ಸ್ವತಃ ಕನ್ನಡರಾಮಯ್ಯ ಎಂದುಕೊಂಡರೆ ಸಾಲದು: ಸಿಎಂ ವಿರುದ್ಧ ಹೋರಾಟಗಾರರು ಹೀಗಂತಾ ಹೇಳಿದ್ದು ಏಕೆ?

Kannada fighters arrested Protest against state government mandya
Published on

ಮಂಡ್ಯ: ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಸುವಂತೆ ಜಾಗೃತಿ ಮೂಡಿಸುತ್ತಿದ್ದ ಕನ್ನಡಪರ ಸಂಘಟನೆಗಳ ಮುಖಂಡರನ್ನು ಬಂಧಿಸಿರುವ ರಾಜ್ಯಸರ್ಕಾರ ನಿಲುವು ಖಂಡಿಸಿ ಹಾಗೂ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ನಗರದಲ್ಲಿ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.

ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕುಳಿತು ಪ್ರತಿಭಟಿಸಿದ ಕಾರ್ಯಕರ್ತರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ಅಂಗಡಿ ಮುಂಗಟ್ಟು, ಮಾಲ್‌ಗಳ ನಾಮಫಲಕಗಳಲ್ಲಿ ಕನ್ನಡ ಬಳಸುವಂತೆ ಜಾಗೃತಿ ಮೂಡಿಸುತ್ತಿದ್ದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಸೇರಿದಂತೆ ನೂರಾರು ಕನ್ನಡ ಹೋರಾಟಗಾರರನ್ನು ಬಂಧಿಸಲಾಗಿದೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಕರುನಾಡ ಸೇವಕರು ಸಂಘದ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಇದು ಕೇವಲ ನಾಮಫಲಕಗಳ ಮೇಲೆ ಕನ್ನಡ ಅಳವಡಿಸುವ ಪ್ರಶ್ನೆಯ ಹೋರಾಟವಲ್ಲ. ಕನ್ನಡಿಗರ ಉದ್ಯೋಗದ ಭವಿಷ್ಯತ್ತಿನ, ಅಸ್ಮಿತೆಯ, ಉಳಿವಿನ ಹೋರಾಟವಾಗಿದೆ. ನೆರೆ ರಾಜ್ಯದ ಉದ್ದಿಮೆಗಳು ಕನ್ನಡ ನಾಡನ್ನು ಲೂಟಿ ಹೊಡೆಯುತ್ತಿವೆ. ಸರ್ಕಾರ ಎಲ್ಲ ಹಂತಗಳಲ್ಲೂ ಕನ್ನಡವನ್ನು ಕಡೆಗಣಿಸಲಾಗಿದೆ. ಪ್ರಶ್ನಿಸಿದವರಿಗೆ ಜೈಲಿಗೆ ನೂಕಲಾಗುತ್ತಿದೆ. ಸ್ವತಃ ಮುಖ್ಯಮಂತ್ರಿಗಳು ತಮ್ಮನ್ನು ಕನ್ನಡರಾಮಯ್ಯ ಎಂದು ಕರೆದುಕೊಳ್ಳುತ್ತಾರೆ. ಹಾಗಿದ್ದರೆ ಬಂಧಿಸಿರುವ ಕನ್ನಡ ಹೋರಾಟಗಾರರನ್ನು ಬಿಡುಗಡೆಗೊಳಿಸಲಿ, ಆಗ ಅವರು ಕನ್ನಡ ರಾಮಯ್ಯ ಎಂದು ತಮ್ಮನ್ನು ಕರೆದುಕೊಳ್ಳಲು ನೈತಿಕತೆ ಬರುತ್ತದೆ ಎಂದು ಕಿಡಿಕಾರಿದರು.

ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ, ಕನ್ನಡ ಪರ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಚಳವಳಿಗಾರರನ್ನು ಬಂಧಿಸಲಾಗಿದೆ. ಜೈಲು, ಕೇಸುಗಳಿಂದ ಹೋರಾಟಗಾರರನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಬಂಧಿಸಿರುವವರನ್ನು ಬಿಡುಗಡೆಗೊಳಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಯ ಮುಖಂಡರಾದ ಶಿವಳ್ಳಿ ಚಂದ್ರು, ಇಂಡುವಾಳು ಬಸವರಾಜು, ಲತಾ ಶಂಕರ್, ಪುನೀತ್, ಎಂ.ಎನ್.ಚಂದ್ರು, ಮನು ಬೂದನೂರು, ಬಾಬು, ಶೇಖರ್, ಸಿದ್ದೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net