ಅಮೇರಿಕಾದಲ್ಲಿ ಕನ್ನಡ ಕಂಪು

Oplus_131072
Oplus_131072
Published on

ಯಳಂದೂರು : ದೂರದ ಅಮೇರಿಕಾದಲ್ಲಿ ಪ್ರತಿ ನವೆಂಬರ್ ತಿಂಗಳಲ್ಲೂ ಕನ್ನಡ ರಾಜ್ಯೋತ್ಸವವನ್ನು ವಿಭಿನ್ನವಾಗಿ ಆಚರಿಸುವ ಮೂಲಕ ಕನ್ನಡದ ಕಂಪನ್ನು ಬೀರುತ್ತಿರುವ ತಂಡ ಇದೆ. ಇದರಲ್ಲಿ ಯಳಂದೂರು ಪಟ್ಟಣದ ಇಬ್ಬರು ಪುಟಾಣಿಗಳೂ ಸೇರಿದಂತೆ ನಾಲ್ವರು ಇದ್ದು ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಇವರು ಕನ್ನಡ ಪರ ವಿಭಿನ್ನ ಕಾರ್ಯಕ್ರಮವನ್ನು ವಿದೇಶಿ ನೆಲದಲ್ಲಿ ಬೀರುವ ಮೂಲಕ ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸುತ್ತಿದ್ದಾರೆ.

ಅಮೇರಿಕಾದ ನಾರ್ತ್ ಕ್ಯಾರೋಲಿನಾದಲ್ಲಿ ಕ್ಯಾರೋಲಿನ ಕನ್ನಡ ಬಳಗ ಕಟ್ಟಿಕೊಂಡಿರುವ ಇಲ್ಲಿನ ಕನ್ನಡಿಗರು ಪ್ರತಿ ನವೆಂಬರ್ ತಿಂಗಳಲ್ಲೂ ಇಲ್ಲಿ ವಿವಿಧ ಕನ್ನಡ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸುವ ಪರಿಪಾಠವನ್ನು ಬೆಳೆಸಿಕೊಂಡಿದ್ದಾರೆ. ಈ ಬಾರಿ ಪುಣ್ಯಕೋಟಿಯ ನೃತ್ಯ ರೂಪಕವನ್ನು ಇವರು ವೇದಿಕೆಯಲ್ಲಿ ಪ್ರಸ್ತುತ ಪಡಿಸಿದ್ದು ಇದು ಜನಮನ್ನಣೆ ಗಳಿಸಿದೆ.

ಸಿಲ್ಲಿ-ಲಲ್ಲಿ ಧಾರಾವಾಹಿ ಖ್ಯಾತಿಯ ನಮಿತಾರಾವ್ ಮತ್ತು ವಿಕ್ರಂ ಸೂರಿ ಇಲ್ಲಿನ ಕನ್ನಡ ಬಳಗಕ್ಕೆ ಕೇವಲ 3 ದಿನಗಳಲ್ಲಿ ಪುಣ್ಯಕೋಟಿ ನೃತ್ಯ ರೂಪಕಕ್ಕೆ ತರಬೇತಿ ನೀಡಿದ್ದು, ಇದನ್ನು ವೇದಿಕೆಯಲ್ಲಿ ಪ್ರಸ್ತುತ ಪಡಿಸಲಾಗಿದೆ.

ಈ ನೃತ್ಯ ರೂಪಕದಲ್ಲಿ ಯಳಂದೂರಿನ ಪುಟಾಣಿ ಸನ್ವಿತಾ ಶ್ರೀನಿವಾಸ್ ಪ್ರಸಾದ್ ಕರುವಿನ ಪಾತ್ರದಲ್ಲಿ, ಯಳಂದೂರು ಶ್ರೀನಿವಾಸ್ ಪ್ರಸಾದ್ ಗೊಲ್ಲನ ಪಾತ್ರದಲ್ಲಿ ಆಭಿನಯಿಸುವ ಮೂಲಕ ಜನಮನ್ನಣೆ ಗಳಿಸಿದ್ದಾರೆ. ಅಲ್ಲದೆ ಪಟ್ಟಣದ ಇತರೆ ಪ್ರತಿಭೆಗಳಾದ ಕುಸುಮಾ ಶ್ರೀನಿವಾಸ್ ಪುಟಾಣಿ ಮನ್ವಿತಾ ಶ್ರೀನಿವಾಸಪ್ರಸಾದ್, ಜಯ ಸುರೇಶ್, ಪಲ್ಲವಿ, ಹರೀಶ್, ದೀಪ್ತಿ ಅಶೋಕ್, ವಿದ್ಯಾ ಪಾಟೀಲ್, ವಿಶಾಲಿ ಕೃಷ್ಣ, ಗಾಯತ್ರಿ ವಿನಯ್, ರಶ್ಮಿಜಯ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಇದರೊಂದಿಗೆ ಕನ್ನಡ ನೃತ್ಯ ರೂಪಕಗಳು, ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಭರತ ನಾಟ್ಯ, ಚಲನಚಿತ್ರ ಗೀತೆಗಳಿಗೆ ನೃತ್ಯ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದ್ದು ನಮಗೆ ಇಲ್ಲಿ ಉತ್ತಮ ಬೆಂಬಲ ದೊರಕುತ್ತಿದೆ. ಇಲ್ಲಿನ ಸ್ಥಳೀಯರೂ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನಮಗೆ ಪ್ರೋತ್ಸಾಹ ನೀಡುತ್ತಾರೆ ಎನ್ನುತ್ತಾರೆ ಯಳಂದೂರು ಶ್ರೀನಿವಾಸ್ ಪ್ರಸಾದ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net