

ಯಳಂದೂರು: ನಮ್ಮ ಚಾಮರಾಜನಗರ ಜಿಲ್ಲೆ ತಮಿಳುನಾಡು ಹಾಗೂ ಕೇರಳ ರಾಜ್ಯದ ಗಡಿಯನ್ನು ಹಂಚಿಕೊಂಡಿದ್ದರೂ ಇಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದ್ದು, ಇಲ್ಲಿನವರು ಕನ್ನಡಾಭಿಮಾನಿಗಳಾಗಿದ್ದಾರೆ ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಬಣ್ಣಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಂಗಳೂರಿನಂತಹ ಮಹಾನಗರದಲ್ಲಿ ಕನ್ನಡ ಭಾಷೆ ಮಾತನಾಡುವರ ಸಂಖ್ಯೆ ಕಡಿಮೆಯಾಗುತ್ತಿದೆ. ನಾವು ಕನ್ನಡದಲ್ಲೇ ವ್ಯವಹರಿಸುವ ಪರಿಪಾಠ ಬೆಳೆಸಿಕೊಳ್ಳಬೇಕು. ಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗೆ ನಮ್ಮ ಜಿಲ್ಲೆಯ ಪುಟ್ಟೀರಮ್ಮ ಹಾಗೂ ಸುವರ್ಣ ಮಹೋತ್ಸವ ಸಾಧಕ ಪ್ರಶಸ್ತಿಗೆ ಎಂ.ಪಿ. ರಾಜು ಹಾಗೂ ಪ್ರೇಮಲತಾಪುಟ್ಟಸ್ವಾಮಿ ಆಯ್ಕೆಗೊಂಡಿರುವ ಸಂತಸದ ವಿಚಾರ. ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸುತ್ತೇನೆ ಎಂದರು.
ಪಬ್ಲಿಕ್ ಶಾಲೆ ಆರಂಭ: ಗ್ರಾಮೀಣ ಭಾಗದಲ್ಲಿ ಸಿಎಸ್‌ಆರ್ ಫಂಡ್‌ನಿಂದ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಹೊಂಗನೂರು, ಕೆಸ್ತೂರು, ಕುದೇರು ಗ್ರಾಮಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ನೂತನ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುವುದು. ಈ ಮೂಲಕ ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಅನುವು ಮಾಡಿಕೊಡಲಾಗುವುದು. ತಾಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಜಾಗದ ಕೊರತೆ ಇದೆ. ಈಗಾಗಲೇ ಹೊನ್ನೂರು, ಮೆಳ್ಳಹಳ್ಳಿ, ವಡಗೆರೆ ಗ್ರಾಮಗಳಲ್ಲಿ ಜಾಗವನ್ನು ಗುರುತಿಸಲಾಗಿದ್ದು, ಶೀಘ್ರದಲ್ಲೇ ಕ್ರೀಡಾಂಗಣ ನಿರ್ಮಾಣ ಮಾಡಲು ಕ್ರಮ ವಹಿಸಲಾಗುವುದು ಎಂದರು.
ಮುಖ್ಯ ಭಾಷಣಕಾರ ಟಿ. ನರಸೀಪುರ ಬಿಆರ್‌ಸಿ ಎನ್.ನಾಗೇಶ್ ಗಂಗವಾಡಿ ಮಾತನಾಡಿ, ನಮ್ಮ ಭಾಷೆಗೆ ಸಾವಿರಾರು ವರ್ಷಗಳ ಐತಿಹ್ಯವಿದೆ. ಇಲ್ಲಿನ ಜಾನಪದಲ್ಲಿ ಕನ್ನಡದ ಭಾಷಾ ಬಳಕೆ ಹಾಗೂ ಪದ ಬಳಕೆ ವೈವಿಧ್ಯತೆಯಿಂದ ಕೂಡಿದೆ. ಕದಂಬರಿಂದ ಹಿಡಿದು ಮೈಸೂರು ಅರಸರವರೆಗೂ ಎಲ್ಲಾ ರಾಜಮನೆತನಗಳು ಭಾಷೆ, ಸಂಸ್ಕೃತಿ, ಶಿಲ್ಪಕಲೆ, ಸಾಹಿತ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಅಮೋಘ ಕೊಡುಗೆಯನ್ನು ನೀಡಿದ್ದಾರೆ ಎಂದರು.
ನಾವು ಕನ್ನಡ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿ ಇದನ್ನು ಉಳಿಸಿ, ಬೆಳೆಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ತಾಲೂಕು ಆಡಳಿತಕ್ಕೆ ಬಿಸಿ: ಇದಕ್ಕೂ ಮುಂಚೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲು ಕನ್ನಡಾಂಬೆಯ ಫೋಟೋವನ್ನೇ ಇಟ್ಟಿರಲಿಲ್ಲ. ಇದಕ್ಕೆ ಕನ್ನಡ ಪರ ಸಂಘಟನೆಯ ಸದಸ್ಯರು ಹಾಗೂ ಕೆಲವು ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಎಚ್ಚೆತ್ತುಕೊಂಡ ತಾಲೂಕು ಆಡಳಿತ ಪೋಟೋವನ್ನು ಇಟ್ಟು ಮೆರವಣಿಗೆಗೆ ಮುಂದಾಯಿತು. ಅಲ್ಲದೆ ಪೂರ್ವಭಾವಿ ಸಭೆಯಲ್ಲಿ ವಿವಿಧ ಶಾಲೆಗಳಿಂದ ಟ್ಯಾಬ್ಲೋಗಳನ್ನು ಮಾಡಬೇಕೆಂದು ಹೇಳಲಾಗಿದ್ದರೂ ಇದನ್ನು ಮಾಡಿರಲಿಲ್ಲ. ಒಂದು ಮಂಗಳವಾದ್ಯವೂ ಇಲ್ಲದೆ ಮೆರವಣಿಗೆ ಕೇವಲ ಕಾಟಾಚಾರಕ್ಕೆ ಎಂಬಂತಾಯಿತು.
ಕನ್ನಡದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಗೋಪಾಲಸ್ವಾಮಿ ಗ್ಯಾಸ್ ಏಜೇನ್ಸೀಸ್ ವತಿಯಿಂದ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರ ವಿತರಿಸಲಾಯಿತು. ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಪಪಂ ಅಧ್ಯಕ್ಷೆ ಲಕ್ಷ್ಮೀಮಲ್ಲು, ಉಪಾಧ್ಯಕ್ಷೆ ಶಾಂತಮ್ಮ ನಿಂಗರಾಜು ಸದಸ್ಯರಾದ ಮಹೇಶ್, ವೈ.ಜಿ.ರಂಗನಾಥ, ಸವಿತಾ ಬಸವರಾಜು, ಬಿ. ರವಿ, ಸುಶೀಲಾ ಪ್ರಕಾಶ್ ನಾಮ ನಿರ್ದೇಶಿತ ಸದಸ್ಯರಾದ ಲಿಂಗರಾಜಮೂರ್ತಿ, ಮುನವ್ವರ್ ಬೇಗ್, ಶ್ರೀಕಂಠಸ್ವಾಮಿ ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನದ ಅಧ್ಯಕ್ಷ ಎಚ್.ವಿ. ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್ ತಹಸೀಲ್ದಾರ್ ಜಯಪ್ರಕಾಶ್, ಮುಖ್ಯಾಧಿಕಾರಿ ಎಂ.ಪಿ.ಮಹೇಶ್‌ಕುಮಾರ್, ಬಿಇಒ ಮಾರಯ್ಯ, ಉಪಪ್ರಾಂಶುಪಾಲ ನಂಜುಂಡಯ್ಯ ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ, ಕರವೇ ಜಿಲ್ಲಾ ಉಪಾಧ್ಯಕ್ಷ ವೈ.ಕೆ.ಮೋಳೆ ನಾಗರಾಜು ಇತರರು ಇದ್ದರು.