

ತಿ.ನರಸೀಪುರ: ನಾವೆಲ್ಲರೂ ನಾಡಿನ ಮಾತೃ ಭಾಷೆಯಾಗಿರುವ ಕನ್ನಡವನ್ನು ತಾಯಿಯಂತೆ ಪ್ರೀತಿಸಿ ಗೌರವಿಸಬೇಕು. ಅಭಿಮಾನದಿಂದಲೇ ಭಾಷೆಯನ್ನು ಉಳಿಸಿ, ಬೆಳೆಸಬೇಕು ಎಂದು ನಾರಿ ಟ್ರಸ್ಟ್ ಸಂಸ್ಥಾಪಕ ಕಾರ್ಯದರ್ಶಿ ಮುರಳೀಧರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತಾಲೂಕಿನ ತಲಕಾಡು ಗ್ರಾಮದ ಹೊಸ ಬೀದಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಕನ್ನಡ ರಾಜ್ಯೋತ್ಸವದ ನಿಮಿತ್ತ ವಿಶಿಷ್ಟ ರೀತಿಯಲ್ಲಿ ಆಯೋಜಿಸಲಾಗಿದ್ದ ಕನ್ನಡ ಸಿರಿ ವಸ್ತು ಪ್ರದರ್ಶನದಲ್ಲಿ ಮಾತನಾಡಿದ ಅವರು, ಪ್ರಸ್ತುತ ಕನ್ನಡದ ಭಾಷೆ ಅನ್ಯ ಭಾಷೆಗಳ ಹಾವಳಿಯಿಂದಾಗಿ ಸಂಕಷ್ಟಕ್ಕೆ ಸಿಲುಕಿದೆ ಎಂದರು.
ಇಂದಿನ ಪೀಳಿಗೆಗೆ ನಮ್ಮ ನಾಡು, ನುಡಿಗೆ ಶ್ರಮಿಸಿದ ಹಲವಾರು ಸಾಹಿತಿಗಳು, ಬರಹಗಾರರು ಹಾಗೂ ಕವಿಗಳ ಶ್ರಮವನ್ನು ತಿಳಿಸುವುದು ಅತ್ಯವಶ್ಯಕವಾಗಿದೆ. ಹಾಗಾಗಿ ಕನ್ನಡ ಸಿರಿ ವಸ್ತು ಪ್ರದರ್ಶನವನ್ನು ಕಾರ್ಯಕ್ರಮ ಮಕ್ಕಳಿಗೆ ಬಹಳಷ್ಟು ಪ್ರಭಾವ ಬೀರುವ ಸಂಪೂರ್ಣ ನಂಬಿಕೆಯಿದೆ ಎಂದು ಅಭಿಪ್ರಾಯಪಟ್ಟರು.
ಹೋಬಳಿ ಕೇಂದ್ರವಾಗಿರುವ ತಲಕಾಡು ಗ್ರಾಮ ಚಾರಿತ್ರಿಕವಾಗಿ ಗಂಗರ ರಾಜಧಾನಿಯಾಗಿತ್ತು. ಇಂತಹ ಕ್ಷೇತ್ರದಲ್ಲಿ ಕನ್ನಡ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಮಾಡುತ್ತಿದ್ದು, ಪ್ರಸ್ತುತ ಇಂತಹ ಕಾರ್ಯಕ್ರಮ ಕಣ್ತೆರೆಸುವ ಪ್ರಯತ್ನವಾಗಿದೆ. ನಮ್ಮ ರಾಜಧಾನಿ ಬೆಂಗಳೂರಿನ ಹಲವಾರು ಭಾಗಗಳಲ್ಲಿ ಕನ್ನಡ ಮಾತನಾಡುವವರನ್ನು ಹುಡುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕನ್ನಡದಲ್ಲಿ ನಾವೇನಾದರೂ ವಿಳಾಸ ಕೇಳಿದರೆ ನಮಗೆ ಗೊಂದಲ ಎದುರಾಗುತ್ತದೆ. ಏಕೆಂದರೆ ಹೊರಗಿನಿಂದ ಬಂದವರಿಗೆ ಕನ್ನಡ ನಾಡಿನಲ್ಲಿದ್ದೇವೆಂಬ ಸಾಮಾನ್ಯ ಜ್ಞಾನ ಕೂಡ ಇಲ್ಲದ ರೀತಿ ಅವರ ಭಾಷೆಯಲ್ಲಿ ಮಾತನಾಡಿ ನಮ್ಮನ್ನೇ ತಬ್ಬಿಬ್ಬಾಗುವಂತೆ ಮಾಡಿ ಬಿಡುತ್ತಾರೆಂದರು.
ಬಿ.ಆರ್.ಪಿ ಮಹದೇವಸ್ವಾಮಿ ಮಾತನಾಡಿ, ಕನ್ನಡ ಸಿರಿ ಹೆಸರೇ ಹೇಳುವಂತೆ ಸಿರಿ ಸಂಪತ್ತಿನಿಂದ ಕೂಡಿದ ಕನ್ನಡ ಶಬ್ದ, ಕನ್ನಡ ಭಂಡಾರವೇ ಹಾಸುಹೊಕ್ಕಾಗಿದೆ. ನಮ್ಮ ಶಾಲೆಯಲ್ಲಿ ಇಂತಹ ಒಂದು ಕಾರ್ಯಕ್ರಮ ಆಯೋಜನೆಗೊಂಡಿರುವುದು ಹೆಮ್ಮೆಯ ವಿಷಯವಾಗಿದೆ. ಇಂದಿನ ಪೀಳಿಗೆ ಮುಂದಿನ ದಿನಗಳಲ್ಲಿಯಾದರೂ ನಮ್ಮ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಎಂಬ ಸಂದೇಶವನ್ನು ರವಾನಿಸುವಂತಹ ಕೆಲಸವಾಗ ಬೇಕೆಂದರು.
ಕನ್ನಡ ಪಠ್ಯ ಶಿಕ್ಷಕ ಎನ್.ಪ್ರವೀಣ್‌ಕುಮಾರ್ ಮಾತನಾಡಿ, ಕನ್ನಡಕ್ಕೆ ಶ್ರಮಿಸಿದ ಹಲವಾರು ಸಾಹಿತಿಗಳು, ಕವಿಗಳು, ಬರಹಗಾರರಿದ್ದಾರೆ. ಆದರೆ ನಾವು ಏಳೆಂಟು ಜ್ಞಾನಪೀಠ ಪಡೆದ ಕವಿಗಳು, ಸಾಹಿತಿಗಳನ್ನು ಮಾತ್ರ ತಿಳಿಸುತ್ತಿದ್ದೇವೆ. ನೂರಾರು ಸಂಖ್ಯೆಯಲ್ಲಿ ಇರುವ ಸಾಹಿತಿಗಳ, ಕವಿಗಳು ತೆರೆಮರೆಯಲ್ಲಿ ಮರೆಯಾಗಿದ್ದು ಅವರನ್ನು, ಅವರ ಕೊಡುಗೆಯನ್ನು ತಿಳಿಸುವ ಪ್ರಯತ್ನ ಕನ್ನಡ ಸಿರಿ ಕಾರ್ಯಕ್ರಮದಲ್ಲಿ ನೋಡಬಹುದಾಗಿದೆ. ಕಳೆದ ಐದು ತಿಂಗಳಿನಿಂದ ಕನ್ನಡ ಕವಿಗಳ ಕೃತಿಗಳು, ಘೋಷವಾಕ್ಯಗಳು, ಚಿತ್ರಗಳು, ಹೇಳಿಕೆಗಳು ಮತ್ತಿತರ ಮಾಹಿತಿಗಳನ್ನು ಕಲೆ ಹಾಕಿ ಈ ಬಾರಿ ದೊಡ್ಡ ಮಟ್ಟದಲ್ಲಿ ಮಕ್ಕಳಿಗೆ ನಮ್ಮ ನಾಡಿನ ಎಲ್ಲ ಕವಿಗಳು, ಸಾಹಿತಿಗಳ ಪರಿಚಯವನ್ನು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿ ಇಂದು ಸಾಕಾರಗೊಂಡಿದೆ. ಇದಕ್ಕೆ ಪ್ರೋತ್ಸಾಹಿಸಿದ ನಾರಿ ಟ್ರಸ್ಟ್ ಸಂಸ್ಥಾಪಕರಾದ ಮುರಳೀಧರ್ ಅವರಿಗೆ ಶಾಲಾ ವತಿಯಿಂದ ಅಭಿನಂದಿಸುತ್ತೇವೆ ಎಂದರು.
ಶಾಲೆಯ ಹೊರಾಂಗಣದಲ್ಲಿ ಕನ್ನಡ ಸಿರಿ ವಸ್ತುಪ್ರದರ್ಶನದ ಪ್ರಚಾರ ಫಲಕ ಸಾರ್ವಜನಿಕರನ್ನು ಆಕರ್ಷಿಸಿತು. ಮುಖ್ಯರಸ್ತೆಯಲ್ಲಿ ಬರುವ ಶಾಲಾ, ಕಾಲೇಜು ಮಕ್ಕಳು ಹಾಗೂ ಸಾರ್ವಜನಿಕರು ಶಾಲೆಯ ಒಳಗೆ ಪ್ರವೇಶ ನೀಡಿ ರಾಜ್ಯದ ಕನ್ನಡ ಸಾಹಿತಿಗಳು ಹಾಗೂ ಕವಿಗಳನ್ನು ಕಣ್ಣುಂಬಿಕೊಂಡಿದ್ದು ವಿಶೇಷವಾಗಿತ್ತು. ಮುಖ್ಯಶಿಕ್ಷಕಿ ಎಸ್.ಎಂ.ಗಾಯತ್ರಿ, ಕಲಿಯೂರು ಬಸವರಾಜು, ರಘು, ನಳಿನಿ ಕುಮಾರಿ, ನಜ್ಜುಲ್ಲಾ, ಫರ್ವೀನ್, ಚೌಡಯ್ಯ, ಬಂಗಾರನಾಯಕ್ ಹಾಗೂ ಇತರರಿದ್ದರು.