

ಕೊಳ್ಳೇಗಾಲ: ಕನ್ನಡ ಅತ್ಯಂತ ಪ್ರಾಚೀನ ಹಾಗೂ ಶ್ರೀಮಂತ ಭಾಷೆಯಾಗಿದೆ ಎಂದು ವಿಸ್ಡಮ್ ಶಾಲೆಯ ಮುಖ್ಯ ಶಿಕ್ಷಕಿ ನಯನಾ ಹೇಳಿದರು.
ಪಟ್ಟಣದ ವಿಸ್ಡಮ್ ಶಾಲೆಯಲ್ಲಿ ಸೋಮವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಭಾಷೆಯ ಇತಿಹಾಸ ಅಮೋಘವಾದದ್ದು. ಬಹಳ ಹಿಂದೆಯೇ, ನಮ್ಮ ಕವಿಗಳು ಹಾಗೂ ಸಾಹಿತಿಗಳು ಕನ್ನಡ ಕಂಪನ್ನು ಹಾಡಿ ಹೊಗಳಿದ್ದಾರೆ. ಕನ್ನಡ ನಾಡು, ನುಡಿ ವೈವಿಧ್ಯಮದಿಂದ ಕೂಡಿದೆ. ಈ ಸುಂದರ ನಾಡಿನಲ್ಲಿ ವಾಸವಿರುವ ನಾವೇ ಧನ್ಯರು. ಮಕ್ಕಳು ಕನ್ನಡಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಬರಹಗಾರ ಪಳನಿಸ್ವಾಮಿ ಮಾತನಾಡಿ, ಕನ್ನಡ ಹಬ್ಬ ಆಚರಿಸುವ ಮೂಲಕ ಕನ್ನಡ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಶ್ರಮಿಸಬೇಕು. ಕನ್ನಡ ಕೂಗು ನವಂಬರ್ ತಿಂಗಳಿಗಷ್ಟೇ ಸೀಮಿತವಾಗದೆ ವರ್ಷಪೂರ್ತಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ್.ನಾಗರಾಜು ಕೊಂಗರಳ್ಳಿ ಮಾತನಾಡಿ, 12ನೇ ಶತಮಾನದ ಶರಣರು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿ ವಿಶೇಷ ಮೆರುಗು ಕೊಟ್ಟರು. ಬಸವಣ್ಣ ಅವರು ಸಾಮಾಜಿಕ ಪಿಡುಗುಗಳ ನಿರ್ಮೂಲನೆಗೆ ವಚನಗಳ ಕ್ರಾಂತಿ ಮಾಡಿದರು. ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿದರು. ಧರ್ಮದ ವ್ಯಾಖ್ಯೆಗಳನ್ನು ಹೊಸದಾಗಿ ಬರೆದು ದೇವನೊಬ್ಬನೇ ಎಂಬ ಸರ್ವಕಾಲಿಕ ಸತ್ಯವನ್ನು ಸಾರಿದರು. ಡಾಂಬಿಕತೆಯನ್ನು ವಿಡಂಬಿಸಿ ವಚನ ಸಾಹಿತ್ಯವನ್ನು ಸೃಷ್ಟಿಸಿದರು ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ನಿರ್ದೇಶಕ ಶಿವಸ್ವಾಮಿ, ಶಿಕ್ಷಕಿ ಚರಿತಾ ಮತ್ತಿತರಿದ್ದರು.