ಪ್ರೌಢಶಿಕ್ಷಣದಲ್ಲಿ ಇರಲ್ಲ ಕನ್ನಡ ತೃತೀಯ ಭಾಷೆ

Kannada Third Language
Published on

| ಎನ್.ಎಲ್. ಶಿವಮಾದು ಬೆಂಗಳೂರು

ರಾಜ್ಯದ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಹಾಗೂ ದ್ವಿತೀಯ ಭಾಷೆ ಕಲಿಸಲು ಕಾನೂನು ಅಡ್ಡಿಯಾಗಿರುವ ಸಂದರ್ಭದಲ್ಲಿಯೇ ರಾಜ್ಯ ಸರ್ಕಾರವು ಕನ್ನಡ ಭಾಷಾ ಕಲಿಕಾ ಅಧಿನಿಯಮ-2015ಅನ್ನು ಅಧಿಕೃತವಾಗಿ ಅನುಷ್ಠಾನಿಸಲು ಆದೇಶ ಹೊರಡಿಸಿದೆ.

ಮುಂದಿನ ಶೈಕ್ಷಣಿಕ ವರ್ಷದಿಂದ (2024-25) 8ನೇ ತರಗತಿಗೆ ತೃತೀಯ ಭಾಷೆಯ ಕನ್ನಡ ಪಠ್ಯಪುಸ್ತಕಗಳು ಚಾಲ್ತಿಯಲ್ಲಿರುವುದಿಲ್ಲ ಎಂದು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸುವ ನಿಟ್ಟಿನಲ್ಲಿ ತೃತೀಯ ಭಾಷೆ ಕನ್ನಡ ಪಠ್ಯಪುಸ್ತಕ ಮುದ್ರಣವನ್ನು ನಿಲ್ಲಿಸಿದೆ.

ಕರ್ನಾಟಕ ಪಠ್ಯಪುಸ್ತಕ ಸಂಘವು ಡಿ.15ರಂದು ರಾಜ್ಯದ ಎಲ್ಲ ಶಾಲೆಗಳಿಗೆ 2024-25ನೇ ಸಾಲಿನಲ್ಲಿ ಅವಶ್ಯವಿರುವ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಮತ್ತು ದಿನಚರಿಗಳ ಬೇಡಿಕೆ ಸಲ್ಲಿಸುವಂತೆ ಸೂಚಿಸಿದೆ. ಈ ಆದೇಶದಲ್ಲಿ ಕನ್ನಡ ಭಾಷಾ ಅಧಿನಿಯಮದ ಪ್ರಕಾರ 2024-25ನೇ ಸಾಲಿನಿಂದ 8ನೇ ತರಗತಿ ಕನ್ನಡ ತೃತೀಯ ಭಾಷಾ ಪಠ್ಯಪುಸ್ತಕಗಳು ಚಾಲ್ತಿಯಲ್ಲಿರುವುದಿಲ್ಲ. ಅನುಪಯುಕ್ತ ಪಠ್ಯಪುಸ್ತಕಗಳ ಬಗ್ಗೆ ಕೈಗೊಳ್ಳ ಬೇಕಾದ ಕ್ರಮಗಳ ಕುರಿತು ಮುಂದಿನ ದಿನಗಳಲ್ಲಿ ಸೂಕ್ತ ಮಾರ್ಗದರ್ಶನ ನೀಡಲಾಗು ವುದು ಎಂದು ಸೂಚನೆ ನೀಡಿದೆ.

ಕಲಿಕಾ ಅಧಿನಿಯಮ ಏನು ಹೇಳುತ್ತೆ?: ರಾಜ್ಯದ ಎಲ್ಲ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೂ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2015-16ನೇ ಸಾಲಿನಿಂದ ಹಂತ-ಹಂತವಾಗಿ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸುವುದನ್ನು ಖಚಿತಪಡಿಸಿಕೊಳ್ಳಲು ಕನ್ನಡ ಭಾಷಾ ಅಧಿನಿಯಮ-2015ಅನ್ನು ಜಾರಿಗೊಳಿಸಿದೆ. ರಾಜ್ಯದ ಎಲ್ಲ ಶಾಲೆಗಳಲ್ಲಿ 2016-17ನೇ ಶೈಕ್ಷಣಿಕ ವರ್ಷದಿಂದ 1 ಮತ್ತು 2ನೇ ತರಗತಿಯಲ್ಲಿ ಹಾಗೂ ಇದೇ ರೀತಿ 10ನೇ ತರಗತಿವರೆಗೂ ಹಂತ-ಹಂತವಾಗಿ ವಿಸ್ತರಿಸಬೇಕು. ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಲು ರಾಜ್ಯ ಸರ್ಕಾರದಿಂದ ಪಠ್ಯಪುಸ್ತಕಗಳನ್ನು ಅನುಸರಿಸಬೇಕು ಎಂದು ನಿಯಮದಲ್ಲಿ ಉಲ್ಲೇಖಿಸಿದೆ.

ಇದಕ್ಕೆ ಕೇಂದ್ರ ಪಠ್ಯಕ್ರಮ ಬೋಧಿಸುವ ಶಾಲೆಗಳಾದ ಸಿಬಿಎಸ್​ಇ ಮತ್ತು ಐಸಿಎಸ್​ಇ ಶಾಲೆಗಳನ್ನು ಕೂಡ ಒಳಗೊಂಡಿರುತ್ತದೆ. ಒಂದು ವೇಳೆ ಶಾಲೆಗಳು ನಿಯಮಗಳನ್ನು ಉಲ್ಲಂಘಿಸಿದಲ್ಲಿ ಶಾಲೆಗಳನ್ನು ತೆರೆಯಲು ರಾಜ್ಯ ಸರ್ಕಾರ ನೀಡುವ ನಿರಾಕ್ಷೇಪಣಾ ಪತ್ರ (ಎನ್​ಒಸಿ) ವಾಪಸ್ ಪಡೆಯಬಹುದೆಂಬ ಕಾನೂನು ಇದೆ. ಇದೇ ನಿಯಮವನ್ನು ಈಗ ಶಿಕ್ಷಣ ಇಲಾಖೆಯು ಅನುಷ್ಠಾನ ಮಾಡುತ್ತಿದೆ. ಈಗಾಗಲೇ 1ರಿಂದ 7ನೇ ತರಗತಿವರೆಗೂ ತೃತೀಯ ಭಾಷೆ ಕನ್ನಡವನ್ನು ನಿಲ್ಲಿಸಲಾಗಿದೆ. ಈ ವರ್ಷ 8ನೇ ತರಗತಿಯಿಂದ ಆರಂಭಿಸಿದರೆ, ಮುಂದಿನ ಎರಡು ವರ್ಷಗಳಲ್ಲಿ 9, 10ನೇ ತರಗತಿಯಲ್ಲೂ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಮಾತ್ರ ಕನ್ನಡ ಬೋಧನೆ ಸಾಧ್ಯವಾಗಲಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಪಾಲಕರು, ಖಾಸಗಿ ಶಾಲೆಗಳ ನಿರಾಸಕ್ತಿ ಶಾಲೆಗಳಲ್ಲಿನ ಕಲಿಕಾ ಮಾಧ್ಯಮವು ಪಾಲಕರು ಮತ್ತು ವಿದ್ಯಾರ್ಥಿಗಳ ಆಯ್ಕೆಯಾಗಿದೆ. ಇದನ್ನು ಶಾಲೆಗಳು ಅಥವಾ ಸರ್ಕಾರಕ್ಕೆ ನಿರ್ಧರಿಸುವ ಹಕ್ಕಿಲ್ಲ. ಯಾವುದೇ ಭಾಷೆ ಕಲಿಕೆಗೆ ಒತ್ತಡ ಹೇರುವಂತಿಲ್ಲ ಎಂದು ನ್ಯಾಯಾಲಯ ಆದೇಶ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೊರ್ಟ್​ನಲ್ಲಿ ಇಂದಿಗೂ ಪ್ರಕರಣಗಳು ಬಾಕಿ ಇವೆ. ಆದರೂ ಇದನ್ನೇ ಮಾನದಂಡ ಮತ್ತು ಬಂಡವಾಳ ಮಾಡಿಕೊಂಡಿರುವ ಖಾಸಗಿ ಶಾಲೆಗಳು ಮತ್ತು ಹೊರ ರಾಜ್ಯದ ಪಾಲಕರು ತಮ್ಮ ಶಾಲೆಗಳಲ್ಲಿ ಕನ್ನಡ ಕಲಿಸಲು ಹಿಂದೇಟು ಹಾಕುತ್ತಿವೆ. ಖಾಸಗಿ ಶಾಲೆಗಳಿಗೆ ಪಾಲಕರು ಕೂಡ ಬೆಂಬಲ ನೀಡುತ್ತಿರುವುದರಿಂದ ಈ ನಿಯಮ ರಾಜ್ಯದೆಲ್ಲೆಡೆ ಸಂಪೂರ್ಣವಾಗಿ ಜಾರಿಯಾಗಿಲ್ಲ. ಸರ್ಕಾರದ ಕಣ್ಣೊರೆಸುವ ತಂತ್ರವನ್ನು ಭಾಗಶಃ ಶಾಲೆಗಳು ಅನುಸರಿಸುತ್ತಿವೆ. ಇದೀಗ ಶಿಕ್ಷಣ ಇಲಾಖೆಯು 3ನೇ ಭಾಷೆಯಾಗಿ ಕನ್ನಡ ಕಲಿಸುವ ನಿರ್ಧಾರದಿಂದ ಹಿಂದೆ ಸರಿದಿದೆ. ಪ್ರಥಮ ಮತ್ತು ದ್ವಿತೀಯ ಭಾಷೆಗಷ್ಟೇ ಆದ್ಯತೆ ನೀಡಿದೆ.

ರಾಜ್ಯದಲ್ಲಿ ಕನ್ನಡ ಕಲಿಕಾ ಅಧಿನಿಯ ಮದ ಪ್ರಕಾರ ಕನ್ನಡವನ್ನು ಪ್ರಥಮ ಮತ್ತು ದ್ವಿತೀಯ ಭಾಷೆಯಾಗಿ ಮಾತ್ರ ಬೋಧಿಸಬೇಕಿದೆ. ಹೀಗಾಗಿ, ತೃತೀಯ ಭಾಷೆಯಾಗಿ ಕನ್ನಡ ಬೋಧಿಸುವುದನ್ನು ನಿಲ್ಲಿಸಲಾಗುತ್ತಿದೆ. | ಬಿ.ಬಿ. ಕಾವೇರಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net