ಕನ್ನಡವನ್ನು ಪ್ರೀತಿಸಿದಾ ಮಾತ್ರ ಕನ್ನಡ ಬೆಳೆಯುತ್ತದೆ; ಪ್ರೇಮ ಕುಮಾರಿ

28adarshkdga1
Published on

ಮಡಿಕೇರಿ: ಕನ್ನಡವು ನಮ್ಮ ಮೆಚ್ಚಿನ ಭಾಷೆ. ಕನ್ನಡವನ್ನು ಪ್ರೀತಿಸಬೇಕು ಆಗ ಮಾತ್ರ ಕನ್ನಡ ಬೆಳೆಯುತ್ತದೆ ಎಂದು ಸಿದ್ದಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಪ್ರೇಮ ಕುಮಾರಿ ಅಭಿಪ್ರಾಯಿಸಿದರು.


ಸಿದ್ದಾಪುರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಕನ್ನಡವು ಜ್ಯೋತಿ ಬೆಳಗಿದಂತೆ. ಅದರ ಪ್ರಕಾಶ ಎಲ್ಲೆಡೆ ಪಸರಿಸಲಿ ಎಂದ ಅವರು, ಕನ್ನಡವು ನಮ್ಮ ಮೆಚ್ಚಿನ ಭಾಷೆ. ಕನ್ನಡವನ್ನು ಪ್ರೀತಿಸಬೇಕು ಆಗ ಮಾತ್ರ ಕನ್ನಡ ಬೆಳೆಯುತ್ತದೆ. ಕುವೆಂಪು ಅವರ ನುಡಿಯಂತೆ ಕನ್ನಡ ಭಾಷೆಯು ತಾಯಿ ಹಾಲು ಕುಡಿದಂತೆ, ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು. ಕನ್ನಡಕ್ಕಾಗಿ ಕೊರಳೆತ್ತು. ನಿನ್ನ ಕೊರಳು ಪಾಂಚ ಜನ್ಮವಾಗುವುದು ಎಂದು ತಿಳಿಸಿದರು.


ಜಿಲ್ಲಾ ಸ್ಕೌಟ್ಸ್ ಆಯುಕ್ತ ಜಿಮ್ಮಿ ಸಿಕ್ವೇರಾ ಮಾತನಾಡಿ, ಕೊಡಗು ಕೊಡವರ ಆಚಾರ, ವಿಚಾರ, ವೇಷ, ಭೂಷಣಗಳನ್ನು ಪ್ರತಿಬಿಂಬಿಸುತ್ತದೆ. ಕೊಡಗಿನ ಯೋಧರು ದೇಶ ಕಾಯುವವರು. ಅವರಲ್ಲಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ೧೯೧೮ರಲ್ಲಿ ಸೇನೆಗೆ ಸೇರಿ ಉನ್ನತ ಅಧಿಕಾರಿಯಾಗಿ ಸಹಾಯ ಮತ್ತು ಪ್ರೀತಿ ಸಹನೆ ಮೂಲಕ ಯುದ್ಧ ಗೆದ್ದರು. ಸಮಯ ಪಾಲನೆ, ಸ್ವಚ್ಛತೆ ಅವರ ಗುಣಗಳಲ್ಲಿ ಒಂದು. ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡವರು. ೧೯೪೮ ಜನವರಿ ೮ ರಂದು ನಮ್ಮ ದೇಶದ ಮೂರು ದಳದ ದಂಡನಾಯಕರಾದರು. ೧೯೮೬ರಲ್ಲಿ ಫೀಲ್ಡ್ ಮಾರ್ಷಲ್ ಪದವಿ ನೀಡಲಾಯಿತು ಎಂದರು.


ಕಸಾಪ ಕೋಶಾಧಿಕಾರಿ ಶಬರೀಶ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಸಂಯಮ, ಸಮಯ ಪಾಲನೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಯಾಗುವ ಮೂಲಕ ದೇಶಕ್ಕೆ ಹಾಗೂ ತಂದೆ ತಾಯಿಗೆ ಕೀರ್ತಿ ತರಬೇಕೆಂದು ಸಲಹೆ ನೀಡಿದರು.


ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಂಜುನಾಥ್, ಶಾಲೆಯ ಸಹ ಶಿಕ್ಷಕ್ಷಿ ಸಿ.ಸಿ.ಕೋಮಲ, ವಿರಾಜಪೇಟೆ ಕಸಪಾ ಗೌರವ ಕಾರ್ಯದರ್ಶಿ ಟಾಮಿ ಥೋಮಸ್, ಶಿಕ್ಷಕಿ ನಿರ್ಮಾಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net