ಗಡಿಜಿಲ್ಲೆ ಕೊಡಗಿನಲ್ಲಿ ಕನ್ನಡ ಕಡ್ಡಾಯ

Kannada is compulsory in border district Kodagu
Published on

ಸುನಿಲ್ ಪೊನ್ನೇಟಿ ಮಡಿಕೇರಿ:

ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಕುರಿತಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ. ಈ ಸಂಬಂಧ ಈಗಾಗಲೇ ಜಿಲ್ಲೆಯ ಎಲ್ಲಾ ಅಧಿಕಾರಿಗಳ ಜತೆಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ವೀಡಿಯೋ ಸಂವಾದ ನಡೆಸಿದ್ದು, ಕನ್ನಡ ಭಾಷೆ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ ೨೪ ಜಾರಿಯಾಗಿರುವುದನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸಿದ್ದಾರೆ. ಈ ಬೆನ್ನಲ್ಲೇ ಸ್ಥಳೀಯಾಡಳಿತಗಳು ಕನ್ನಡ ಕಡ್ಡಾಯ ಆದೇಶ ಸಂಬಂಧ ಬಿರುಸಿನ ಕಾರ್ಯಾಚರಣೆ ನಡೆಸುತ್ತಿವೆ.

ಕೇರಳದ ಗಡಿಯಲ್ಲಿರುವ ಕೊಡಗಿನಲ್ಲಿ ಪರಭಾಷೆಯ ಹಾವಳಿ ಮಿತಿಮೀರುತ್ತಿದ್ದು, ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿರುವ ಆತಂಕದ ಬೆನ್ನಲ್ಲೇ ಜಿಲ್ಲೆಯಾದ್ಯಂತ ಅನ್ಯಭಾಷೆಗಳ ನಾಮಫಲಕ ಸಾಮಾನ್ಯ ಎನ್ನುವಂತಾಗಿದೆ. ಜಿಲ್ಲೆಯಲ್ಲಿ ಇಂಗ್ಲೀಷ್ ಪ್ರಾಬಲ್ಯದ ಮಧ್ಯೆ ಮಲೆಯಾಳಂ ಸಮಾನ ಪಾಲುದಾರಿಕೆ ಹೊಂದಿದ್ದು, ಕುಶಾಲನಗರ ಸುತ್ತಮುತ್ತಲಿನ ಪ್ರದೇಶದಲ್ಲಿ ಟಿಬೆಟಿಯನ್ ಭಾಷೆಯ ನಾಮಫಲಕಗಳು ರಾರಾಜಿಸುವುದು ಆಶ್ಚರ್ಯವೇನಲ್ಲ.

ಸಿದ್ದಾಪುರದಂತಹ ಮಲೆಯಾಳಂ ಪ್ರಾಬಲ್ಯದ ಊರಿನಲ್ಲಿ ಕನ್ನಡ ಭಾಷೆಗೆ ಕೊನೆಯ ಸ್ಥಾನ. ಇಲ್ಲಿಯ ಬಹುತೇಕ ನಾಮಫಲಕಗಳು ಮಲೆಯಾಳಂ ಭಾಷೆಯಲ್ಲಿ ಕಂಡುಬರುತ್ತವೆ. ಗಡಿ ಗ್ರಾಮ ಕರಿಕೆಯಲ್ಲೂ ಇದೇ ಸ್ಥಿತಿ. ಇಲ್ಲಿನವರು ವ್ಯಾವಹಾರಿಕವಾಗಿ ಕೇರಳದ ಜೊತೆ ಸಂಬಂಧ ಬೆಳೆಸಿಕೊಂಡಿದ್ದು, ಆಡಳಿತಾತ್ಮಕವಾಗಿ ಕೊಡಗಿನ ಜೊತೆ ಇದ್ದಾರೆ. ವಿರಾಜಪೇಟೆ, ಕುಟ್ಟ ಭಾಗದಲ್ಲೂ ನಾಮಫಲಕಗಳದ್ದು ಇದೇ ಕಥೆ.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ ೨೦೨೪ಕ್ಕೆ ಫೆಬ್ರವರಿ ೨೫ಕ್ಕೆ ರಾಜ್ಯಪಾಲರಿಂದ ಒಪ್ಪಿಗೆ ಸಿಕ್ಕಿರುವುದರಿಂದ ಇದನ್ನು ಕಡ್ಡಾಯವಾಗಿ ಜಾರಿಗೆ ತರಲು ಜಿಲ್ಲಾಡಳಿತ ಮುಂದಾಗಿದೆ. ಹಾಗಾಗಿ ಇನ್ನಾದರೂ ಜಿಲ್ಲೆಯ ನಾಮಫಲಕಗಳಲ್ಲಿ ಕನ್ನಡದ ಕಂಪು ಕಾಣಬಹುದು ಎನ್ನುವ ನಿರೀಕ್ಷೆ ಹುಟ್ಟಿಸಿದೆ. ಜಿಲ್ಲೆಯ ಎಲ್ಲಾ ನಾಮಫಲಕಗಳಲ್ಲಿ ಶೇ. ೬೦ ರಷ್ಟು ಕನ್ನಡ ಭಾಷೆ ಕಡ್ಡಾಯ ಅನುಷ್ಠಾನ ಸಂಬಂಧ ಅಧಿಕಾರಿಗಳ ಜೊತೆ ಈಗಾಗಲೇ ವಿಡಿಯೋ ಸಂವಾದ ನಡೆಸಿರುವ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲೆಯ ಗಡಿಭಾಗ ಸೇರಿದಂತೆ ನಗರ, ಪಟ್ಟಣ ಹಾಗೂ ಎಲ್ಲೆಡೆ ಅಳವಡಿಸಿರುವ ಮತ್ತು ಮುಂದೆ ಅಳವಡಿಸುವ ನಾಮಫಲಕದಲ್ಲಿ ಕನ್ನಡ ಭಾಷೆಗೆ ಕಡ್ಡಾಯವಾಗಿ ಶೇ.೬೦ ರಷ್ಟು ಪ್ರಥಮ ಆದ್ಯತೆ ನೀಡಬೇಕು ಎಂದು ಸೂಚಿಸಿದ್ದಾರೆ.

ಎಲ್ಲಾ ಅಂಗಡಿ, ಹೊಟೇಲ್, ವಾಣಿಜ್ಯ ಸಂಕೀರ್ಣ, ಕೈಗಾರಿಕೋದ್ಯಮ, ಶಾಲಾ - ಕಾಲೇಜು, ಸರ್ಕಾರಿ ಕಚೇರಿಗಳು ಹಾಗೂ ಪ್ರವಾಸೋದ್ಯಮ ಕೇಂದ್ರಗಳ ನಾಮಫಲಕಗಳಲ್ಲಿ ಶೇ.೬೦ ರಷ್ಟು ಕನ್ನಡ ಭಾಷಾ ಬಳಕೆ ಕಡ್ಡಾಯವಾಗಿದೆ. ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ, ಮಂಜೂರಾತಿ ಪಡೆದ ಎಲ್ಲಾ ಸಂಸ್ಥೆಗಳಿಗೂ ಈ ಕಾಯ್ದೆ ಅನ್ವಯವಾಗಲಿದೆ. ಖಾಸಗಿ ಶಾಲಾ ಕಾಲೇಜುಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನರಂಜನಾ ಕೇಂದ್ರಗಳು, ಹೋಟೆಲ್ ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ನಾಮಫಲಕಗಳ ಮೇಲ್ಬಾಗದಲ್ಲಿ ಕನ್ನಡ ಭಾಷೆಯನ್ನು ಶೇ.೬೦ ರಷ್ಟು ಪ್ರದರ್ಶಿಸಬೇಕು.

ಜಿಲ್ಲಾಧಿಕಾರಿಗಳ ವೀಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದ ಜಿ.ಪಂ. ಸಿಇಒ ವರ್ಣಿತ್ ನೇಗಿ ಅವರು ನಾಮಫಲಕಗಳಲ್ಲಿ ಶೇ.೬೦ ರಷ್ಟು ಕನ್ನಡ ಭಾಷೆ ಬಳಕೆ ಸಂಬಂಧಿಸಿದಂತೆ ತಾ.ಪಂ. ಮತ್ತು ಗ್ರಾ.ಪಂ. ಮೂಲಕ ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು. ಈ ಬೆನ್ನಲ್ಲೇ ಸ್ಥಳೀಯಾಡಳಿತಗಳು ಕಾರ್ಯಾಚರಣೆಗೆ ಇಳಿದಿದ್ದು, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮ-೨೦೨೨ ಅನ್ವಯ ನಾಮಫಲಕ ಅಳವಡಿಕೆ ಮಾರ್ಗಸೂಚಿಗಳ ಬಗ್ಗೆ ಉದ್ದಿಮೆದಾರರಿಗೆ ನೊಟೀಸ್ ಕೊಡಲಾಗುತ್ತಿದೆ.

ಎಲ್ಲಾ ಅಂಗಡಿ, ಹೋಟೆಲ್, ವಾಣಿಜ್ಯ ಸಂಕೀರ್ಣ, ಕೈಗಾರಿಕೋದ್ಯಮ, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನೋರಂಜನಾ ಕೇಂದ್ರಗಳು, ಶಾಲಾ - ಕಾಲೇಜು ಸರ್ಕಾರಿ ಕಚೇರಿಗಳು ಹಾಗೂ ಪ್ರವಾಸೋದ್ಯಮ ಕೇಂದ್ರಗಳನ್ನು ಒಳಗೊಂಡಂತೆ ಎಲ್ಲಾ ನಾಮಫಲಕಗಳಲ್ಲಿ ಕನಿಷ್ಠ ಶೇಕಡ ೬೦ ರಷ್ಟು ಕನ್ನಡ ಭಾಷಾ ಬಳಕೆಗೆ ಕಡ್ಡಾಯವಾಗಿದ್ದು, ಎಲ್ಲರೂ ಸಹ ತಮ್ಮ ತಮ್ಮ ವ್ಯಾಪಾರ ವಹಿವಾಟು ಕೇಂದ್ರಗಳ ನಾಮಫಲಕಗಳಲ್ಲಿ ಶೇ ೬೦ರಷ್ಟು ಕನ್ನಡ ಭಾಷಾ ಬಳಕೆಗೆ ಪ್ರಾತಿನಿಧ್ಯ ನೀಡತಕ್ಕದ್ದು, ಎನ್ನುವ ಸೂಚನೆ ನೀಡಲಾಗಿದೆ.

ಅಧಿನಿಯಮದ ಉಪಬಂಧ ೧೭(೬) ರಂತೆ ಎಲ್ಲಾ ಉದ್ದಿಮೆ ಅಥವಾ ಸಂಸ್ಥೆಗಳ ಹೆಸರನ್ನು ಪ್ರದರ್ಶಿಸುವ ಫಲಕಗಳ ಮೇಲ್ಭಾಗದ ಅರ್ಧ ಭಾಗ ಕನಿಷ್ಠ ಶೇ. ೬೦ರಷ್ಟು ಕನ್ನಡದಲ್ಲಿ ಇರಬೇಕು. ಉದ್ದಿಮೆ ಮತ್ತು ಸಂಸ್ಥೆಗಳ ಮಾಲೀಕ ಅಥವಾ ಉಸ್ತುವಾರಿ ಹೊಂದಿದ ಯಾವುದೇ ವ್ಯಕ್ತಿಗಳು ಈ ವಿಧೇಯಕದ ಪ್ರಕರಣ ೧೭ರ (೬) ರಿಂದ (೧೦) ಎ ವರೆಗಿನ ಉಪಬಂಧಗಳನ್ನು ಪಾಲಿಸಲು ವಿಫಲವಾದಲ್ಲಿ ಮೊದಲನೆಯ ಅಪರಾಧಕ್ಕಾಗಿ ೫ ಸಾವಿರ ರೂ. ತನಕ, ಎರಡನೇ ಬಾರಿಗೆ ವಿಫಲವಾದಲ್ಲಿ ೧೦ ಸಾವಿರ ರೂ. ತನಕ ದಂಡ, ಮೂರನೇ ಬಾರಿ ವಿಫಲನಾದಲ್ಲಿ ೨೦ ಸಾವಿರ ರೂ. ದಂಡ ವಿಧಿಸಲಾಗುತ್ತದೆ. ನಂತರ ಪರವಾನಗಿಯನ್ನು ರದ್ದುಗೊಳಿಸಿ ಕಾನೂನು ಕ್ರಮಕ್ಕೆ ಗುರಿ ಮಾಡಲಾಗುತ್ತದೆ, ಎನ್ನುವ ಎಚ್ಚರಿಕೆ ನೀಡಲಾಗುತ್ತಿದೆ.

ಪ್ರವಾಸಿ ಜಿಲ್ಲೆಯಾದ ಕೊಡಗಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಪ್ರವಾಸೋದ್ಯಮ ಸಂಬಂಧಿತ ಹೊಟೇಲ್, ಲಾಡ್ಜ್, ರೆಸಾರ್ಟ್, ರೆಸ್ಟೋರೆಂಟ್‌ಗಳಲ್ಲೂ ಇಂಗ್ಲೀಷ್ ಬಳಕೆ ವ್ಯಾಪಕವಾಗಿದ್ದು, ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ ೨೦೨೪ರ ಪ್ರಕಾರ ಇಲ್ಲಿಯೂ ನಾಮಫಲಕಗಳಲ್ಲಿ ಶೇ. ೬೦ ಭಾಗ ಕನ್ನಡ ಬಳಕೆ ಕಡ್ಡಾಯವಾಗಿದೆ. ಹಾಗಾಗಿ ಜಿಲ್ಲೆಯಲ್ಲಿರುವ ಎಲ್ಲಾ ಹೊಟೇಲ್, ರೆಸ್ಟೊರೆಂಟ್‌ಗಳು, ಹೋಂಸ್ಟೇಗಳು, ರೆಸಾರ್ಟ್‌ಗಳು ತಮ್ಮ ನಾಮಫಲಕಗಳಲ್ಲಿ ಶೇ.೬೦ ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯ ಮಾಡಲು ಕ್ರಮ ವಹಿಸುವಂತೆ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಅನಿತಾ ಭಾಸ್ಕರ್ ಸಂಬಂಧಿಸಿದವರಿಗೆ ಸೂಚಿಸಿದ್ದಾರೆ.

ಜಿಲ್ಲಾಡಳಿತ ಮತ್ತು ಸ್ಥಳಿಯಾಡಳಿತಗಳು ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿರುವ ಮಾಹಿತಿ ಹೊರಬೀಳುತ್ತಲೇ ಈಗಾಗಲೇ ಹಲವು ಉದ್ದಿಮೆಗಳಲ್ಲಿ ನಾಮಫಲಕಗಳಲ್ಲಿ ಬದಲಾವಣೆ ಶುರುವಾಗಿದೆ. ಇನ್ನೂ ಪರಭಾಷಾ ವ್ಯಾಮೋಹಕ್ಕೆ ಅಂಟಿಕೊಂಡಿರುವವರಿಗೆ ಮೊದಲಿಗೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ ೨೦೨೪ರ ಬಗ್ಗೆ ಮಾಹಿತಿ ಕೊಟ್ಟು ತಿಳುವಳಿಕೆ ಮೂಡಿಸಲಾಗುತ್ತದೆ. ಇದಕ್ಕೆ ಬಗ್ಗದಿದ್ದರೆ ನೊಟೀಸ್ ಕೊಡಲಾಗುತ್ತದೆ. ಇಷ್ಟಾಗಿಯೂ ಎಚ್ಚೆತ್ತುಕೊಳ್ಳದಿದ್ದರೆ ನಿಗದಿಯಂತೆ ದಂಡ ವಿಧಿಸಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ ೨೦೨೪ ಕಟ್ಟುನಿಟ್ಟಿನ ಜಾರಿ ಬಗ್ಗೆ ಅಧಿಕಾರಿಗಳು ಗಂಭೀರವಾಗಿರುವುದು ಕನ್ನಡಾಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಈ ಹಿಂದೆ ಈ ಸಂಬಂಧ ಸಾಕಷ್ಟು ಬಾರಿ ಮನವಿಗಳನ್ನು ಮಾಡಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಈಗ ವಿಧೇಯಕದ ನೆಪದಲ್ಲಾದರೂ ನಾಮಫಲಕಗಳಲ್ಲಿ ಕನ್ನಡ ಡಿಂಡಿಮ ಬಾರಿಸುವಂತಾಗಲಿ ಎನ್ನುವ ಆಶಯ ವ್ಯಕ್ತವಾಗುತ್ತಿದೆ.

ಜಿಲ್ಲೆಯ ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು, ವಹಿವಾಟು ಕೇಂದ್ರಗಳು, ಉದ್ಯಮಗಳ ನಾಮಫಲಕಗಳಲ್ಲಿ ಶೇ.೬೦ ರಷ್ಟು ಕನ್ನಡ ಭಾಷೆ ಇರಬೇಕಾಗಿರುತ್ತದೆ. ಸ್ಥಳೀಯ ಪ್ರಾಧಿಕಾರಗಳಿಂದ ಅನುಮತಿ, ಮಂಜೂರಾತಿ ಪಡೆದ ಎಲ್ಲಾ ಸಂಸ್ಥೆಗಳಿಗೂ ಈ ಕಾಯ್ದೆ ಅನ್ವಯವಾಗಲಿದೆ. ಖಾಸಗಿ ಶಾಲಾ ಕಾಲೇಜುಗಳು, ಆಸ್ಪತ್ರೆಗಳು, ಪ್ರಯೋಗಾಲಯಗಳು, ಮನರಂಜನಾ ಕೇಂದ್ರಗಳು, ಹೋಟೆಲ್ ಸೇರಿದಂತೆ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ನಾಮಫಲಕಗಳ ಮೇಲ್ಭಾಗದಲ್ಲಿ ಕನ್ನಡ ಭಾಷೆಯನ್ನು ಶೇ.೬೦ ರಷ್ಟು ಪ್ರದರ್ಶಿಸಬೇಕು.
ವೆಂಕಟ್ ರಾಜಾ, ಜಿಲ್ಲಾಧಿಕಾರಿ, ಕೊಡಗು

ಎಲ್ಲಾ ಕಡೆಗಳಂತೆ ನಮ್ಮ ಪಂಚಾಯತಿ ವ್ಯಾಪ್ತಿಯಲ್ಲೂ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ - ೨೦೨೪ ಕಡ್ಡಾಯವಾಗಿ ಜಾರಿ ಮಾಡಲಾಗುತ್ತಿದೆ. ಈ ಬಗ್ಗೆ ಈಗಾಗಲೇ ಸಂಬಂಧಿಸಿದ ಉದ್ದಿಮೆಗಳಿಗೆ ಸೂಚನೆಗಳನ್ನು ನೀಡಲಾಗಿದೆ. ಕೆಲವರು ನಾಮಫಲಕಗಳನ್ನು ವಿಧೇಯಕದಲ್ಲಿನ ಮಾರ್ಗಸೂಚಿಗಳಂತೆ ಬದಲಾಯಿಸಿಕೊಂಡಿದ್ದಾರೆ. ಉಳಿದವರಿಗೆ ನೊಟೀಸ್ ಕೊಡಲಾಗುತ್ತದೆ. ನಂತರವೂ ಬದಲಾಗದಿದ್ದರೆ ದಂಡ ಹಾಕಲಾಗುವುದು.
ಸುಮೇಶ್, ಪಿಡಿಒ, ಗುಡ್ಡೆಹೊಸೂರು

ಜಿಲ್ಲೆಯಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ತಿದ್ದುಪಡಿ ವಿಧೇಯಕ ೨೦೨೪ ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿರುವ ಜಿಲ್ಲಾಡಳಿತದ ನಿರ್ಧಾರ ಸ್ವಾಗತಾರ್ಹ. ನಮ್ಮ ಅವಧಿಯಲ್ಲಿ ನಾಮಫಲಕಗಳಲ್ಲಿ ಶೇ. ೬೦ರಷ್ಟು ಕನ್ನಡ ಅಳವಡಿಕೆ ಬಗ್ಗೆ ಸಾಕಷ್ಟು ಹೋರಾಟ ಮಾಡಲಾಗಿತ್ತು. ಪ್ರತಿ ಕೆಡಿಪಿ ಸಭೆಯಲ್ಲೂ ಈ ವಿಷಯದ ಪ್ರಸ್ತಾಪ ಮಾಡಲಾಗುತ್ತಿತ್ತು. ಆದರೂ ನಿರೀಕ್ಷಿತ ಪ್ರಯೋಜನ ಆಗುತ್ತಿರಲಿಲ್ಲ. ಇನ್ನು ಮುಂದೆಯಾದರೂ ಕೊಡಗಿನಲ್ಲಿ ನಾಮಫಲಕಗಳಲ್ಲಿ ಕನ್ನಡ ರಾರಾಜಿಸುವಂತಾಗಲಿ.
ಲೋಕೇಶ್ ಸಾಗರ್, ಮಾಜಿ ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು, ಕೊಡಗು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net