ಕನ್ನಡ ರಾಜ್ಯೋತ್ಸವದ ಸಂಭ್ರಮ ಹೆಚ್ಚಿಸಿದ ಜಿಲ್ಲಾಧಿಕಾರಿ ಆದೇಶ: ಮಂಡ್ಯದಲ್ಲಿ ಕಾರ್ಯಕ್ರಮ, ನಾಮಫಲಕದಲ್ಲಿ ಕನ್ನಡ ಕಡ್ಡಾಯ

Mandya Dc Dr.Kumara
Published on

ಮಂಡ್ಯ: ಕನ್ನಡ ರಾಜ್ಯೋತ್ಸವ ಸಂಭ್ರಮದ ನಡುವೆ ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಆಯೋಜಿಸುವ ಎಲ್ಲ ಕಾರ್ಯಕ್ರಮಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವುದರ ಜತೆಗೆ ವಾಣಿಜ್ಯ ಸಂಕೀರ್ಣ, ಅಂಗಡಿ ಮುಂಗಟ್ಟು, ಕಾರ್ಯಸಂಸ್ಥೆಯ ಕಚೇರಿಯ ನಾಮಫಲಕ ಕನ್ನಡ ಭಾಷೆಯಲ್ಲಿ ಇರಬೇಕೆಂದು ಜಿಲ್ಲಾಧಿಕಾರಿ ಡಾ.ಕುಮಾರ ಬುಧವಾರ ಆದೇಶ ಹೊರಡಿಸಿದ್ದಾರೆ.
ಜಿಲ್ಲೆ ಹಾಗೂ ತಾಲೂಕು ಕೇಂದ್ರದ ಅಂಗಡಿ, ವಾಣಿಜ್ಯ ಸಂಕೀರ್ಣ ಹಾಗೂ ಕಾರ್ಯಸಂಸ್ಥೆಯ ಕಚೇರಿಗಳಲ್ಲಿ ಕನ್ನಡ ಭಾಷೆ ಪ್ರಧಾನವಾಗಿ ಬಳಸುತ್ತಿಲ್ಲವೆಂದು ಕನ್ನಡಪರ ಸಂಘಟನೆ, ಕನ್ನಡಾಭಿಮಾನಿಗಳು, ಸಾಹಿತಿಗಳು, ಹೋರಾಟಗಾರರು ದೂರು ನೀಡಿದ್ದಾರೆ. ಕರ್ನಾಟಕ ರಾಜ್ಯ ರಚನೆಯಾಗಿ 68 ವರ್ಷವಾಗಿದ್ದು, ಕನ್ನಡವನ್ನು ಸಂಪರ್ಕ ಭಾಷೆಯಾಗಿ ಅಧಿಕೃತವಾಗಿ ಹಾಗೂ ಸಾರ್ವಜನಿಕವಾಗಿ ಬಳಕೆ ಮಾಡುವುದು ಅಗತ್ಯವಾಗಿದೆ. ಮಾತ್ರವಲ್ಲದೆ, ಕನ್ನಡ ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಯಾಗಿದ್ದು, ಸುಮಾರು ಎರಡು ಸಾವಿರ ವರ್ಷದ ಇತಿಹಾಸ ಹೊಂದಿದೆ. ಕೇಂದ್ರ ಸರ್ಕಾರ ಶಾಸ್ತ್ರೀಯ ಸ್ಥಾನಮಾನ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕನ್ನಡ ಆಡಳಿತ ಹಾಗೂ ಸಾರ್ವಭೌಮ ಭಾಷೆಯಾಗಿದೆ ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಸರ್ಕಾರದ ಎಲ್ಲ ಕಚೇರಿಗಳ ಪತ್ರವ್ಯವಹಾರ ಕಡ್ಡಾಯವಾಗಿ ಕನ್ನಡದಲ್ಲಿಯೇ ಇರಬೇಕು. ಅಂಗಡಿ ಮುಂಗಟ್ಟು, ಕಾರ್ಯ ಸಂಸ್ಥೆಯ ಕಚೇರಿಯ ನಾಮಫಲಕ ಕನ್ನಡ ಭಾಷೆಯಲ್ಲಿರಬೇಕು. ಯಾವುದೇ ಲೋಪದೋಷಗಳಿಗೆ ಅವಕಾಶವಿಲ್ಲದಂತೆ ಬರೆಸಬೇಕು. ಪ್ರತಿ ಕಾರ್ಯಸಂಸ್ಥೆ ಇತರ ಭಾಷೆ ಬಳಸಿರುವ ಸಂದರ್ಭದಲ್ಲಿ ಆ ಭಾಷೆಯಲ್ಲಿರುವ ಹೆಸರು ಮತ್ತು ಪದಗಳು ಕನ್ನಡ ಆವೃತ್ತಿಯ ಕೆಳಗೆ ಬರಬೇಕು. ಇತರ ಭಾಷೆಗಿಂತ ಕನ್ನಡಕ್ಕೆ ಹೆಚ್ಚಿನ ಸ್ಥಳಾವಕಾಶ ಇರಬೇಕು. ಈ ಕುರಿತು ಲೈಸೆನ್ಸ್ ನವೀಕರಣ ಸಂದರ್ಭದಲ್ಲಿ ಪ್ರಧಾನವಾಗಿ ಕನ್ನಡ ಭಾಷೆಯಲ್ಲಿರುವ ನಾಮಫಲಕ ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಲೈಸನ್ಸ್ ರದ್ದುಪಡಿಸಲು ಕ್ರಮ ವಹಿಸುವುದರ ಜತೆಗೆ ದಂಡ ವಿಧಿಸಬೇಕು. ಈ ನಿಟ್ಟಿನಲ್ಲಿ ಆದೇಶ ಕಟ್ಟುನಿಟ್ಟಿನಲ್ಲಿ ಅನುಷ್ಠಾನಗೊಳಿಸಲು ಪೌರಾಯುಕ್ತರು, ತಹಸೀಲ್ದಾರ್, ತಾಪಂ ಇಒ, ಪುರಸಭೆ/ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗಮನಹರಿಸುವಂತೆ ಆದೇಶದಲ್ಲಿ ಡಿಸಿ ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net