ಪ್ರಾಚೀನತೆ ಹೊಂದಿದ ಭಾಷೆ ಕನ್ನಡ

25 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಎರಡು ಸಾವಿರಕ್ಕೂ ಅಧಿಕ ವರ್ಷಗಳ ಪ್ರಾಚೀನತೆ ಹೊಂದಿರುವ ಕನ್ನಡ ಭಾಷೆಗೆ ತನ್ನದೇ ಆದ ಸ್ಥಾನ, ಮಾನಗಳಿವೆ ಎಂದು ಜೆಎಸ್‌ಎಸ್ ಕಾಲೇಜಿನ ಪ್ರಾಧ್ಯಾಪಕ ಡಾ. ಜಿನದತ್ತ ಹಡಗಲಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಕನ್ನಡ ನಾಡು-ನುಡಿ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ರಿಶ 450 ಹಲ್ಮಡಿ ಶಾಸನದಿಂದ ಆರಂಭವಾದ ಕನ್ನಡ ಭಾಷೆಯ ರಚನೆ ಅದಕ್ಕಿಂತಲೂ ಪೂರ್ವದಲ್ಲೇ ಇತ್ತು ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ಕ್ರಿಶ 700ರ ಬದಾಮಿ ಶಾಸನ, ಅದೇ ಕಾಲಘಟ್ಟದ ಶ್ರವಣಬೆಳಗೊಳದ ಶಾಸನಗಳಲ್ಲಿ ಕನ್ನಡ ಭಾಷೆ ಬೆಳೆದು ಬಂದಿದ್ದು, ಕ್ರಿಶ. 850 ರ ‘ಕವಿರಾಜಮಾರ್ಗವಂತೂ ಕನ್ನಡ ನಾಡಿನ ಹಿರಿಮೆ, ಗರಿಮೆ, ಕನ್ನಡ ನಾಡಿನ ವಿಸ್ತಾರವನ್ನು ಕುರಿತು ಸ್ಪಷ್ಟವಾದ ಚಿತ್ರಣ ನೀಡುತ್ತದೆ ಎಂದರು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿ, ಕರ್ನಾಟಕ ವಿದ್ಯಾವರ್ಧಕ ಸಂಘ ನವೆಂಬರ್ ತಿಂಗಳು ಪೂರ್ತಿ ವಿವಿಧ ಕಾಲೇಜುಗಳಲ್ಲಿ ಕನ್ನಡ ಜಾಗೃತಿ ಕಾರ್ಯಕ್ರಮ ಆಯೋಜಿಸಲಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಎಲ್ಲರೂ ಕನ್ನಡ ಭಾಷೆ, ನಾಡಿನ ಬಗ್ಗೆ ಅಭಿಮಾನ ಮೂಡಿಸಿಕೊಳ್ಳಬೇಕು ಎಂದು ಹೇಳಿದರು.
ಡಾ. ಡಿ. ಎಂ. ಜವಳಕರ ಅಧ್ಯಕ್ಷತೆ ವಹಿಸಿದ್ದರು. ಬಸವಪ್ರಭು ಹಿರೇಮಠ, ಪ್ರಭುದೇವ ಹಿರೇಮಠ, ಶ್ರೀಧರ ಗಣಾಚಾರಿ, ಸದಾನಂದ ಪಾಟೀಲ, ಈರಣ್ಣ ಬಡಿಗೇರ, ಉಮಾ ಜೋಡಳ್ಳಿ, ನಿಂಗಪ್ಪ ಮಂಡಿ, ವಿದ್ಯಾರ್ಥಿಗಳು, ಇತರರು ಇದ್ದರು.
ಡಿ. ಕೌಶಲ್ಯ ಸ್ವಾಗತಿಸಿದರು. ಸತೀಶ ತುರಮರಿ ಪ್ರಸ್ತಾವಿಕವಾಗಿ ಮಾತನಾಡಿದರು. ಅಡವೀಶ ಇಟಗಿ ನಿರೂಪಿಸಿದರು. ಅಂಬರೀಶ ರೇವತಗಾಂವ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net