

ಬೀರೂರು: ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಕನ್ನಡ ಭಾಷೆ ಗಟ್ಟಿಯಾಗಿ ಉಳಿದಿದ್ದು, ಕನ್ನಡ ಭಾಷೆ, ನೆಲ, ಜಲ ಇವುಗಳಿಗೆ ವಿಶೇಷ ಮನ್ನಣೆಯನ್ನು ಕಲ್ಪಿಸಿ ಕೊಡಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಸವಿತಾ ರಮೇಶ್ ತಿಳಿಸಿದರು.
ಪಟ್ಟಣದ ರೋಟರಿ ಕ್ಲಬ್‌ನಲ್ಲಿ ಆಯೋಜಿಸಿದ್ದ ಹೋಬಳಿ ಕನ್ನಡ ಸಾಹಿತ್ಯ ಪರಿಷತ್‌ನ ಯುವ ಘಟಕ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ನಮ್ಮನಾಡು, ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಉಳಿವಿಸಬೇಕಾದ ಅಗತ್ಯವಿದೆ. ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಯುವ ಘಟಕದ ಯುವ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬೀರೂರಿನಲ್ಲಿ ಆಯೋಜಿಸಲು ಸರ್ವಾನುಮತದ ಅಭಿಪ್ರಾಯ ಮತ್ತು ಸಮ್ಮತಿ ಜಿಲ್ಲಾ ಘಟಕ ನಮಗೆ ನೀಡಿದೆ. ಈ ಸದಾವಕಾಶ ನಾವು ಬಳಸಿಕೊಂಡು ವಿಶೇಷವಾಗಿ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದರು.
ಕಡೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಿಕ್ಕನಲ್ಲೂರು ಎಸ್.ಪರಮೇಶ್ ಮತ್ತು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಕೋಶಾಧ್ಯಕ್ಷ ಬಿ.ಪ್ರಕಾಶ್, ಬೀರೂರು ಹೋಬಳಿ ಯುವ ಘಟಕದ ಅಧ್ಯಕ್ಷ ಕೆ.ಆರ್.ಸುಪ್ರೀತ್, ಕಡೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಯುವ ಘಟಕದ ಅಧ್ಯಕ್ಷ ಕೆ.ವಿ.ಚೇತನ್ ಕುಮಾರ್ ಇದ್ದರು.