ಪ್ರಪಂಚದ ಪ್ರಭಾವಿ ಭಾಷೆಗಳಲ್ಲಿ ಕನ್ನಡವೂ ಒಂದು

1 - Copy
Published on

ಮೈಸೂರು: ಪ್ರಪಂಚದ ಪ್ರಭಾವಿ ಭಾಷೆಗಳಲ್ಲಿ ನಮ್ಮ ಕನ್ನಡವು ಒಂದಾಗಿದೆ ಎಂಬುದು ನಮ್ಮ ಹೆಮ್ಮೆ ವಿಚಾರ ಎಂದು ಶಾಸಕ ಎಲ್. ನಾಗೇಂದ್ರ ಹೇಳಿದರು.
ಕಿರುರಂಗ ಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ‘ಮೂಲ ಸಂಸ್ಕೃತಿ-ಕನ್ನಡ ಸಂಸ್ಕೃತಿ’ ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ‘ನಶಿಸಿ ಹೋಗುತ್ತಿರುವ ತಳ ಸಮುದಾಯಗಳ ವಿಶಿಷ್ಟ ಕಲೆಗಳ ತರಬೇತಿ ಶಿಬಿರ’ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಪಂಚದಲ್ಲಿ ಒಟ್ಟು 9,000 ಭಾಷೆಗಳು ಇದ್ದವು. ಇದರಲ್ಲಿ 4,500 ಭಾಷೆಗಳು ನಶಿಸಿ ಹೋಗಿವೆ. ಉಳಿದ 4,500 ಭಾಷೆಗಳಲ್ಲಿ ನಮ್ಮ ಕನ್ನಡವೂ ಒಂದು ಎಂದರು.


ಕನ್ನಡ ಪ್ರಾಚೀನ ಸಂಸ್ಕೃತಿ ಹೊಂದಿರುವ ಭಾಷೆಯಾಗಿದೆ. ಮುಂದಿನ ಪೀಳಿಗೆಗೆ ಸಂಸ್ಕೃತಿಯ ಬಗ್ಗೆ ತಿಳಿಸಲು ಶಿಬಿರ ಆಯೋಜಿಸಲಾಗಿದೆ. ನಮ್ಮ ದೇಶದ ಪರಂಪರೆ, ಇತಿಹಾಸವನ್ನು ಮರೆಯಬಾರದು. ಮೈಸೂರು ದಸರಾವನ್ನು ಮುಂದಿನ ಪೀಳಿಗೆಗೆ ನೀಡಲು ಆಚರಣೆ ಮಾಡುತ್ತೇವೆ ಎಂದರು.
ಕಾಡಿನ ಜನ ಎಂದಿಗೂ ನಗರ ಪ್ರದೇಶಗಳಿಗೆ ಬರಲು ಇಷ್ಟಪಡುವುದಿಲ್ಲ. ಕಾರಣ ಅವರು ತಮ್ಮ ಮೂಲ ಸಂಸ್ಕೃತಿಯನ್ನು ಬಿಟ್ಟು ಬರಲು ಇಷ್ಟಪಡುವುದಿಲ್ಲ. ಬುಡಕಟ್ಟು ಮಹಿಳೆಯನ್ನು ದೇಶದ ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಇದು ನಮ್ಮ ಸಂಸ್ಕೃತಿ ಹಾಗೂ ಸಾಮಾಜಿಕ ನ್ಯಾಯದ ಪ್ರತೀಕ. ಕಾಡಿನ ಜನ ಅನೇಕ ವಸ್ತುಗಳನ್ನು ತಯಾರಿಸಿ ನೀಡುತ್ತಾರೆ. ಅವರ ಕೊಡುಗೆಯನ್ನು ನಾವು ಸ್ಮರಿಸಬೇಕು ಎಂದರು.

ಮೇಯರ್ ಶಿವಕುಮಾರ್ ಮಾತನಾಡಿ, ಮೂಲ ಸಂಸ್ಕೃತಿಯನ್ನು ಉಳಿಸಿಕೊಂಡು ಹೋಗಲು ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಸರ್ಕಾರ ನಾನಾ ಕಲಾ ಪ್ರಕಾರಗಳ ಕುರಿತು 20 ದಿನಗಳ ತರಬೇತಿ ಆಯೋಜಿಸಿದೆ ಎಂದರು.
ಅಪರ ಜಿಲ್ಲಾಧಿಕಾರಿ ಆರ್. ಲೋಕನಾಥ್ ಮಾತನಾಡಿ, ನಶಿಸಿ ಹೋಗುತ್ತಿರುವ ಕಲೆಗಳನ್ನು ಮುಂದಿನ ಪೀಳಿಗೆಗೆ ನಾವು ತಲುಪಿಸಬೇಕು ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು, ಕಾರ್ಮಿಕ ಇಲಾಖೆಯ ಸಹಾಯಕ ಆಯುಕ್ತೆ ನಜಿಯಾ ಸುಲ್ತಾನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್, ಮೈಸೂರು ವಿವಿ ಪ್ರಸಾರಾಂಗದ ನಿರ್ದೇಶಕ ಡಾ. ನಂಜಯ್ಯ ಹೊಂಗನೂರು, ಹಿರಿಯ ರಂಗಕರ್ಮಿ ವೈ.ಎಂ. ಪುಟ್ಟಣ್ಣಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net