

ಮೂಡಿಗೆರೆ: ಕನ್ನಡ ಆಡಳಿತ ಭಾಷೆಯಾಗಬೇಕೆಂಬ ಕೂಗು ಪ್ರಬಲವಾಗಿ ಕೇಳಿಬರುತ್ತಿದ್ದರೂ ಸರ್ಕಾರದಿಂದ ಉತ್ತರ ಸಿಕ್ಕಿಲ್ಲ. ಇದಕ್ಕಾಗಿ ದೊಡ್ಡ ಆಂದೋಲನ ಅಗತ್ಯವಿದೆ ಎಂದು ಬೇಲೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಮಹೇಶ್ ಹಾದಿಹಳ್ಳಿ ಹೇಳಿದರು.
ಭಾನುವಾರ ತಾಲೂಕು ಕಸಪಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ ಹೋಳಿಗೆ, ಪಾಯಸ ಉಂಡು ಜಾತ್ರೆಯಂಥ ಸಮ್ಮೇಳನ ಮಾಡುವ ಸಂಸ್ಥೆಯಾದರೆ ಪ್ರಯೋಜನವಿಲ್ಲ. ಕನ್ನಡವನ್ನು ಸಮುದಾಯ ಭಾಷೆಯಾಗಿ ಸಾಹಿತ್ಯಾತ್ಮಕವಾಗಿ ಬೆಳೆಸುವ ಜವಾಬ್ದಾರಿ ಕಸಾಪದ ಮೇಲಿದೆ ಎಂದರು.
ನಾಡಿನುದ್ದಕ್ಕೂ ಕನ್ನಡ ಬಳಕೆ ಕ್ಷೀಣಿಸುತ್ತಿದ್ದರೂ ಯಾವ ಸಂಘಟನೆಗಳೂ ಪಾದಯಾತ್ರೆ, ಜನಾಂದೋಲನ ಮಾಡಿ ಕನ್ನಡ ಬೆಳೆಸುವ ಪ್ರಯತ್ನ ಮಾಡಲಿಲ್ಲ. ಕನ್ನಡದ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ. ದೌರ್ಜನ್ಯದ ವಿರುದ್ಧ ಕಸಾಪ ಬೀದಿಗೆ ಇಳಿಯಲಿಲ್ಲ. ಯಾರೂ ಧ್ವನಿ ಎತ್ತಲಿಲ್ಲ. ಗಡಿ, ನೆಲ, ಜಲ ಹಾಗೂ ಭಾಷೆ ವಿರುದ್ಧ ಕುದಿಯುವವರು ಮುಂದೊಂದು ದಿನ ದೇವರ ಇಚ್ಛೆಯಂತೆ ಬೂದಿಯಾಗುತ್ತಾರೆ. ಕನ್ನಡಿಗರು ದೌರ್ಬಲ್ಯ ಮೈಗೂಡಿಸಿಕೊಂಡಿದ್ದಾರೆ ಎನ್ನುವುದು ಸರಿಯಲ್ಲ. ತಾಳಿದವರು ಈ ಭಾಷೆಯನ್ನು ಬೆಳಗುತ್ತಾರೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಲಾಭದ ಸಂಸ್ಥೆಯಾಗಬಾರದು. ನಾಡು, ನುಡಿ, ಭಾಷೆಯನ್ನು ಕಟ್ಟಬೇಕು. ಕೋಟ್ಯಂತರ ರೂಪಾಯಿ ಅನುದಾನ ಬಳಸಿ ಸಮ್ಮೇಳನ ನಡೆಸಿದ ಮಾತ್ರಕ್ಕೆ ಕನ್ನಡದ ಪಾಂಡಿತ್ಯ ಉನ್ನತ ಮಟ್ಟಕ್ಕೆ ಬೆಳೆಯುವುದಿಲ್ಲ. ಪ್ರತಿ ಮನೆಯಲ್ಲೂ ಕನ್ನಡದ ಬಾವುಟ ಹಾರಾಡಬೇಕು. ಕನ್ನಡಿಗರಿಗೆ ಮಾತೃಭಾಷೆ ಮೇಲೆ ಪ್ರೀತಿ, ಗೌರವ ತುಂಬಬೇಕು. ಹೊಗಳಿಕೆ ಮತ್ತು ತೆಗಳಿಕೆ ಸಹಜವಾದ ಕ್ರಿಯೆ. ಅದನ್ನು ಮೀರಿ ನೂತನ ಪದಾಧಿಕಾರಿಗಳು ಕನ್ನಡ ಭಾಷೆ ಬೆಳೆಸಬೇಕು ಎಂದರು.
ಸಾಹಿತಿ ಹಳೆಕೋಟೆ ರಮೇಶ್ ಮಾತನಾಡಿ, ನಗರ ಪ್ರದೇಶದ ಮಕ್ಕಳಿಗೆ ಕನ್ನಡ ಮಾತನಾಡಲು ಬರುವುದಿಲ್ಲ. ಅವರಿಗೆ ಶಾಲೆಗಳಲ್ಲಿ ಕನ್ನಡ ಕಲಿಸುವ ಅನಿವಾರ್ಯ ಪರಿಸ್ಥಿತಿ ಬಂದಿರುವುದು ನಮ್ಮ ನಾಡಿನ ದುರಂತ ಎಂದರು.
ನೂತನ ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ ಮತ್ತು ಪದಾಧಿಕಾರಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಪೂರ್ವಾಧ್ಯಕ್ಷರಾದ ಶಾಂತಕುಮಾರ್, ಮಗ್ಗಲಮಕ್ಕಿ ಗಣೇಶ್, ಮುಖಂಡರಾದ ವೆಂಕಟೇಶ್, ಅನಿತಾ ಜಗದೀಪ್, ನಿರ್ಮಲಾ ಮಂಚೆಗೌಡ, ಪ್ರಕಾಶ್, ಬಕ್ಕಿ ಮಂಜು, ವಿಶಾಲಾ ನಾಗರಾಜ್, ಸುಚಿತ್ರಾ ಪ್ರಸನ್ನ ಇತರರಿದ್ದರು.