

ಬೆಂಗಳೂರು: ಜಾನಪದ ಕಲೆ, ಸಾಹಿತ್ಯ ಕ್ಷೀಣಿಸುತ್ತಿದ್ದ ಕಾಲದಲ್ಲಿ ಅದರ ಉಳಿವಿಗಾಗಿ ಶ್ರಮಿಸಿದ ಡಾ. ಎಸ್.ಕೆ. ಕರೀಂಖಾನ್ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ, ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿಗೆ ದುಡಿದವರಿಗೆ ಆ ಪ್ರಶಸ್ತಿ ನೀಡಬೇಕು ಎಂದು ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕನ್ನಡ ಗೆಳೆಯರ ಬಳಗ ಹಾಗೂ ಕರ್ನಾಟಕ ವಿಕಾಸ ರಂಗ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಲ್ಲ ಸಾಹಿತ್ಯಕ್ಕೆ ಮೂಲ ಬೇರು ಜನಪದ ಸಾಹಿತ್ಯ. ಊರೂರು ಸುತ್ತಿ ಜನಪದ ಕಲೆಗಳ ಸಂಗ್ರಹ ಮಾಡಿ, ಜನಪದ ಸಾಹಿತ್ಯ ರಚನೆ, ಗೀತೆ ರಚನೆ, ಜಾನಪದ ಕಲೆ ರಕ್ಷಣೆ ಮಾಡಿರುವ ಡಾ.ಎಸ್.ಕೆ. ಕರೀಂಖಾನ್ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸುವಂತೆ ಒತ್ತಾಯಿಸಲು, ಸಾಹಿತಿಗಳ ನಿಯೋಗವೊಂದನ್ನು ಮುಖ್ಯಮಂತ್ರಿಗಳ ಬಳಿ ಕರೆದೊಯ್ಯಬೇಕಿದೆ ಎಂದರು.
ಲೇಖಕ ರಾ.ನಂ. ಚಂದ್ರಶೇಖರ ಮಾತನಾಡಿ, ಡಾ.ಎಸ್.ಕೆ. ಕರೀಂಖಾನ್ ಸ್ವಾತಂತ್ರ್ಯ ಹೋರಾಟ ಹಾಗೂ ಏಕೀಕರಣ ಚಳವಳಿಯಲ್ಲಿ ಅಪಾರ ಕೆಲಸ ಮಾಡಿದ್ದಾರೆ. ಅಗಾಧವಾದ ಪ್ರತಿಭೆಯಿದ್ದರೂ ಅವರಿಗೆ ಸಿಗಬೇಕಾದ ಗೌರವ, ಸ್ಥಾನಮಾನಗಳು ಸಿಗಲಿಲ್ಲ. ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ಸುಮಾರು 8 ಸಾವಿರ ಕಿ.ಮೀ. ಸುತ್ತಿ ಜಾನಪದ ಪ್ರದರ್ಶನ ಕಲೆಗಳ ಕುರಿತಾದ 240 ಗಂಟೆಗಳ ಅವಧಿಯ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದು ಸ್ಮರಿಸಿದರು.
ಕರ್ನಾಟಕ ವಿಕಾಸರಂಗದ ಅಧ್ಯಕ್ಷ ವ.ಚ. ಚನ್ನೇಗೌಡ, ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಡಾ. ಮನು ಬಳಿಗಾರ್, ಕರೀಂಖಾನ್ ಕುಟುಂಬಸ್ಥರು ಇತರರು ಇದ್ದರು.