಮನಸ್ಸುಗಳ ಮೇಲೂ ಪಾಶ್ಚಾತ್ಯ ಸಂಸ್ಕೃತಿ ಹೇರಿ ಭಾಷಾ ಬೆಳವಣಿಗೆಗೆ ತೊಡಕನ್ನುಂಟು ಮಾಡುತ್ತಿದ್ದೇವೆ. ವಿದೇಶಿ ಸಂಸ್ಕೃತಿಗೆ ಮಾರುಹೋಗುತ್ತಿರುವ ನಾವು ಕನ್ನಡತನವನ್ನೂ ಕಳೆದುಕೊಳ್ಳುವ ಹಂತಕ್ಕೆ ಬಂದು ನಿಂತಿದ್ದೇವೆ ಎಂದು ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಮ್ ಆತಂಕ ವ್ಯಕ್ತಪಡಿಸಿದರು.

ನಗರದ ಗಾಂಧಿಭವನದಲ್ಲಿ ಕನ್ನಡ ಸೇನೆ ಕರ್ನಾಟಕ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಕನ್ನಡ ಜಾಗೃತಿ ಸಮಾವೇಶ ಹಾಗೂ ಹಾಸ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಹಿರಿಯರು ಲಾಲಿ ಹಾಡು, ಜನಪದ, ಕವಿತೆಗಳನ್ನು ಹಾಡುತ್ತಾ ಊಟ ಮಾಡಿಸಿ ನಮ್ಮನ್ನು ಮಲಗಿಸುತ್ತಿದ್ದರು. ಆದರೀಗ ಎಲ್ಲವೂ ಬದಲಾಗಿದೆ. ಪುಟ್ಟ ಮಕ್ಕಳ ಕೈಗೆ ಮೊಬೈಲ್ ಕೊಡದಿದ್ದರೆ ಊಟ ಮಾಡುವುದಿಲ್ಲ ಎಂಬುದು ಎಷ್ಟೋ ಜನ ತಾಯಂದಿರ ಅಪವಾದ. ಆಧುನಿಕತೆಯ ನಾಗಾಲೋಟದಲ್ಲಿ ನಮ್ಮ ಸಂಸ್ಕೃತಿಯನ್ನು ಮರೆತು ಕಳೆದು ಹೋಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ಪರ್ಧಾ ಜಗತ್ತಿನಲ್ಲಿ ಎಲ್ಲವೂ ಸ್ಪರ್ಧೆಯಾಗಿಯೇ ತೆರೆದುಕೊಳ್ಳುತ್ತವೆ. ಅದಕ್ಕೆ ನಾವೂ ಸಹ ಒಗ್ಗಿಕೊಳ್ಳುವ ಅನಿವಾರ್ಯತೆಯೂ ಇದೆ. ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸುವುದನ್ನೂ ಬೇಡ ಎನ್ನಲಾಗದು. ಆದರೆ ಮನೆಯಲ್ಲೂ ಮಕ್ಕಳೊಂದಿಗೆ ಆಂಗ್ಲ ಭಾಷೆಯಲ್ಲೇ ಮಾತನಾಡಿಸುವ ಮೂಲಕ ಭಾಷಾ ಬೆಳವಣಿಗೆಗೆೆ ನಾವೇ ತೊಡಕಾಗಿದ್ದೇವೆ ಎಂಬುದನ್ನು ತೋರಿಸುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಸೈಕಲ್ ಇದ್ದರೂ ಅದರಲ್ಲಿ ಹೋಗುವುದನ್ನು ಬಿಟ್ಟು ವಾಹನಗಳನ್ನು ಅವಲಂಬಿಸಿದ್ದೇವೆ. ಮನೆಯಲ್ಲೇ ಅಚ್ಚುಕಟ್ಟಾಗಿ ಅಡುಗೆ ಮಾಡಿ ಭೋಜನ ಸ್ವೀಕರಿಸುವುದನ್ನು ಬಿಟ್ಟು ಹೊಟೇಲ್‌ಗಳ ಖಾದ್ಯಕ್ಕೆ ಮಾರುಹೋಗಿದ್ದೇವೆ. ಇದರೊಂದಿಗೆ ಕನ್ನಡದ ಸಂಸ್ಕೃತಿಯನ್ನು ಬಿಟ್ಟು ಬೇರೆ ಕಡೆಗೆ ಹಾರಿಹೋಗುತ್ತಿದ್ದೇವೆ. ಸಂಸತ್ತಿನಲ್ಲಿ ಪ್ರಪ್ರಥಮವಾಗಿ ಕನ್ನಡದಲ್ಲಿ ಮಾತನಾಡುವ ಮೂಲಕ ಜೆ.ಎಚ್.ಪಟೇಲರು ಗಮನ ಸೆಳೆದರು. ಇದು ಹೆಮ್ಮೆಯ ವಿಚಾರ. ಆದರೆ, ಇಂತಹ ಧೋರಣೆಯನ್ನು ಎಷ್ಟು ಜನರು ಬೆಳೆಸಿಕೊಳ್ಳುತ್ತಾರೆ ಎಂದರು.

ಚಳವಳಿಗೆ ಮೂಲ ಜಾಗ ಎಂದರೆ ಮಂಡ್ಯ. ಕಬ್ಬು, ಭತ್ತಕ್ಕೆ ಬೆಲೆ ಇಲ್ಲ ಎಂದರೆ ಇಲ್ಲಿ ಮೊದಲು ಹೋರಾಟ ಪ್ರಾರಂಭವಾಗುತ್ತದೆ. ಕನ್ನಡದ ನೆಲ, ಜಲ, ಭಾಷೆ ವಿಚಾರಕ್ಕೆ ಬೀದಿಗಿಳಿದು ಹೋರಾಟ ಮಾಡುವವರೇ ಮಂಡ್ಯದವರು. ನಂತರ ರಾಜ್ಯದಲ್ಲಿ ಚಳವಳಿ ಪ್ರಾರಂಭವಾಗುತ್ತೆ. ಒಂದು ಕಾಲದಲ್ಲಿ ಚಡ್ಡಿ ಚಳವಳಿ ಮಾಡುವ ಮೂಲಕ ಇಡೀ ರಾಜ್ಯ, ರಾಷ್ಟ್ರದ ಗಮನ ಸೆಳೆದವರು ಇಲ್ಲಿನ ಜನ. ಮಾತು ಒರಟಾದರೂ, ಹೃದಯ ಬೆಣ್ಣೆ. ಕೆಎಸ್‌ಎನ್ ಅವರ ಮೈಸೂರು ಮಲ್ಲಿಗೆ ಕೃತಿ ಐದು ವರ್ಷಗಳಲ್ಲಿ 39 ಮುದ್ರಣಗಳನ್ನು ಕಂಡಿತ್ತು. ಅಂದು ಪ್ರತಿ ಮನೆ ಮನೆಯಲ್ಲೂ ಮೈಸೂರು ಮಲ್ಲಿಗೆ ಕೃತಿ ಇರುತ್ತಿತ್ತು. ಅಂತಹ ಶ್ರೀಮಂತ ಸಾಹಿತ್ಯ, ಸಂಸ್ಕೃತಿ ಮಂಡ್ಯದ ನೆಲದ್ದು ಎಂದು ಬಣ್ಣಿಸಿದರು.

ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಜಾಗೃತಿ ಕುರಿತು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ವಸುಂಧರ ಭೂಪತಿ ಮಾತನಾಡಿದರು. ಮುಡಾ ಮಾಜಿ ಅಧ್ಯಕ್ಷೆ ವಿದ್ಯಾ ನಾಗೇಂದ್ರ, ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಶ್ರೀ ಕ್ಷೇತ್ರ ಧರ್ಮಸ್ಥಳದ ಪಾರುಪತ್ತೇಗಾರ್ ಪಿ.ಲಕ್ಷ್ಮೀನಾರಾಯಣ ಭಟ್, ಜಿಪಂ ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್, ಅಧೀಕ್ಷಕ ಇಂಜಿನಿಯರ್ ಚಂದ್ರಹಾಸ್, ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎನ್.ನಾಗರಾಜು, ಸಿದ್ದೇಶ್, ಮಂಜುನಾಥ್, ಡಾ.ಶ್ರೀನಿವಾಸಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net