ದ.ರಾ.ಬೇಂದ್ರೆಯವರ ಜೀವನವೇ ಕಾವ್ಯ

Kannada Gana Payan program at home
Kannada Gana Payan program at home
Published on

ಕನ್ನಡದ ಗಾನ ಪಯಣ ಕಾರ್ಯಕ್ರಮದಲ್ಲಿ ವರಕವಿ ನೆನಪು

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ವರಕವಿ ದ.ರಾ.ಬೇಂದ್ರೆಯವರ ಕಾವ್ಯ ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಿ.ಶ್ರೀಕಾಂತ್ ಹೇಳಿದರು.
ನಗರದ ನಿಸರ್ಗ ಯೋಗ ಕೇಂದ್ರದಲ್ಲಿ ತಾಲೂಕು ಕಸಾಪ ಮತ್ತು ಸಂಸ್ಕೃತಿ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮನೆಯಂಗಳದಲ್ಲಿ ಕನ್ನಡದ ಗಾನ ಪಯಣ ಕಾರ್ಯಕ್ರಮದಲ್ಲಿ ವರಕವಿ ದ.ರಾ.ಬೇಂದ್ರೆ ಅವರ ಕಾವ್ಯದ ಕುರಿತು ಮಾತನಾಡಿದರು.
ಬೇಂದ್ರೆಯವರು ಜೀವನದುದ್ದಕ್ಕೂ ದುಃಖ, ನೋವು, ಕಷ್ಟಗಳನ್ನೇ ನೋಡಿದ ಕವಿ. ಬೇಂದ್ರೆಯವರ ಜೀವನವೇ ಕಾವ್ಯ. ತಮ್ಮ ಕೃತಿಗಳಲ್ಲಿ ವೈವಿಧ್ಯಮಯ ವಿಚಾರಗಳನ್ನು ನವೋದಯ ಸಾಹಿತ್ಯದ ಸಂದರ್ಭದಲ್ಲಿ ಅಭಿವ್ಯಕ್ತಿಗೊಳಿಸಿದರು. ಶಬ್ದಗಾರುಡಿಗರಾಗಿದ್ದ ಅವರು ಜಾನಪದ ಸಾಹಿತ್ಯ ಆಡುಭಾಷೆಯ ನುಡಿಗಟ್ಟುಗಳು ತಮ್ಮ ಕವನಗಳಲ್ಲಿ ಬಳಸಿದ್ದಾರೆ ಎಂದರು.
ವಿದ್ಯಾನಿಧಿ ಪಿಯು ಕಾಲೇಜಿನ ಕನ್ನಡ ಉಪನ್ಯಾಸಕ ಗಿರೀಶ್.ಎನ್.ಬರಗೂರು ಮಾತನಾಡಿ, ಬೇಂದ್ರೆಯವರ ಕವನಗಳ ವಿಚಾರಗಳೇ ವೈವಿಧ್ಯಮಯವಾಗಿದೆ. ನರಬಲಿ ಕವನ ಬರೆದು ಸೆರೆಮನೆ ವಾಸ ಅನುಭವಿಸಿದ ಬೇಂದ್ರೆಯವರು, ಕರ್ನಾಟಕ ಏಕೀಕರಣಕ್ಕೆ ಬೆಂಬಲಿಸಿದರು. ಕಾವ್ಯಗಳ ಭಾಷೆ ಮತ್ತು ಭಾವನೆಗಳು ಜನಸಾಮಾನ್ಯರು ಸಾಹಿತ್ಯದಲ್ಲಿ ಅಭಿರುಚಿ ಹೊಂದಲು ಸಹಕಾರಿ ಆಗಿವೆ ಎಂದರು.
ಕಲಾವಿದರಾದ ಕೆ.ಪಿ.ಪ್ರಕಾಶ್, ನಾಗರತ್ನಾ, ಮಹಾಬಲೇಶ್ವರ್, ಚಂದ್ರಶೇಖರ್, ಸುರೇಖಾ ರವಿರಾಜ್, ನಾಗರತ್ನಮ್ಮ, ಎಂ.ಎಲ್.ಆಶಾ, ಜಯಲಕ್ಷ್ಮೀ ನಟರಾಜು, ಎಂ.ಪಿ.ಸಿ.ವೆಂಕಟೇಶ್, ನಾಗರಾಜು, ಜಿ.ಸುರೇಶ್, ಷಫೀರ್, ನಾಗದಳ ನಟರಾಜ್ ಮುಂತಾದವರು ಹಾಡಿದರು.
ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ, ಭಾರತ ಸೇವಾದಳ ತಾಲೂಕು ಅಧ್ಯಕ್ಷ ನಂಜುಂಡೆಗೌಡ, ಕಾರ್ಯದರ್ಶಿ ಹಮಾಮ್ ವೆಂಕಟೇಶ್, ವಿಜ್ಞಾನ ಸಾಹಿತಿ ಡಾ.ಎ.ಒ.ಆವಲ ಮೂರ್ತಿ, ನಿವೃತ್ತ ಪ್ರಾಂಶುಪಾಲ ಮೇಜರ್ ಎಸ್.ಮಹಾಬಲೇಶ್ವರ್, ಕಸಾಪ ತಾಲೂಕು ಅಧ್ಯಕ್ಷ ಪಿ.ಗೋವಿಂದರಾಜು, ಕೋಶಾಧ್ಯಕ್ಷ ಸಾ.ಲ.ಕಮಲನಾಥ, ಸಾಸಲು ಹೋಬಳಿ ಅಧ್ಯಕ್ಷ ಜಿ.ಎಂ.ನಾಗರಾಜು, ಪ್ರತಿನಿಧಿ ಮುನಿರಾಜು, ಸಂಸ್ಕೃತಿ ಟ್ರಸ್ಟ್ ಅಧ್ಯಕ್ಷ ಎಚ್.ಎಸ್.ನಾಗೇಶ್, ಕಾರ್ಯದರ್ಶಿ ಸಂಪತ್ ಕುಮಾರ್, ನಿಸರ್ಗ ಯೋಗ ಕೇಂದ್ರದ ವಿದ್ಯಾರ್ಥಿಗಳು ಮತ್ತು ಪೋಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net