ಉಡುಪಿಯಲ್ಲಿ ನಟ ಹರೀಶ್​ ರಾಯ್​ ಅಂತ್ಯಕ್ರಿಯೆ

Harish 1
Published on

ತುಳು ಶಿವಳ್ಳಿ ಬ್ರಾಹ್ಮಣ ಸಂಪ್ರದಾಯದಂತೆ ವಿಧಿ-ವಿಧಾನ

ವಿಜಯವಾಣಿ ಸುದ್ದಿಜಾಲ ಉಡುಪಿ

ಕ್ಯಾನ್ಸರ್​ ಕಾಯಿಲೆಗೆ ತುತ್ತಾಗಿ ಬೆಂಗಳೂರಿನಲ್ಲಿ ಗುರುವಾರ (ನ.6) ಮೃತಪಟ್ಟಿದ್ದ ಕನ್ನಡ ಚಿತ್ರನಟ ಹರೀಶ್​ ರಾಯ್​ ಅವರ ಅಂತ್ಯಕ್ರಿಯೆ ಉಡುಪಿಯ ಬೀಡಿನಗುಡ್ಡೆ ಸ್ಮಶಾನದಲ್ಲಿ ಶುಕ್ರವಾರ (ನ.7) ನಡೆಯಿತು.

ಬೆಂಗಳೂರಿನ ಅಂಜನಾಪುರದಲ್ಲಿದ್ದ ಮನೆಯಿಂದ ಪಾರ್ಥಿವ ಶರೀರವನ್ನು ಉಡುಪಿಯ ಅಂಬಲಪಾಡಿಯಲ್ಲಿರುವ ಮೂಲ ಮನೆಗೆ ತರಲಾಗಿತ್ತು. ಸಾರ್ವಜನಿಕರಿಗೆ, ಆಪ್ತರಿಗೆ ಹಾಗೂ ಕುಟುಂಬದವರಿಗಾಗಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅಂಬಲಪಾಡಿಯ ನಿವಾಸದಲ್ಲಿ ಅವರ ತಾಯಿ ಮತ್ತು ಸಹೋದರ ವಾಸವಾಗಿದ್ದು, ಉಡುಪಿಯಲ್ಲೇ ಅಂತ್ಯಕ್ರಿಯೆ ನಡೆಸಲು ಕುಟುಂಬದವರು ತೀಮಾರ್ನಿಸಿದ್ದರು.

Harish 2
ತುಳು ಶಿವಳ್ಳಿ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಅಂತಿಮ ವಿಧಿ-ವಿಧಾನ ನಡೆಸಲಾಯಿತು. ಮನೆಯ ತುಳಸಿ ಕಟ್ಟೆಯ ಸಮೀಪದಲ್ಲಿ ಹರೀಶ್​ ಮೃತ ದೇಹ ಶುಚಿಗೊಳಿಸುವ ಕಾರ್ಯ ನಡೆಸಿ, ತೀರ್ಥ ನೀಡಿ ಅಗಲಿದ ಆತ್ಮದ ಶಾಂತಿಗಾಗಿ ಪತ್ನಿ, ಇಬ್ಬರು ಪುತ್ರರು, ಸಹೋದರ, ಸಹೋದರಿ ಹಾಗೂ ಕುಟುಂಬಸ್ಥರು ಪ್ರಾರ್ಥಿಸಿದರು.

ಕಿರಿಯ ಪುತ್ರ ತನ್ನ ತಂದೆಯ ಮೃತ ದೇಹದ ಪಕ್ಕದಲ್ಲಿ ಕಣ್ಣೀರಿಡುತ್ತ, ಅಪ್ಪನ ಗಡ್ಡ-ಮೀಸೆ ಸವರುತ್ತ ಕುಳಿತಿದ್ದನ್ನು ಕಂಡ ಸ್ಥಳೀಯರು ಹಾಗೂ ಕುಟುಂಬಸ್ಥರು ಕಣ್ಣೀರು ಸುರಿಸಿದರು. ಮನೆಯಲ್ಲಿದ್ದ ನಾಯಿಯನ್ನು ಹರೀಶ್​ ಬಹಳ ಪ್ರೀತಿಸುತ್ತಿದ್ದರು. ಹಾಗಾಗಿ ಅವರ ಸಹೋದರ ಸತೀಶ್​, ಆ ನಾಯಿಯನ್ನು ಮೃತದೇಹದ ಬಳಿ ತಂದಿದ್ದರು.

ನನ್ನ ಸಹೋದರ ಆ ಕಾಲದಲ್ಲಿ ಉಡುಪಿಯ ಹೀರೋ ಆಗಿದ್ದ. ಶ್ರೀಕೃಷ್ಣ ಮಠದ ಪರ್ಯಾಯದ ಸಂದರ್ಭದಲ್ಲಿ ವೇದಿಕೆಯಲ್ಲಿ ಕಾರ್ಯಕ್ರಮ ನೀಡುತ್ತಿದ್ದ. ಅನಾರೋಗ್ಯ ಕಡೆಗಣಿಸಿದ್ದೇ ಆತನ ಸಾವಿಗೆ ಕಾರಣವಾಯಿತು. ಆತನಿಗೆ ಮರಣದ ನಂತರ ಅಂಗಾಂಗ ದಾನ ಮಾಡುವ ಮನಸ್ಸಿತ್ತು. ಆದರೆ, ಕ್ಯಾನ್ಸರ್​ ಇದ್ದುದರಿಂದ ಸಾಧ್ಯವಾಗಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಚಿತ್ರರಂಗದಲ್ಲಿ ಪೋಷಕ ನಟನಾಗಿಯೇ ಅಪಾರ ಜನಪ್ರಿಯತೆ ಗಳಿಸಿದ್ದನು. | ಸತೀಶ್​ ಆಚಾರ್ಯ. ಮೃತ ಹರೀಶ್​ನ ಸಹೋದರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net