

ಮಳಖೇಡ: ಕನ್ನಡವು ಹೃದಯ ತುಂಬಿ ಬರುವ ಭಾಷೆಯಾಗಿದ್ದು, ಎಲ್ಲ ಭಾಷೆಗಳಿಗಿಂತಲೂ ಶ್ರೀಮಂತಿಕೆ ಹೊಂದಿದೆ. ಹೀಗಾಗಿ ವಿದೇಶಿಯರಾದ ಜಾನ್ ಹಿಗ್ಗಿನ್, ರೆವರೆಂಡ್ ಎಫ್. ಕಿಟೆಲ್, ಜಾನ್ ಮೈಕೆಲ್, ಡಾ.ಕ್ರಾಕ್‌ವನ್ ಸೇರಿ ಹಲವರು ಕನ್ನಡ ನಾಡಿಗೆ ವಿಶಿಷ್ಠ ಕೊಡುಗೆ ನೀಡಿದ್ದಾರೆ ಎಂದು ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಹೇಳಿದರು.
ನೀಲಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ೬೮ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಶನಿವಾರ ಆಯೋಜಿಸಿದ್ದ ಕನ್ನಡ ನುಡಿ ತೋರಣ ಕಾರ್ಯಕ್ರಮದಲ್ಲಿ ಮಾತನಾಡಿ, ನಗುವಿನಿಂದ ಮನುಷ್ಯ ರೋಗದಿಂದ ಮುಕ್ತನಾಗುವುದರ ಜತೆಗೆ, ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ. ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆಗಳು ದೂರಾಗುತ್ತವೆ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ನಗು ಅತ್ಯಂತ ಪೂರಕವಾಗಿದ್ದು, ನಗುವವನು ಯೋಗಿಯಾಗುತ್ತಾನೆ, ನಗದವನು ರೋಗಿಯಾಗುತ್ತಾನೆ ಎಂದರು.
ಎಸ್‌ಡಿಎAಸಿ ಅಧ್ಯಕ್ಷ ಕಾಶಿನಾಥ ಮಡಿವಾಳ, ಮುಖ್ಯಗುರು ಸುರೇಖಾ ವೆಂಕಟರಾವ, ನಾಟಕಕಾರ ಸಿದ್ದಲಿಂಗಯ್ಯ ಕೋಡಗಿಮಠ, ಪ್ರಮುಖರಾದ ಜಗದೇವಪ್ಪ ರುಮ್ಮನಗೂಡ, ಅಶೋಕ ಸಾಹು, ಮಂಜುನಾಥ ಸಾಹು, ರೇಣುಕಾ, ಬಿಸ್ಮಿಲ್ಲಾ ಇತರರಿದ್ದರು. ನಾಟಕ ಶಿಕ್ಷಕ ಅಶೋಕ ತೊಟ್ನಳ್ಳಿ ಸ್ವಾಗತಿಸಿ, ನಿರೂಪಣೆ ಮಾಡಿದರು. ದೈಹಿಕ ಶಿಕ್ಷಕಿ ಕವಿತಾ ವಂದಿಸಿದರು.