ಕನ್ನಡ ಹೋರಾಟಗಾರರ ವಿರುದ್ಧ ಎ್ಐಆರ್

web 3
Published on

ಮರಾಠಿ ಪುಂಡರ ವಿರುದ್ಧ ಹೋರಾಟ ಎಎಸ್‌ಐನಿಂದಲೇ ದೂರು

ಚಿಕ್ಕಬಳ್ಳಾಪುರ: ಕನ್ನಡಿಗರ ಮೇಲೆ ಮರಾಠಿ ಪುಂಡರ ದಬ್ಬಾಳಿಕೆ ಖಂಡಿಸಿ, ಹೋರಾಟ ನಡೆಸಿದ ಕನ್ನಡಪರ ಸಂಘಟನೆಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ.

ಎಎಸ್‌ಐ ಜಿ.ಶಂಕರಪ್ಪ ನೀಡಿದ ದೂರಿನಂತೆ ನಗರ ಠಾಣೆಯಲ್ಲಿ ಜಿಲ್ಲಾ ಕನ್ನಡ ಸೇನೆ ಅಧ್ಯಕ್ಷ ವಿ.ರವಿಕುಮಾರ್, ಉಪಾಧ್ಯಕ್ಷ ಎಸ್‌ಬಿಎಂ ಮಂಜುನಾಥ್, ತಾಲೂಕು ಕರವೇ (ಶಿವರಾಮೇಗೌಡ ಬಣ) ಅಧ್ಯಕ್ಷ ಲೋಕೇಶ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ನಾಡಿನ ಪರವಾಗಿ ನಡೆಸಿದ ಹೋರಾಟಗಾರರ ವಿರುದ್ಧ ನಾಡಿನ ರಕ್ಷಕರೇ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಪೊಲೀಸ್ ದೂರಿನಲ್ಲೇನಿದೆ?

ಮಾ.22ರಂದು ಬೆಳಿಗ್ಗೆ 5ರ ವೇಳೆ ಗಸ್ತು ಕರ್ತವ್ಯದಲ್ಲಿದ್ದಾಗ ನಗರದ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಕನ್ನಡ ಸೇನೆ ಅಧ್ಯಕ್ಷ ವಿ.ರವಿಕುಮಾರ್, ಉಪಾಧ್ಯಕ್ಷ ಎಸ್‌ಬಿಎಂ ಮಂಜುನಾಥ್, ತಾಲೂಕು ಕರವೇ ಅಧ್ಯಕ್ಷ ಲೋಕೇಶ್ ಅಕ್ರಮವಾಗಿ ಗುಂಪು ಕಟ್ಟಿಕೊಂಡು ರಸ್ತೆ ಮಧ್ಯೆ ನಿಂತಿದ್ದು, ಶಿವಸೇನೆಯ ನಾಯಕ ಉದ್ಧವ್ ಠಾಕ್ರೆ ಪ್ರತಿಕೃತಿಗೆ ಬೆಂಕಿ ಹಚ್ಚಿ, ಮಹಾರಾಷ್ಟ್ರದ ವಿರುದ್ಧ ಕೂಗಿ ಪ್ರತಿಭಟಿಸಿದ್ದಾರೆ. ಇದಕ್ಕೆ ಅನುಮತಿ ಪಡೆದುಕೊಳ್ಳಲಾಗಿದೆಯೇ ಎಂದು ಪ್ರಶ್ನಿಸಿದಾಗ ಇಲ್ಲ ಎಂಬ ಉತ್ತರವನ್ನು ನೀಡಿದ್ದು ಇದರಿಂದ ಸ್ಥಳವನ್ನು ತೆರವುಗೊಳಿಸಲು ಸೂಚಿಸಿದರೂ ಲೆಕ್ಕಿಸದೇ ಪ್ರತಿಭಟಿಸಲಾಗಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಎಸ್‌ಐ ಶಂಕರ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಬೆಳಗ್ಗೆ 10 ಗಂಟೆ ಬದಲಿಗೆ ಮುಂಜಾನೆ 5 ಗಂಟೆಯಲ್ಲೇ ಪ್ರತಿಭಟಿಸಲಾಯಿತು. ಇದಕ್ಕೆ ಆಕ್ರೋಶಗೊಂಡ ನಾಡಿನ ಪೊಲೀಸ್ ರಕ್ಷಕರು ಹೋರಾಟಗಾರರಿಗೆ ಬೆದರಿಕೆಯನ್ನೊಡ್ಡಿದ್ದಾರೆ. ಈಗ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.

ಸಂಘಟನೆಗಳ ಆಕ್ರೋಶ

ಕನ್ನಡಪರ ಸಂಘಟನೆಗಳ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಕನ್ನಡಪರ ಹೋರಾಟವನ್ನು ಬೆಂಬಲಿಸಬೇಕು ಹಾಗೂ ಹೋರಾಟಗಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬ ಸಲಹೆ ನೀಡಿದ್ದರು. ನಾಡು ನುಡಿಯ ವಿಚಾರವಾಗಿ ಧಕ್ಕೆ ಬಂದಾಗಲೆಲ್ಲ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸುತ್ತಿದ್ದು ಇದಕ್ಕೆ ಪೊಲೀಸರ ಅವಾಚ್ಯ ಶಬ್ದಗಳ ನಿಂದನೆ, ಠಾಣೆಯಲ್ಲಿ ಪ್ರಕರಣ ದಾಖಲು, ವಿಚಾರಣೆಗೆ ಅಲೆದಾಟ ಸೇರಿದಂತೆ ನಾನಾ ಸಮಸ್ಯೆ ಅನುಭವಿಸುವಂತಾಗಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.

"ಕರ್ನಾಟಕ ಬಂದ್ ಆಚರಣೆ ವೇಳೆ ಚಿಕ್ಕಬಳ್ಳಾಪುರದಲ್ಲಿ ನಾಡು ನುಡಿಯ ವಿಚಾರವಾಗಿ ಪ್ರತಿಭಟಿಸಲಾಗಿದೆ. ಇದಕ್ಕೆ ನಾಡಿನ ರಕ್ಷಕ ಪೊಲೀಸರೇ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ." - ವಿ.ರವಿಕುಮಾರ್, ಜಿಲ್ಲಾ ಕನ್ನಡಸೇನೆ ಜಿಲ್ಲಾಧ್ಯಕ್ಷ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net