ತಮಿಳು ಭಾಷೆಯ ಮೇಲೂ ಕನ್ನಡ ಪ್ರಭಾವ ಬೀರಿದೆ..!

CIIL
Published on

ಮೈಸೂರು: ಕನ್ನಡ ಭಾಷೆಯ ಮೇಲೆ ಬೇರೆ ಭಾಷೆಗಳು ಪ್ರಭಾವ ಬೀರಿದ ರೀತಿಯಲ್ಲಿಯೇ ಕನ್ನಡ ಭಾಷೆಯು ತಮಿಳು ಸೇರಿದಂತೆ ವಿವಿಧ ಭಾಷೆಗಳ ಮೇಲೆ ಪ್ರಭಾವ ಬೀರಿದೆ. ಯಾವುದೇ ಭಾಷೆ ಮತ್ತೊಂದು ಭಾಷೆಯಿಂದ ಪದಗಳನ್ನು ಪಡೆಯುವುದು ಹಾಗೂ ನೀಡುವುದು ಸಹಜ ಪ್ರಕ್ರಿಯೆ ಎಂದು ವಿಮರ್ಶಕ ಪ್ರೊ.ರಾಮೇಗೌಡ (ರಾಗೌ) ಅಭಿಪ್ರಾಯಪಟ್ಟರು.

ನಗರದ ಭಾರತೀಯ ಭಾಷಾ ಸಂಸ್ಥಾನ ಸಭಾಂಗಣದಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಕೇಂದ್ರ ಮಂಗಳವಾರ ಹಮ್ಮಿಕೊಂಡಿದ್ದ 15ನೇ ಶಾಸ್ತ್ರೀಯ ಕನ್ನಡ ಮಾನ್ಯತಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಇಂಗ್ಲಿಷ್ ಭಾಷೆಯಲ್ಲಿ ಇಂಗ್ಲಿಷ್‌ನ ಮೂಲ ಪದಗಳು ಇರುವುದು ಶೇ.18 ರಷ್ಟು ಮಾತ್ರ, ಉಳಿದ ಪದಗಳನ್ನು ಹೀಬ್ರು, ಲ್ಯಾಟಿನ್, ಗ್ರೀಕ್‌ನಿಂದ ಪಡೆದುಕೊಳ್ಳಲಾಗಿದೆ. ಅದೇ ರೀತಿ ಕನ್ನಡ ಭಾಷೆಯು ಸಂಸ್ಕೃತ ಸೇರಿದಂತೆ ವಿವಿಧ ಭಾಷೆಗಳಿಂದ ಪದಗಳನ್ನು ಸ್ವೀಕರಿಸಿವೆ ಎಂದು ಹೇಳಿದರು.

ಮತ್ತೊಂದು ಭಾಷೆಯಿಂದ ಪದಗಳನ್ನು ಸ್ವೀಕರಿಸಿದ ಮಾತ್ರಕ್ಕೆ ಒಂದು ಭಾಷೆ ಕೀಳಾಗುವುದಿಲ್ಲ. ಕನ್ನಡದಿಂದ ಇಂಗ್ಲಿಷ್‌ಗೂ ಪದಗಳು ಹೋಗಿವೆ. ಮತ್ತೊಂದು ಭಾಷೆಯಿಂದ ಪದಗಳನ್ನು ಸ್ವೀಕರಿಸುವುದು ಚರ್ಚೆಯ ವಿಷಯವಲ್ಲ, ಒಂದು ಭಾಷೆ ಯಾವ ಮಟ್ಟದ ಜ್ಞಾನ, ಮೌಲ್ಯ, ಸತ್ವ, ವಿದ್ವತ್ತು ಹೊಂದಿದೆ ಎಂಬುದಷ್ಟೇ ಮುಖ್ಯ ಎಂದರು.

ಕನ್ನಡ ಲಿಪಿ ಮತ್ತು ತೆಲುಗು ಲಿಪಿ ನೋಡಲು ಒಂದೇ ರೀತಿ ಇದ್ದರೂ ಕನ್ನಡ ಮತ್ತು ತಮಿಳು ನಿಕಟವಾದ ಭಾಷೆಗಳಾಗಿವೆ. ತಮಿಳು ಹಾಗೂ ಕನ್ನಡ ಭಾಷೆಯ ಪ್ರಾಚೀನತೆಯಲ್ಲಿ ದೊಡ್ಡ ವ್ಯತ್ಯಾಸವೇನು ಇಲ್ಲ, ಕೆಲವು ವರ್ಷ ಹಿಂದೆ ಮುಂದೆ ಇರಬಹುದು ಅಷ್ಟೆ. ತಮಿಳು ಭಾಷೆಯ ಮೇಲೂ ಕನ್ನಡ ಪ್ರಭಾವ ಬೀರಿದೆ ಎಂಬುದನ್ನು ತಮಿಳು ವಿದ್ವಾಂಸರಾದ ಇರಾವತಿ ಮಹದೇವನ್ ಮತ್ತು ಪಿ.ಎಸ್. ಸುಬ್ರಹ್ಮಣ್ಯನ್ ಅವರು ಅಧ್ಯಯನ ಮೂಲಕ ಬಹಿಂಗ ಪಡಿಸಿದ್ದಾರೆ ಎಂದು ಹೇಳಿದರು.

ವೇದಿಕೆಯಲ್ಲಿ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಶೈಲೇಂದ್ರ ಮೋಹನ್, ಲೇಖಕಿ ಪ್ರೊ.ಸಂಧ್ಯಾ ರೆಡ್ಡಿ, ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಎನ್.ಎಂ.ತಳವಾರ, ಸಂಯೋಜಕ ಎಲ್.ಆರ್.ಪ್ರೇಮ್ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net