

ತಿ.ನರಸೀಪುರ: ನಾಡಿನಲ್ಲಿ ಸಂವಹನಕ್ಕೆ ಬಳಸುವ ಕನ್ನಡ ಭಾಷೆ ನಮ್ಮೆಲ್ಲರ ಮೂಲ ಸಂಸ್ಕೃತಿ ಹಾಗೂ ಬದುಕಿನ ಪರಂಪರೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ಭಾನುವಾರ ರಾತ್ರಿ ಶ್ರೀ ವಿನಾಯಕ ಬಳಗದ ವತಿಯಿಂದ ಆಯೋಜಿಸಿದ್ದ್ದ 69ನೇ ಕನ್ನಡ ರಾಜೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆ ತನ್ನದೇ ಆದ ಇತಿಹಾಸ ಮತ್ತು ಶ್ರೇಷ್ಠತೆ ಹೊಂದಿದೆ. ನಮ್ಮ ಪೂರ್ವಜರು ಅದ್ಭುತ ಸಾಹಿತ್ಯ ಸಂಪತ್ತು ಬಿಟ್ಟು ಹೋಗಿದ್ದಾರೆ. ಇಂದಿನ ತಲೆಮಾರಿನವರು ಅವುಗಳನ್ನು ಉಳಿಸಿಕೊಳ್ಳಬೇಕಿದೆ ಎಂದರು.
ಕರ್ನಾಟಕ ಏಕತೆ ಮತ್ತು ಸಮಗ್ರತೆಗೆ ಭಂಗ ಉಂಟಾಗದಂತೆ ಎಚ್ಚರಿಕೆ ವಹಿಸ ಬೇಕಾದದ್ದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ. ನಾಡು-ನುಡಿ, ಸಂಸ್ಕೃತಿ ಉಳಿಸಿ ಬೆಳೆಸಲು ಕನ್ನಡಿಗರಾದ ನಾವು ಜವಾಬ್ದಾರಿ ಹೊತ್ತುಕೊಳ್ಳಬೇಕು. ಕಲಿಕೆಗಷ್ಟೇ ಇಂಗ್ಲಿಷ್ ದ್ವಿತೀಯ ಭಾಷೆ ಅಥವಾ ಹಿಂದಿ ತೃತೀಯ ಭಾಷೆಯಾಗಿರಬೇಕು. ಕರ್ನಾಟಕದಲ್ಲಿ ಕನ್ನಡವೇ ಪ್ರಧಾನವಾಗಿರಬೇಕು. ಕೆಂಪು ಹಳದಿಯ ಬಾವುಟಕ್ಕೆ ರಾಷ್ಟ್ರೀಯ ಮಾನ್ಯತೆ ನೀಡಬೇಕು ಎಂದು ಈ ಹಿಂದೆಯೇ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಕೇಂದ್ರ ಸರ್ಕಾರ ರಾಜ್ಯದ ಪ್ರಸ್ತಾವನೆಗೆ ಅನುಮೋದನೆ ನೀಡಿಲ್ಲ ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ವಾಟಾಳು ಮಠದ ಸಿದ್ಧಲಿಂಗ ಶಿವಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಹಿರಿಯ ಶಿಕ್ಷಕ, ಪತ್ರಕರ್ತ ಎಂ.ಮಹದೇವು ಮಾತೃಭಾಷೆ ಕನ್ನಡದ ಹಿರಿಮೆಯ ಬಗ್ಗೆ ಉಪನ್ಯಾಸ ನೀಡಿದರು. ಶ್ರೀ ವಿಷ್ಣು ಮೆಲೋಡೀಸ್ ತಂಡದಿಂದ ಗೀತ ಗಾಯನ ಹಾಗೂ ಜೂನಿಯರ್ ಸಿದ್ದರಾಮಯ್ಯ ಅವರು ಮನರಂಜನೆ ಕಾರ್ಯಕ್ರಮ ನಡೆಸಿಕೊಟ್ಟರು.
ಪುರಸಭೆ ಅಧ್ಯಕ್ಷ ವಸಂತ ಶ್ರೀಕಂಠ, ಸದಸ್ಯರಾದ ಮಹದೇವಮ್ಮ, ರೂಪಶ್ರೀ ಪರಮೇಶ್, ನಾಗರತ್ನಾ ಮಾದೇಶ್, ಎನ್.ಸೋಮಣ್ಣ, ಆರ್.ನಾಗರಾಜು, ಸಿಸ್ಟಮ್ ಸಿದ್ದು, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಕುರುಬರ ಸಂಘದ ಅಧ್ಯಕ್ಷ ಮನ್ನೇಹುಂಡಿ ಮಹೇಶ್, ಮಾಜಿ ಅಧ್ಯಕ್ಷ ಟಿ.ಎಸ್.ಪ್ರಶಾಂತಬಾಬು, ಜಿಪಂ ಮಾಜಿ ಸದಸ್ಯ ಕೆ.ಮಹದೇವ್, ಯುವ ಮುಖಂಡ ರಜತ್‌ಗೌಡ(ಸ್ವಾಮಿ), ಮುಖಂಡರಾದ ಪಿ.ಸ್ವಾಮಿನಾಥಗೌಡ, ಬಿ.ಮರಯ್ಯ, ರಾಘವೇಂದ್ರ, ಕರಿಯಪ್ಪ, ಪುಳ್ಳಾರಿ ಮಾದೇಶ್, ಕಿರಗಸೂರು ಕಾಂತಾರಾಜು, ಕೆ.ಗಣೇಶ್, ಮಿಥುನ್, ಡನಾಯಕನಪುರ ಸೋಮಣ್ಣ, ಮುದ್ದಬೀರನಹುಂಡಿ ಶ್ರೀಕಂಠ ಹಾಗೂ ವಿನಾಯಕ ಗೆಳೆಯರ ಬಳಗದ ಯುವಕರು ಇದ್ದರು.