ಕನ್ನಡಕ್ಕಿದೆ ಬದುಕು ಸನ್ಮಾರ್ಗದಲ್ಲಿ ನಡೆಸುವ ಶಕ್ತಿ

YLP KANANDA
Published on

ಯಲ್ಲಾಪುರ: ಕನ್ನಡ ಕೇವಲ ಭಾಷೆಯಲ್ಲ. ಋಷಿ ಸಮಾನರಾದ ಕನ್ನಡದ ಚಿಂತಕರು, ಸಾಹಿತಿಗಳ ಅನುಭವದ ಸಾರ ಇದರಲ್ಲಿದೆ. ನಮ್ಮ ಬದುಕನ್ನು ಸನ್ಮಾರ್ಗದಲ್ಲಿ ನಡೆಸುವ ಶಕ್ತಿ ಕನ್ನಡಕ್ಕಿದೆ ಎಂದು ಹಿರಿಯ ರಂಗಕರ್ವಿು ರಾಮಕೃಷ್ಣ ಭಟ್ಟ ದುಂಡಿ ಹೇಳಿದರು.

ತಾಲೂಕಿನ ಮಂಚಿಕೇರಿ ಶ್ರೀ ರಾಜರಾಜೇಶ್ವರಿ ಸಭಾಭವನದ ರಾ.ಭ. ಹಾಸಣಗಿ ವೇದಿಕೆಯಲ್ಲಿ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾವಿರಾರು ವರ್ಷಗಳಿಂದ ಕಾಪಾಡಿಕೊಂಡು ಬಂದ ಸಾಂಸ್ಕೃತಿಕ ಬದುಕಿನ ಅವಿಚ್ಛಿನ್ನ ಪರಂಪರೆ ಕಡಿದು ಬೀಳಬಹುದಾದ ಭಯ ನಮ್ಮನ್ನು ಕಾಡುತ್ತಿದೆ. ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆಗಳ ನಡುವಿನ ಸಂಘರ್ಷ ಇದಕ್ಕೆ ಕಾರಣವಾಗಿದೆ. ರಾಷ್ಟ್ರೀಯತೆಯ ಶಕ್ತಿ ಪ್ರಾದೇಶಿಕತೆಯನ್ನು ನುಂಗಿ ಹಾಕುವ ಅಪಾಯವಿದೆ. ಇಂತಹ ಸಂದರ್ಭದಲ್ಲಿ ಜನರ ಬದುಕಿಗೆ ಪ್ರಾದೇಶಿಕತೆಯ ಚಿಕ್ಕ ಸಂಸ್ಥಾನಗಳೇ ದಾರಿದೀಪವಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ವಿಮರ್ಶಕ ಶ್ಯಾಮಸುಂದರ ಬಿದ್ರಕುಂದಿ ಮಾತನಾಡಿ, ಕನ್ನಡದಲ್ಲಿ ಸಾಕಷ್ಟು ಶಬ್ದಗಳಿರುವಾಗ ಅನಗತ್ಯವಾಗಿ ಇಂಗ್ಲಿಷ್ ಶಬ್ದಗಳನ್ನು ತುರುಕಿ ಮಾತನಾಡುವ ಶೋಕಿ ಕಡಿಮೆಯಾಗಬೇಕು ಎಂದರು.

ಹಿರಿಯ ಸಾಹಿತಿ ವನರಾಗ ಶರ್ಮಾ ಅವರ ‘ಮರಳಿ ಮಿನುಗಿತು ಕಾಮನಬಿಲ್ಲು’ ಕಥಾ ಸಂಕಲನ ಲೋಕಾರ್ಪಣೆಗೊಳಿಸಿದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಬೇರೆ ಭಾಷೆ ದ್ವೇಷಿಸುವ ಗುಣ ಕನ್ನಡಿಗರದ್ದಲ್ಲ. ಯಾವ ಬೇಧವಿಲ್ಲದೇ ಬೇರೆ ಭಾಷೆಯವರಿಗೆ ಆಶ್ರಯ ನೀಡಿರುವುದು ಕನ್ನಡಿಗರ ಹೆಗ್ಗಳಿಕೆಯಾಗಿದೆ ಎಂದರು.

ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಟಿ.ವಿ. ಕೋಮಾರ ಅವರು ರಾಮಕೃಷ್ಣ ಭಟ್ಟ ದುಂಡಿ ಅವರಿಗೆ ಧ್ವಜ ಹಸ್ತಾಂತರಿಸಿದರು. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಸಮ್ಮೇಳನ ದ್ವಾರಗಳನ್ನು ಉದ್ಘಾಟಿಸಿದರು. ವಿಮರ್ಶಕ ಆರ್.ಡಿ. ಹೆಗಡೆ ಆಲ್ಮನೆ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ತಹಸೀಲ್ದಾರ್ ಯಲ್ಲಪ್ಪ ಗೊನ್ನೆಣ್ಣವರ, ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಗ್ರಾಪಂ ಅಧ್ಯಕ್ಷೆ ರೇಣುಕಾ ಬೋವಿವಡ್ಡರ, ಪ್ರಸಿದ್ಧ ಗಾಯಕ ಪಂ. ಗಣಪತಿ ಭಟ್ಟ ಹಾಸಣಗಿ, ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಎನ್. ಹೆಗಡೆ ಗೋರ್ಸಗದ್ದೆ, ಪ್ರಮುಖರಾದ ಬೀರಣ್ಣ ನಾಯಕ ಮೊಗಟಾ, ಶ್ರೀರಂಗ ಕಟ್ಟಿ, ವೇಣುಗೋಪಾಲ ಮದ್ಗುಣಿ, ಸುಬ್ರಾಯ ಭಟ್ಟ ಬಕ್ಕಳ, ಎನ್.ಆರ್. ಹೆಗಡೆ, ಗುರುಪ್ರಸಾದ ಭಟ್ಟ, ವಿನೋದಾ ಪೂಜಾರಿ, ಇತರರಿದ್ದರು. ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಕಸಾಪ ಕಾರ್ಯದರ್ಶಿ ಜಿ.ಎನ್. ಭಟ್ಟ ತಟ್ಟಿಗದ್ದೆ ಹಾಗೂ ಶಿಕ್ಷಕ ಚಂದ್ರಹಾಸ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಸಮ್ಮೇಳನದ ಸರ್ವಾಧ್ಯಕ್ಷರ ಮೆರವಣಿಗೆ ನಡೆಯಿತು. ಮಂಚಿಕೇರಿಯ ವಿವಿಧೆಡೆ ಸಾಗಿದ ಮೆರವಣಿಗೆಯಲ್ಲಿ ಕನ್ನಡದ ಘೊಷಣೆಗಳನ್ನು ಕೂಗುತ್ತ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net