

ದಾಂಡೇಲಿ: ಒಡೆದು ಚೂರಾಗಿದ್ದ ಕನ್ನಡ ರಾಜ್ಯವನ್ನು ಭಾಷಾವಾರು ಪ್ರಾಂತ್ಯಗಳ ರಚನೆ ಆಧಾರದಲ್ಲಿ ಆಡಳಿತಾತ್ಮಕ ಮತ್ತು ಸಾಂಸ್ಕೃತಿಕವಾಗಿ ಒಂದುಗೂಡಿಸಲು ಮಾಡಿದ ಪ್ರಯತ್ನವೇ ಏಕೀಕರಣ ಚಳವಳಿಯಾಗಿದೆ. ಅದೇ ನಿಜವಾದ ಕನ್ನಡದ ಶಕ್ತಿ. ಎಲ್ಲರನ್ನೂ ಒಳಗೊಳ್ಳುವುದು ಹಾಗೂ ಕೂಡಿ ಬಾಳುವುದೇ ಕನ್ನಡದ ನಿಜವಾದ ಹಿರಿಮೆಯಾಗಿದೆ ಎಂದು ಮಹಿಳಾ ಕಾಲೇಜ್ ಪ್ರಾಚಾರ್ಯ ಡಾ.ಎಸ್.ಎಸ್. ಅಂಗಡಿ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾವೇರಿ ಮತ್ತು ಉತ್ತರ ಕನ್ನಡ ಹಾಗೂ ಹಾವೇರಿ ಸಾಹಿತಿ, ಕಲಾವಿದರ ಬಳಗದ ಆಶ್ರಯದಲ್ಲಿ ದಾಂಡೇಲಿ ಬಂಗೂರನಗರ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಸುವರ್ಣ ಸಂಭ್ರಮದ ಹೊಸ ಆಲೋಚನೆಗಳು’ ಎಂಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಾವೇರಿ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಏಕೀಕರಣದ ಚಳವಳಿಯಲ್ಲಿದ್ದ ಮಹನೀಯರನ್ನು ಸ್ಮರಿಸುವ ಕಾರ್ಯವಾಗಿದೆ. ಇಂದಿನ ದಿನದಲ್ಲಿ ಸಾಂಸ್ಕೃತಿಕ ಚಳವಳಿ ಆಗಬೇಕಾದ ಅಗತ್ಯವಿದೆ ಎಂದರು.
ಕರ್ನಾಟಕ ಜನಪದ ವಿಶ್ವವಿದ್ಯಾಲಯದ ವಿಜಯ ಗೇಟಿಯವರು ಹಸೆ ಚಿತ್ತಾರ ಹಾಗೂ ಜನಪದ ಕುರಿತಾಗಿ ಉಪನ್ಯಾಸ ನೀಡಿ ಪ್ರತಿಯೊಬ್ಬರು ಕನ್ನಡ ಬಳಸಬೇಕು. ಬಳಸಿದರೆ ಕನ್ನಡ ತನ್ನಿಂದ ತಾನೇ ಬೆಳೆಯುತ್ತದೆ ಎಂದರು.
ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಸುವರ್ಣ ಕಾರ್ಯಕ್ರಮದ ಭಾಗವಾಗಿ ತಿಂಗಳಿಗೊಂದರಂತೆ ಕಾರ್ಯಕ್ರಮ ಮಾಡಿದ್ದರ ಬಗ್ಗೆ ತಿಳಿಸಿ ಅಂತರ ಜಿಲ್ಲಾ ಕಾರ್ಯಕ್ರಮ ದಾಂಡೇಲಿಯಲ್ಲಿ ನಡೆದಿದ್ದು ಖುಷಿ ತಂದಿದೆ ಎಂದರು.
ಉತ್ತರಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ ಸುವರ್ಣ ಕರ್ನಾಟಕದ ಸಂಭ್ರಮದ ಸಂದರ್ಭದಲ್ಲಿ ಸೌರ್ಹಾದ ಕರ್ನಾಟಕವನ್ನು ಕಟ್ಟಲು ಎಲ್ಲರೂ ಮುಂದಾಗಬೇಕು ಎಂದರು.
ಪ್ರಾರ್ಚಾಯದ ಡಾ. ಬಿ.ಎಲ್. ಗುಂಡೂರ ಅಧ್ಯಕ್ಷತೆ ವಹಿಸಿದ್ದರು. ಹಾವೇರಿ ಕಲಾ ಬಳಗದ ಚಂದ್ರಶೇಖರ ಮಾಳಗಿ, ಪೃಥ್ವಿರಾಜ ಬೆಟಗೇರಿ, ಇತರರಿದ್ದರು. ಕಾಲೇಜಿನ ಸಾಂಸ್ಕೃತಿಕ ವಿಭಾಗದ ಸಂಯೋಜಕ ಎಸ್.ಎಸ್. ಹಿರೇಮಠ, ಕಾಲೇಜ್ ಕನ್ನಡ ಸಂಘದ ಎಸ್.ಎಸ್. ದೊಡ್ಡಮನಿ, ಉಪನ್ಯಾಸಕಿ ಡಾ. ತೃಪ್ತಿ ನಾಯಕ ಹಾಗೂ ಐಕ್ಯೂಎಸಿ ವಿಭಾಗದ ಸಂಯೋಜಕ ಡಾ.ಪಿ.ಎ. ಹೊಸಮನಿ ಸಹಕರಿಸಿದರು. ನಂತರ ಹಾವೇರಿಯ ಕಲಾವಿದ ಶಂಕರ ತಮ್ಮಣ್ಣವರ ಅವರಿಂದ ‘ಸಾಯೋ ಆಟ’ ಏಕ ವ್ಯಕ್ತಿ ನಾಟಕ ಪ್ರದರ್ಶನಗೊಂಡಿತು.