

ಎಚ್.ಡಿ.ಕೋಟೆ: ಕನ್ನಡ ಭಾಷೆಗೆ ತನ್ನದೇ ಇತಿಹಾಸ, ಪರಂಪರೆಯಿಂದ ಶ್ರೀಮಂತವಾಗಿದೆ ಎಂದು ತಹಸೀಲ್ದ್ದಾರ್ ಶ್ರೀನಿವಾಸ ಅಭಿಪ್ರಾಯಪಟ್ಟರು.
ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಮದಲ್ಲಿ ಚೈತನ್ಯ ಭಾರತಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಶನಿವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ಭಾಷೆ 2,500 ವರ್ಷಗಳ ಇತಿಹಾಸ ಹೊಂದಿದ್ದು, ಕೇಂದ್ರ ಸರ್ಕಾರದಿಂದ ಶಾಸ್ತ್ರೀಯ ಸ್ಥಾನಮಾನ ಪಡೆದಿದೆ. ನಾಡಿನಲ್ಲಿ ಅನೇಕ ರಾಜ ಮಹಾರಾಜರು, ಕವಿಗಳು, ಕನ್ನಡ ಭಾಷೆಯ ಬೆಳವಣಿಗೆಗೆ ಕಾರಣರಾಗಿದ್ದಾರೆ. 1956ರಲ್ಲಿ ಕನ್ನಡ ರಾಜ್ಯದ ಸ್ಥಾಪನೆಯಲ್ಲಿ ಹಲವಾರು ಮಹನೀಯರ ತ್ಯಾಗ, ಬಲಿದಾನ ಮತ್ತು ಹೋರಾಟವಿದ್ದು, ಅವರನ್ನು ಇಂತಹ ಸಂದರ್ಭದಲ್ಲಿ ಸ್ಮರಿಸಬೇಕು ಎಂದರು.
ಯುವಜನ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ವಿಶ್ರಾಂತ ನಿರ್ದೇಶಕ ಎಂ.ಎನ್.ನಟರಾಜ್ ಮಾತನಾಡಿ, ಭಾಷೆ ಎನ್ನುವುದು ಮಾನವೀಯ ಸಂಬಂಧಗಳನ್ನು ಬೆಸೆಯುವ ಕೊಂಡಿಯಾಗಿದೆ. ದೇಶದಲ್ಲಿ ಹಲವು ಭಾಷೆಗಳಿದ್ದು, 22 ಭಾಷೆಗಳು ಅಧಿಕೃತ ಮಾನ್ಯತೆ ಪಡೆದಿವೆೆ. ಇದರಲ್ಲಿ ಕನ್ನಡವು ಸೇರಿದೆ. ಹಾಗಾಗಿ ನಮ್ಮ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. 1973ರಲ್ಲಿ ಕಬಿನಿ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ನಮ್ಮ ಹಳೆಯ ಮಗ್ಗೆ ಸೇರಿದಂತೆ 33 ಹಳ್ಳಿಗಳು ಮುಳುಗಡೆಯಾಗಿ ಸ್ಥಳಾಂತರಗೊಂಡಿದ್ದನ್ನು ಸ್ಮರಿಸಿದರು.
ಕಾರ್ಯಕ್ರಮಕ್ಕೂ ಮೊದಲು ಕರ್ನಾಟಕದ ಗಡಿ ಭಾವಲಿಯಲ್ಲಿ ಧ್ವಜಾರೋಹಣ ನೆರವೇರಿಸಿ ಮೆರವಣಿಗೆಯಲ್ಲಿ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ಮಂಗಳವಾದ್ಯ, ಡೊಳ್ಳು ಕುಣಿತ ಮತ್ತು ಶಾಲಾ ಮಕ್ಕಳು ಬೃಹತ್ ಕನ್ನಡ ಬಾವುಟವನ್ನು ಹಿಡಿದು ಪ್ರದರ್ಶಿಸಿದರು. ಇದೇ ಸಂದರ್ಭದಲ್ಲಿ ವಿವಿದ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ರಮಣಿ, ಸದಸ್ಯರಾದ ಪುರುಷೋತ್ತಮ, ರಮೇಶ್, ಪದ್ಮಶ್ರೀ ಪುರಸ್ಕೃತ ಹಾಗೂ ಗಿರಿಜನ ಮುಖಂಡ ಸೋಮಣ್ಣ, ತಾಲೂಕು ಆರೋಗ್ಯಾಧಿಕಾರಿ ಡಾ.ಟಿ.ರವಿಕುಮಾರ್ ಚೈತನ್ಯ ಭಾರತಿ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ನಂದಿನಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕನ್ನಡ ಪ್ರಮೋದ, ಮುಖ್ಯಶಿಕ್ಷಕ ನಾರಾಯಣಸ್ವಾಮಿ, ಮುಖಂಡರಾದ ವೆಂಕಟೇಗೌಡ, ಯಶೋದರ ರಾಜಣ್ಣ, ಪರಿಕ್ಷೀತರಾಜೇ ಅರಸ್, ಸ್ವಾಮಿ, ಬಾಬಣ್ಣ, ಕೆಂಚಯ್ಯ ಹಾಗೂ ಡಿ.ಬಿ.ಕುಪ್ಪೆ ಆಟೋಚಾಲಕರ ಸಂಘದವರು ಭಾಗವಹಿಸಿದ್ದರು.