

ಅರಕಲಗೂಡು: ಜಗತ್ತಿನ ಪ್ರಾಚೀನ ಭಾಷೆ ಕನ್ನಡ ಸಾಹಿತಿಗಳಿಂದ ಬೆಳವಣಿಗೆ ಕಂಡಿದೆ ಎಂದು ಹಿರಿಯ ಸಾಹಿತಿ, ಸಂಶೋಧಕ ಡಾ.ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟರು.
ವಿದ್ವಾನ್ ಡಾ.ಆರ್.ಕೆ.ಪದ್ಮನಾಭ ಅಭಿಮಾನಿಗಳ ಬಳಗದ ಸಹಯೋಗದಲ್ಲಿ ಪಟ್ಟಣದ ಶಿಕ್ಷಕರ ಭವನದಲ್ಲಿ ಆಯೋಜಿಸಿದ್ದ ಕನ್ನಡದ ಸಾಹಿತ್ಯ ಸಾರ್ವಭೌಮ ಡಾ.ಅನಕೃ ಒಂದು ನೆನಪು, 2025ರ ಅನಕೃ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಅನಕೃ ಭಾಷಣವನ್ನು ಎಲ್ಲರೂ ಕುಳಿತು ಕೇಳುತ್ತಿದ್ದರು ಎಂದರು.
ನಾನು ವೃದ್ಧಾಪ್ಯಕ್ಕೆ ಬಂದಿದ್ದರೂ ಚನ್ನಾಗಿ ಓಡಾಡಿಕೊಂಡು ಇರಲು ನಿಮ್ಮೆಲ್ಲರ ಆಶೀರ್ವಾದ ಕಾರಣ. ಅನಕೃ ಅವರು ಭಿತ್ತಿದ ಕಾಳು ಮೊಳಕೆಯೊಡೆದು ಚಿಗುರಿ, ರೆಂಬೆ ಕೊಂಬೆಗಳಾಗಿ ರಾಜ್ಯದ ಉದ್ದಗಲಕ್ಕೂ ಪಸರಿಸಿವೆ. ಅವರು ಇದ್ದ ಕಾಲದಲ್ಲಿ ಅವರಿಗೆ ಸಲ್ಲಬೇಕಾದ ಗೌರವ ಸಲ್ಲಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಸ್ತುತ ಕನ್ನಡ ಭಾಷೆ ಉನ್ನತ ಸ್ಥಿತಿಯಲ್ಲಿ ವಿಜೃಂಭಿಸುತ್ತಿದೆ ಎಂದರೆ ಅದರ ದೊಡ್ಡ ಶ್ರೇಯಸ್ಸು ಅನಕೃ ಅವರಿಗೆ ಸಲ್ಲುತ್ತದೆ. ಅನಕೃ ಮತ್ತು ತಾರಾಸು ಕನ್ನಡ ಸಾಹಿತ್ಯಕ್ಕೆ ಒಂದು ಹೊಸ ತಿರುವು ನೀಡಿದರು ಎಂದು ಹೇಳಿದರು.
ಶಾಸಕ ಎ. ಮಂಜು, ಗಾನಕಲಾ ಭೂಷಣ ವಿದ್ವಾನ ಡಾ.ಆರ್.ಕೆ.ಪದ್ಮನಾಭ ಮಾತನಾಡಿದರು. ಬೆಂಗಳೂರು ಬಿಎಂಶ್ರೀ ಪ್ರತಿಷ್ಠಾನ ಅಧ್ಯಕ್ಷ ಡಾ.ಭೈರಮಂಗಲ ರಾಮೇಗೌಡ, ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶ್‌ಗೌಡ, ತಹಸೀಲ್ದಾರ್ ಸೌಮಾ ಇತರರಿದ್ದರು. ಇದಕ್ಕೂ ಮುನ್ನ ಕೋಟೆಕೊತ್ತಲು ಅವರಣದಿಂದ ಆರಂಭವಾದ ಮೆರವಣಿಗೆ ಅನಕೃ ವೃತ್ತದ ಮೂಲಕ ಶಿಕ್ಷಕರ ಭವನ ತಲುಪಿತು.