ಕನ್ನಡ ಉಳಿವಿಗೆ ಸಾಹಿತಿಗಳ ಕೊಡುಗೆ ಅನನ್ಯ

5Anand5
ಪ್ರಾ.ಬಿ.ಎಸ್.ಗವಿಮಠರ ಕೂಡಲಸಂಗಮ ಹಾಗೂ ಬೆಳಗಾವಿ ಸಾವಿರದ ನೆನಪುಗಳು ಕೃತಿಗಳ ಲೋರ್ಕಾಪಣೆ ಹಾಗೂ ಅಭಿನಂದನೆ ಸಮಾರಂಭದಲ್ಲಿ ಬಿ.ಎಸ್.ಗವಿಮಠ ಹಾಗೂ ಡಾ.ಸರಜೂ ಕಾಟ್ಕರ ಅವರನ್ನು ಗಣ್ಯರು ಸನ್ಮಾನಿಸಿದರು. ಡಾ.ಎಫ್.ವಿ.ಮಾನ್ವಿ, ಪ್ರೊ.ಎಂ.ಎಸ್.ಇಂಚಲ, ಪ್ರೊ.ಎಲ್.ವಿ.ಪಾಟೀಲ ಇತರರಿದ್ದರು.
Published on

ಬೆಳಗಾವಿ: ಒಂದು ಕಾಲಘಟ್ಟದಲ್ಲಿ ಬೆಳಗಾವಿಯಲ್ಲಿ ಕನ್ನಡ ಉಳಿಸುವುದು ಕಷ್ಟಕರವಾಗಿತ್ತು. ಈ ಸಮಯದಲ್ಲಿ ಅನೇಕ ಸಾಹಿತಿಗಳು, ಹೋರಾಟಗಾರರು ಅವಿರತವಾಗಿ ಕನ್ನಡ ಉಳಿಸುವ ಕೆಲಸ ಮಾಡಿದ್ದಾರೆ. ಕಳೆದ 50 ವರ್ಷಗಳಿಂದ ಗವಿಮಠರು ಹಾಗೂ ನಾಲ್ಕು ದಶಕಗಳಿಂದ ಡಾ.ಸರಜೂ ಕಾಟ್ಕರ ಕನ್ನಡದ ಧ್ವನಿಯಾಗಿ ಸಾಹಿತ್ಯ ಸೇವೆ ಮುಂದುವರೆಸಿದ್ದಾರೆ ಎಂದು ಖ್ಯಾತ ವೈದ್ಯ ಡಾ.ಎಚ್.ಬಿ.ರಾಜಶೇಖರ ಹೇಳಿದರು.

ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಸಾಹಿತ್ಯ ಭವನದ ವಿಶ್ವಸ್ಥ ಮಂಡಳಿ, ಜಿಲ್ಲಾ ಲೇಖಕಿಯರ ಸಂಘ, ಕವಿ ಎಸ್.ಡಿ.ಇಂಚಲ ಹಾಗೂ ಉಳವೀಶ ಹುಲೆಪ್ಪನವರಮಠ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಬಿ.ಎಸ್.ಗವಿಮಠರ ಎರಡು ಕೃತಿಗಳಾದ ‘ಕೂಡಲಸಂಗಮ’ ಹಾಗೂ ’ಬೆಳಗಾವಿ ಸಾವಿರದ ನೆನಪುಗಳು’ ಕೃತಿಗಳ ಲೋರ್ಕಾಪಣೆ ಹಾಗೂ ಅಭಿನಂದನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂದು ಕನ್ನಡದ ಸ್ಥಿತಿ ಮೊದಲಿನಂತಿಲ್ಲ. ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ಗಡಿಭಾಗದಲ್ಲಿ ನಡೆಯಲಿ. ಸರ್ಕಾರವು ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ರಾಜ್ಯಮಟ್ಟದ ಪ್ರಶಸ್ತಿಗಳನ್ನು ನೀಡುವಾಗ ಮಲತಾಯಿ ಧೋರಣೆ ಮಾಡದೆ ಇರಲಿ ಎಂದು ಒತ್ತಾಯಿಸಿದರು.

ಮುಖ್ಯಅತಿಥಿಯಾಗಿ ಆಗಮಿಸಿದ್ದ ಹಿರಿಯ ವಕೀಲ ಎಸ್.ಎಂ.ಕುಲಕರ್ಣಿ ಮಾತನಾಡಿ, ಗವಿಮಠರು ರಂಗಭೂಮಿ ಅನೇಕ ಕಲಾವಿದರನ್ನು ಗುರುತಿಸಿ ಬೆಳಕಿಗೆ ತಂದವರು. ಕೆಎಲ್‌ಇ ಇತಿಹಾಸಕಾರರಾಗಿ ಹಾಗೂ ರಂಗಭೂಮಿ ಧ್ವನಿಯಾಗಿ ಕನ್ನಡ ಪೋಷಿಸಿ ಬೆಳೆಸಿದವರು ಹಾಗೂ ಸರಜೂ ಬರವಣಿಗೆಗಳು ಸೃಜನಾತ್ಮಕವಾದಂತಹವುಗಳು. ಒಬ್ಬ ದಕ್ಷ ಪತ್ರಿಕೋದ್ಯಮಿಯಾಗಿ ಸಾಹಿತ್ಯವನ್ನು ಧ್ವನಿಪೂರ್ಣವಾಗಿ ಕಟ್ಟಿಕೊಟ್ಟವರು ಸರಜೂ ಕಾಟ್ಕರ್. ಒಬ್ಬ ಧೀಮಂತ ಬರಹಗಾರನಾಗಿ ಗಡಿಭಾಗದಲ್ಲಿ ಕನ್ನಡ ಪೋಷಿಸುವ ಕೆಲಸ ಮಾಡುತ್ತಿರುವುದು ಅಭಿಮಾನದ ಸಂಗತಿ ಎಂದರು.

ಬಿ.ಎಸ್.ಗವಿಮಠ ಕೂಡಲಸಂಗಮ ಕೃತಿಯನ್ನು ಡಾ.ಗುರುದೇವಿ ಹುಲೆಪ್ಪನವರಮಠ ಹಾಗೂ ‘ಬೆಳಗಾವಿ ಸಾವಿರದ ನೆನಪು’ ಕೃತಿಯನ್ನು ಎ.ಎ.ಸನದಿ ಪರಿಚಯಿಸಿದರು. ಸಾಹಿತಿ ಡಾ.ರಾಮಕೃಷ್ಣ ಮರಾಠೆ, ಶಿರೀಷ ಜೋಶಿ, ಅಶೋಕ ಚಂದರಗಿ ಸಾಧಕರ ಕುರಿತು ಅಭಿನಂದನ ಪರ ಮಾತನಾಡಿದರು. ಗಡಿನಾಡು ಚೇತನ ಪ್ರಶಸ್ತಿ ಪುರಸ್ಕೃತ ಪ್ರಾ.ಬಿ.ಎಸ್.ಗವಿಮಠ ಹಾಗೂ ಪತ್ರಿಕೋದ್ಯಮದ ಟಿ.ಎಸ್.ಆರ್. ಪ್ರಶಸ್ತಿ ಪುರಸ್ಕೃತ ಡಾ.ಸರಜೂ ಕಾಟ್ಕರ್ ಅವರನ್ನು ಸತ್ಕರಿಸಲಾಯಿತು.

ಡಾ.ಎಫ್.ವಿ.ಮಾನ್ವಿ, ಪ್ರೊ.ಎಂ.ಎಸ್.ಇಂಚಲ, ಪ್ರೊ.ಎಲ್.ವಿ.ಪಾಟೀಲ, ಅಕ್ಬರ ಸನದಿ, ಜ್ಯೋತಿ ಬಾದಾಮಿ, ಬಸವರಾಜ ಗಾರ್ಗಿ, ಸುಮಾ ಕಿತ್ತೂರ, ಪ್ರೇಮಾ ತಹಸೀಲ್ದಾರ್, ಜಯಶೀಲಾ ಬ್ಯಾಕೋಡ, ರಾಮಚಂದ್ರ ಕಟ್ಟಿ ಇತರರಿದ್ದರು. ಡಾ.ಮಹೇಶ ಗುರನಗೌಡರ, ಆಶಾ ಯಮಕನಮರಡಿ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net