ಕನ್ನಡ ಬೆಳೆಸಲು ಸರ್ಕಾರಿ ಶಾಲೆ ಉಳಿಸಿ: ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಪ್ರಾಂತಪಾಲ ಕೆ.ಟಿ.ಹನುಮಂತು ಹೇಳಿಕೆ

Kannada festival Mandya
Published on

ಮಂಡ್ಯ: ಸರ್ಕಾರಿ ಶಾಲೆ ಮತ್ತು ಕಾಲೇಜುಗಳು ಉಳಿದರೆ ಮಾತ್ರ ಕನ್ನಡ ಭಾಷೆ ಬೆಳೆಯಲು ಸಾಧ್ಯ ಎಂದು ಅಂತಾರಾಷ್ಟ್ರೀಯ ಆಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಅಭಿಪ್ರಾಯಪಟ್ಟರು.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು(ಕಲ್ಲು ಕಟ್ಟಡ) ಸಭಾಂಗಣದಲ್ಲಿ ಅಸೋಷಿಯೇಷನ್ ಆ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್, ನಂಜಮ್ಮ ಮೋಟೆಗೌಡ ಚಾರಿಟಬಲ್ ಟ್ರಸ್ಟ್ ಕೊಪ್ಪ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ವತಿಯಿಂದ 50ನೇ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಹಾಗೂ 69ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಕನ್ನಡ ಹಬ್ಬ, ಅಭಿನಂದನೆ, ಹಾಸ್ಯ, ಸಂಗೀತ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಖಾಸಗಿ ಶಾಲೆ ಮತ್ತು ಕಾಲೇಜಿನಲ್ಲಿ ಕನ್ನಡ ಭಾಷೆಯನ್ನು ವಿಷಯವಾಗಿ ಕಲಿಯುತ್ತಾರೆ. ಉಳಿದ ವಿಷಯಗಳು ಇಂಗ್ಲೀಷ್‌ನಲ್ಲಿ ಅಭ್ಯಾಸ ಮಾಡುತ್ತಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಕನ್ನಡ ಭಾಷೆಯಲ್ಲಿ ಎಲ್ಲ ವಿಷಯಗಳನ್ನು ಕಲಿಯುತ್ತಾರೆ. ಇಂಗ್ಲೀಷ್ ಭಾಷೆಯನ್ನು ವಿಷಯವಾಗಿ ಕಲಿಯುತ್ತಾರೆ ಎಂದು ನುಡಿದರು.

ರಾಜ್ಯದಲ್ಲಿ ಸುಮಾರು 7 ಕೋಟಿ ಜನಸಂಖ್ಯೆಯಲ್ಲಿ 4 ಕೋಟಿ ಜನ ಕನ್ನಡ ಮಾತನಾಡುತ್ತಾರೆ. ಉಳಿದ 3 ಕೋಟಿ ಜನ ಕನ್ನಡ ಮಾತನಾಡಲ್ಲ. ಅವರಿಗೆ ಕಲಿಸುವ ಕಾರ್ಯವಾಗಬೇಕು, ದೌರ್ಜನ್ಯದಿಂದ ಕನ್ನಡ ಕಲಿಸಬಾರದು. ಪ್ರೀತಿ, ವಿಶ್ವಾಸದಿಂದ ಕನ್ನಡಭಾಷೆಯನ್ನು ಕಲಿಸಬೇಕು ಎಂದು ಸಲಹೆ ನೀಡಿದರು.

ಸಂಸ್ಥೆಯ ನಿರ್ದೇಶಕ ಡಾ.ನಾಗರಾಜು ವಿ ಬೈರಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ಕನ್ನಡ ಭಾಷೆ ವಿಷಯದಲ್ಲಿ 125ಕ್ಕೆ 125 ಅಂಕ ಪಡೆದು ಕೀರ್ತಿ ಸಾಧಿಸುತ್ತಿದ್ದಾರೆ. ಇದು ಭಾಷೆಯ ಅಭಿಮಾನ ಮತ್ತು ಕೌಶಲ ಜ್ಞಾನವಾಗಿದೆ. ಕನ್ನಡತವನ್ನು ಬೆಳೆಸುವ ಸೌಭಾಗ್ಯವಂತವಾಗಿದ್ದಾರೆ ಎಂದು ನುಡಿದರು. ಇಂಗ್ಲೀಷ್ ಭಾಷೆಯಿಂದ ಶೇ.5ರಷ್ಟು ಜನರಿಗೆ ಉದ್ಯೋಗ ಲಭ್ಯವಾಗಿರಬಹುದು, ಉಳಿದ ಶೇ.95ರಷ್ಟು ಜನರಿಗೆ ಕನ್ನಡವೇ ಅನ್ನಕೊಡುತ್ತಿದೆ, ಉದ್ಯೋಗ ನೀಡುತ್ತಿದೆ, ಕನ್ನಡೇತರರಿಗೂ ಕನ್ನಡ ಭಾಷೆ ಕಲಿಸುವ ವಾತಾವರಣ ನಮ್ಮಿಂದ ಉಂಟಾಗಬೇಕು ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಎಚ್.ಪಿ.ತಿಮ್ಮೇಗೌಡ, ಮಿಮಿಕ್ರಿ ಕಲಾವಿದ ರಮೇಶ್‌ಬಾಬು, ಗಾಯಕಿಯರಾದ ರಶ್ಮಿ ಚಿಕ್ಕಮಗಳೂರು, ಸಿಂಚನಾ ಗೋಪಾಲ್, ಅಲಯನ್ಸ್ ಸಂಸ್ಥೆ ಖಜಾಂಚಿ ಟಿ.ಎನ್.ರಕ್ಷಿತ್‌ರಾಜ್, ಪ್ರತಿಭಾಂಜಲಿ ಸಂಸ್ಥೆಯ ಅಧ್ಯಕ್ಷ ಪ್ರೊ.ಡೇವಿಡ್, ಉಪನ್ಯಾಸಕ ನಾಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net