

ಕಳಸ: ಕನ್ನಡ ಜಾನಪದ ಪರಿಷತ್ ಕಳಸ ತಾಲೂಕು ಘಟಕದಿಂದ ಕುದುರೆಮುಖದ ಪ್ರಾಣಿ ಪ್ರಿಯ ರೂಬನ್ ಅವರಿಗೆ ಆಹಾರ ಸಾಮಾಗ್ರಿ ಹಾಗೂ ಆರ್ಥಿಕ ನೆರವು ನೀಡಲಾಯಿತು.
ಕುದುರೆಮುಖದಲ್ಲಿ ಹಲವಾರು ವರ್ಷಗಳಿಂದ ಬೆಕ್ಕು, ನಾಯಿ, ಮಂಗ ಹಾಗೂ ಇನ್ನಿತ ಕಾಡು ಪ್ರಾಣಿಗಳಿಗೆ ಆಹಾರ ನೀಡಿ ಮಕ್ಕಳಂತೆ ಸಾಕುತ್ತಿದ್ದರು. ಇವರು ಇರವ ಮನೆಯಲ್ಲಿ ಯಾವುದೇ ಬೆಳಕಿನ ವ್ಯವಸ್ಥೆಗಳಿಲ್ಲದೆ ಜೀವನ ಸಾಗಿಸುತ್ತಿದ್ದರು. ಮಳೆಗಾಲದಲ್ಲಿ ಸರಿಯಾದ ದುಡಿಮೆ ಇಲ್ಲದೆ ಜೀವನ ಸಾಗಿಸುವುದೇ ಕಷ್ಟದ ಕೆಲಸವಾಗಿತ್ತು. ಇದನ್ನು ಮನಗಂಡು ಕನ್ನಡ ಜಾನಪದ ಪರಿಷತ್ ಕಳಸ ತಾಲೂಕು ಘಟಕದ ಸದಸ್ಯರು ನೆರವಿನ ಹಸ್ತ ನೀಡಿದ್ದಾರೆ.
ಪರಿಷತ್ ಅಧ್ಯಕ್ಷ ಅಜಿತ್ ಪ್ರಸಾದ್ ಮಾತನಾಡಿ,ಕನ್ನಡ ಜಾನಪದ ಪರಿಷತ್ ಕಳಸ ತಾಲೂಕು ಘಟಕದಿಂದ ನಮ್ಮ ನಡೆ ಜಾನಪದ ಕಲಾವಿದರ ಮನೆ ಕಡೆ ಎಂಬ ವಿನೂತನ ಕಾರ್ಯಕ್ರಮ ಮಾಡಿ ಜಾನಪದ ಕಲಾವಿದರ ಮನೆಗೆ ಹೋಗಿ ಕಲಾವಿದರನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡುತ್ತಿದ್ದೇವೆ.ಆದರೆ ಈ ಬಾರಿ ಸ್ವಲ್ಪ ಬದಲಾವಣೆ ಮಾಡಿ ಮೂಕ ಪ್ರಾಣಿಗಳನ್ನು ಸಾಕುತ್ತಿರುವ ವ್ಯಕ್ತಿಯನ್ನು ಗುರುತಿಸಿ ಆವರನ್ನು ಗೌರವಿಸಿ ಆರ್ಥಿಕ ಸಹಾಯ ನೀಡಿ ಅವರ ಕಷ್ಟದ ಜೀವನದಲ್ಲಿ ಭಾಗಿಯಾಗುವ ಸಣ್ಣ ಕೆಲಸ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ವ ಧರ್ಮಗಳಲ್ಲಿ ಜಾನಪದ ಕಲೆ ಎಂಬ ವಿನೂತನ ಕಾರ್ಯಕ್ರಮವನ್ನು ಸೆಪ್ಟೆಂಬರ್‌ನಲ್ಲಿ ಮಾಡಲಾಗುವುದು ಎಂದು ತಿಳಿಸಿದರು.
ಪರಿಷತ್ ಜಿಲ್ಲಾ ಉಪಾಧ್ಯಕ್ಷೆ ಸುಜಯ ಸದಾನಂದ ಮಾತನಾಡಿ, ಜಾನಪದದ ಸೊಗಡನ್ನು ಆಹಾರದಲ್ಲೂ ಕಾಣಬಹುದು, ಆಷಾಡ ಮಾಸದಲ್ಲಿ ತಯಾರಿಸುವ ಕೆಸುವಿನ ಸೊಪ್ಪಿನ ಪತ್ರೊಡೆ, ಚಟ್ನಿ, ಕಳಲೆ ಪಲ್ಯ,ಹಲಸಿನ ಹಪ್ಪಳ ಇದು ಆರೋಗ್ಯದ ದೃಷ್ಠಿಯಲ್ಲೂ ಉತ್ತಮವಾದ ಆಹಾರವಾಗಿದೆ. ರೂಬನ್‌ಎಂಬ ಅಪರೂಪದ ಪ್ರಾಣಿ ಪ್ರಿಯರನ್ನು ಗುರುತಿಸಿ ಅವರಿಗೆ ನೆರವು ನೀಡಿ ಆಷಾಡ ಮಾಸದ ಖಾದ್ಯಗಳನ್ನು ತಯಾರಿಸಿ ಅವರ ಜತೆ ಊಟ ಸವಿಯುವ ಕಾರ್ಯಕ್ರಮ ನಿಜಕ್ಕೂ ಅದ್ಬುತವಾಗಿದೆ ಎಂದು ಹೇಳಿದರು.
ಕಸಾಪ ತಾಲೂಕು ಅಧ್ಯಕ್ಷ ಅ.ರಾ.ಸತೀಶ್ಚಂದ್ರ ಮಾತನಾಡಿ, ಜಾನಪದದ ಸೊಗಡನ್ನು ಗ್ರಾಮೀಣ ಪ್ರದೇಶದ ಮನೆ ಮನೆಗೆ ತಲುಪಿಸುತ್ತಿರುವುದು ಸಂತಸದ ವಿಚಾರ. ಮುಂದಿನ ದಿನಗಳಲ್ಲಿ ಕಸಾಪ ಕಳಸ ತಾಲೂಕು ಘಟಕದಿಂದ ನಡೆಯುವ ತಾಲೂಕು ಮತ್ತು ಹೋಬಳಿ ಸಮ್ಮೇಳನದಲ್ಲಿ ಕಜಾಪದ ಸದಸ್ಯರು ಹೆಚ್ಚಿನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಪರಿಷತ್ ಸದಸ್ಯರಾದ ಮನೋರಾನಿ,ಶಾಂತಮ್ಮ, ವಿನಾಯಕ, ವಿಜಯ್, ವೈ.ಪ್ರೇಮ್ ಕುಮಾರ್, ಕಲ್ಪನಾ ಅಜಿತ್, ಭರತ್, ಅಂಕಿತಾ ಅರೂಷ್, ತೇಜಸ್‌ಜೈನ್, ಅಮಿತಾ, ಮಹೇಶ್, ಶಾಲಿನಿ, ಮಂಜುಳಾ, ರಾಧಿಕಾ ಇತರರು ಇದ್ದರು.